ಮಂಡ್ಯ: ಚುನಾವಣಾ ಕಣದಿಂದ ಹಿಂದೆ ಸರಿದ ಸಚ್ಚಿದಾನಂದ; ರಮೇಶ್‍ಬಾಬು ಗೆ ಬೆಂಬಲ ಘೋಷಣೆ
ಮಂಡ್ಯ,ಎ.10: ಶ್ರೀರಂಗಪಟ್ಟಣದ ಕಾಂಗ್ರೆಸ್ ಟಿಕೆಟ್‍ಗೆ ಪಟ್ಟುಹಿಡಿದಿದ್ದ ಕೆಪಿಸಿಸಿ ಸದಸ್ಯ ಇಂಡುವಾಳು ಸಚ್ಚಿದಾನಂದ ಹಿಂದೆ ಸರಿದಿದ್ದು, ರಮೇಶ್‍ಬಾಬುಗೆ ಬೆಂಬಲ ಘೋಷಿಸಿದ್ದಾರೆ.
ಅನ್ಯ ಪಕ್ಷದವರಿಗೆ ಟಿಕೆಟ್ ನೀಡಬಾರದೆಂದು ಪಕ್ಷದ ವರಿಷ್ಠರಿಗೆ ಸವಾಲು ಹಾಕಿ ಬಂಡಾಯದ ಬಾವುಟ ಬೀಸಿದ್ದ ಸಚ್ಚಿದಾನಂದ ಅವರ ಜನತೆ ನಡೆಸಿದ ಸಂಧಾನ ಯಶಸ್ವಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಸಲಹೆ ಮೇರಿಗೆ ಸಚಿವ ಎಂ.ಬಿ.ಪಾಟೀಲ್, ಮಾಜಿ ಶಾಸಕರಾದ ಚಲುವರಾಯಸ್ವಾಮಿ, ಜಮೀರ್ ಅಹಮದ್ ನಡೆಸಿದ ಸಂಧಾನಕ್ಕೆ ಸಚ್ಚಿದಾನಂದ ಸ್ಪಂದಿಸಿದರು. ನಂತರ, ತನ್ನ ಮನೆಯ ಎದುರೇ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚ್ಚಿದಾನಂದ, ನಾನು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ರಮೇಶ್‍ಬಾಬು ಬೆಂಬಲಿಸುವುದಾಗಿ ಘೋಷಿಸಿದರು.
ಪಕ್ಷದ ಕಾರ್ಯಕರ್ತರ ಜತೆಗೂಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು, ನನ್ನ ಬೆಂಬಲಿಗರು ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.