ಸಕಲೇಶಪುರ: ಸೀರೆ ಹಂಚಿ ಚುನಾವಣೆ ಗೆಲ್ಲಲು ಅಸಾಧ್ಯ; ಬಿಜೆಪಿ ವಿರುದ್ದ ಮಹಿಳೆಯರ ಅಕ್ರೋಶ

Update: 2018-04-11 11:30 GMT

ಸಕಲೇಶಪುರ,ಎ.11: ಸೀರೆ ಹಂಚಿ ಚುನಾವಣೆ ಗೆಲ್ಲಲು ಅಸಾಧ್ಯ. ಇದನ್ನು ಬಿಜೆಪಿ ಅರ್ಥಮಾಡಿಕೊಂಡು ಚುನಾವಣೆ ಎದುರಿಸಲಿ ಎಂದು ಆಲೂರು ತಾಲೂಕು ಕುಂದೂರು ಗ್ರಾಮದ ಮಹಿಳೆಯರು ಅಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಉಪವಿಭಾಗಧಿಕಾರಿ ಕಚೇರಿಗೆ ತೆರಳಿ ಬಿಜೆಪಿ ಕಾರ್ಯಕರ್ತರು ರಾತ್ರಿ ವೇಳೆ ಹಂಚಿದ್ದಾರೆ ಎನ್ನಲಾದ ಸೀರೆ ಮತ್ತು ಬ್ಯಾಗ್‍ಗಳನ್ನು ಹಿಂದಿರುಗಿಸಲು ಬಂದಿದ್ದ ಗ್ರಾಮಸ್ಥರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಜೀವನದಲ್ಲಿ ಇಂತಹ ಪರಿಸ್ಥಿತಿ ನೋಡಿಲ್ಲ. ಈ ಕಳಪೆ ಸೀರೆಗಾಗಿ ನಾವು ಬಿಜೆಪಿಗೆ ಓಟು ಹಾಕಬೇಕೆ ಎಂದು ಪ್ರಶ್ನಿಸಿದರು. ರಾತ್ರಿ ಮನೆಯ ಬಾಗಿಲು ಬಡಿದು ಕಳಪೆ ದರ್ಜೆಯ ಸೀರೆ ಇರುವ ಬ್ಯಾಗ್‍ಗಳನ್ನು ಬಿಜೆಪಿ ಕಾರ್ಯಕರ್ತರು ಇರಿಸಿದ್ದಾರೆ. ಬ್ಯಾಗ್ ಮೇಲೆ ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಮುಖಂಡ ಉದಯ್ ಗೌಡ, ಬಿಜೆಪಿ ಸಂಭವನೀಯ ಅಭ್ಯರ್ಥಿ ನಾರ್ವೆ ಸೋಮ್‍ಶೇಖರ್ ಚಿತ್ರಗಳಿವೆ. ಹಾಗೂ ಕಮಲದ ಚಿಹ್ನೆಯ ಬ್ಯಾಗ್‍ನಲ್ಲಿ ಸೀರೆ ಇರಿಸಿ ವಿತರಿಸಲಾಗಿದೆ ಎಂದು ಆರೋಪಿಸಿದರು.  

ನನಗೆ ಸೀರೆ ಕೊಡಿಸಲು ನನ್ನ ಗಂಡನಿದ್ದಾನೆ, ಮಕ್ಕಳಿದ್ದಾರೆ. ಈ ಸೀರೆ ಪಡೆದು ಬಿಜೆಪಿಗೆ ಓಟು ಹಾಕಬೇಕೆ ? ನನಗೆ ಇಷ್ಟ ಬಂದ ವ್ಯಕ್ತಿಗೆ ಓಟು ಹಾಕುತ್ತೇನೆ. ನನ್ನ ಜೀವನದಲ್ಲಿ ಇಂತಹ ಪರಿಸ್ಥಿತಿ ನೋಡಿರಲಿಲ್ಲ. ಒಂದು ಸೀರೆಗೆ ನಾನು ಓಟು ಮಾರಿಕೊಳ್ಳಬೇಕೆ ಎಂದು ಪ್ರಶ್ನಿಸಿದರು . ಹಣ ಹೆಂಡ ಸೀರೆಗೆ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ. ಪ್ರಾಮಾಣಿಕ ವ್ಯಕ್ತಿಗೆ ನಿಮ್ಮ ಮತವನ್ನು ನೀಡಿ ಎಂದು ತಾಲೂಕಿನ ಜನರಲ್ಲಿ ಮನವಿ ಮಾಡಿದರು. 

ಉಪವಿಭಾಗಧಿಕಾರಿ ಹೇಳಿಕೆ: ಜನರಿಗೆ ಆಮೀಷ ಒಡ್ಡುವ ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ದ ನಾವು ಕ್ರಮ ಕೈಗೊಳ್ಳುತ್ತೇವೆ. ಕುಂದೂರು ಸೀರೆ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಆಲೂರು ಠಾಣೆಯಲ್ಲಿ ದೂರು ದಾಖಲಿಸಲಾಗುವುದು. ಸೀರೆ ಹಂಚಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಕುಂದೂರು ಗ್ರಾಮದ ಮಹಿಳೆಯರಾದ ಭಾಗ್ಯಮ್ಮ, ಜ್ಯೋತಿ, ಲಕ್ಷ್ಮಿ ಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News