×
Ad

ಕಾಂಗ್ರೆಸ್‍ನಿಂದ ದಲಿತರ ಉದ್ಧಾರ ಸಾಧ್ಯವಿಲ್ಲ: ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್

Update: 2018-04-11 18:21 IST

ಚಿಕ್ಕಮಗಳೂರು, ಎ.11: ಕಾಂಗ್ರೆಸ್ ಪಕ್ಷ ದಲಿತರ ಪರವೆಂದು ಮೇಲ್ನೋಟಕ್ಕೆ ಕಂಡರೂ ಅವರ ಹಿಡನ್ ಅಜೆಂಡಾ ಬೇರೆಯೇ ಇದೆ. ಶ್ರೀಮಂತರ, ಭೂಮಾಲಕರ, ಉದ್ಯಮಿಗಳ ಹಿತಕಾಯುವುದೇ ಕಾಂಗ್ರೆಸ್‍ನ ಗುರಿಯಾಗಿದೆ. ಅಂತಹ ಪಕ್ಷದಿಂದ ದಲಿತರ ಉದ್ಧಾರ ಸಾಧ್ಯವಿಲ್ಲ. ಸಾಧ್ಯವಾಗಿದ್ದರೇ 60 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ಸಿಗರು ದಲಿತರೊಬ್ಬರನ್ನು ರಾಜ್ಯದ ಸಿಎಂ ಆಗಿ ಮಾಡುತ್ತಿದ್ದರು. ಈ ಪಕ್ಷ ದಲಿತರನ್ನು ಕೇವಲ ಮತಗಳಿಕೆಗೋಸ್ಕರ ಬಳಸಿಕೊಳ್ಳುವ ಉದ್ದೇಶದಿಂದ ದಲಿತರ ಪರ ಎಂದು ಬಿಂಬಿಸಿಕೊಳ್ಳುತ್ತಿದೆ ಎಂದು ರಾಜ್ಯ ಛಲವಾದಿ ಮಹಾ ಸಂಘದ ಸಂಸ್ಥಾಪಕ, ಬಿಜೆಪಿ ಮುಖಂಡ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಆರೋಪಿಸಿದರು.

ಬುಧವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಬಿಜೆಪಿ ಎಸ್ಸಿ ಮೋರ್ಚಾದ ವತಿಯಿಂದ ಹಮ್ಮಿಕೊಂಡಿದ್ದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ದೊಡ್ಡ ಆಸೆ ದಲಿತರು ಈ ದೇಶದ ಚುಕ್ಕಾಣಿ ಹಿಡಿಯಬೇಕು ಎಂಬುದಾಗಿದೆ. ಆದರೆ 60ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಏನು ಮಾಡಿತು? ಡಾ.ಬಿ.ಆರ್. ಅಂಬೇಡ್ಕರ್ ರವರನ್ನೇ ಚುನಾವಣೆಯಲ್ಲಿ ಸೋಲಿಸುವ ಕೆಲಸ ಮಾಡಿತು. ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಆಗುತ್ತಾರೆ ಎಂಬ ಭಯದಿಂದ ಕಾಂಗ್ರೆಸಿಗರೇ ಕುತಂತ್ರ ಮಾಡಿ ಅವರನ್ನು ಸೋಲಿಸಿದರು. ಇಂಥವರಿಂದ ದಲಿತರ ಉದ್ದಾರ ಸಾಧ್ಯವೇ ಎಂದು ಪ್ರಶ್ನಿಸಿದರು.

ಮೋದಿಯವರು ಅಧಿಕಾರಕ್ಕೆ ಬಂದಮೇಲೆ ಡಾ.ಬಿ.ಆರ್.ಅಂಬೇಡ್ಕರ್ ರವರು ವಿದ್ಯಾಭ್ಯಾಸ ನಡೆಸಿದ ಸ್ಥಳ, ಅವರ ವಾಸಸ್ಥಳ ಸೇರಿದಂತೆ ಪಂಚಧಾಮಗಳನ್ನು ಅಭಿವೃದ್ಧಿ ಪಡಿಸಿ ವಿಶ್ವದಲ್ಲಿಯೇ ಡಾ. ಬಿ.ಆರ್. ಅಂಬೇಡ್ಕರ್ ರವರಿಗೆ ಗೌರವ ತರುವ ಕೆಲಸ ಮಾಡಿದರು. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪರವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ದಲಿತರ ಕಾಲನಿಗಳು ಅಭಿವೃದ್ಧಿಯಾದವು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ.ರವಿಯವರು ದಲಿತರ ಉದ್ದಾರಕ್ಕೆ ಶ್ರಮಿಸಿದ್ದಾರೆ. ಎಪಿಎಂಸಿ ಹಾಗೂ ನಗರಸಭೆಗಳಲ್ಲಿ ದಲಿತರಿಗೆ ಅಧಿಕಾರದ ಚುಕ್ಕಾಣಿ ನೀಡಿದ ಆದರ್ಶ ಶಾಸಕ ಸಿ.ಟಿ.ರವಿಯವರು ಎಂದರೆ ತಪ್ಪಾಗಲಾರದು. ಸಿ.ಟಿ.ರವಿಯವರು ರಾಜ್ಯದ ಪ್ರಾಮಾಣಿಕ ಶಾಸಕ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು.

ಅನಂತ್‍ಕುಮಾರ್ ಹೆಗ್ಡೆಯವರು ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದು ಹೇಳಿಲ್ಲ. ಇದುವರೆಗೂ ಕಾಲ ಕಾಲಕ್ಕೆ ಸುಮಾರು 82 ಬಾರಿ ಸಂವಿಧಾನವನ್ನು ತಿದ್ದುಪಡಿಮಾಡಲಾಗಿದೆ. ಅದರಂತೆ ಸನ್ನಿವೇಶಕ್ಕೆ ತಕ್ಕಂತೆ ತಿದ್ದುಪಡಿ ಮಾಡತ್ತೇವೆ ಎಂದಿದ್ದಾರೇಯೇ ಹೊರತು ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದಿಲ್ಲ. ಅದನ್ನೇ ಕಾಂಗ್ರೆಸ್ ನವರು ತಿರುಚಿ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದರು ಎಂದರು.

ಕಾಂಗ್ರೆಸ್ ನವರು ದುಡ್ಡಿನ ಹೊಳೆ ಹರಿಸಿ, ನಿಮಗೆ ಆಮಿಷ ಒಡ್ಡುತ್ತಾರೆ. ಆ ಆಮಿಷಗಳಿಗೆ ನೀವು ಬಲಿಯಾಗಬೇಡಿ. ದಲಿತರ ಉದ್ದಾರ ಬಿಜೆಪಿಯಿಂದ ಮಾತ್ರ ಸಾಧ್ಯ. ಆದ್ದರಿಂದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕರೆ ನೀಡಿದರು.

ಮಾಜಿ ಸಚಿವ ನಾರಾಯಣಸ್ವಾಮಿ ಮಾತನಾಡಿ, ಬಿಜೆಪಿ ರಾಜ್ಯದಲ್ಲಿ 7ವರ್ಷ ಆಡಳಿತ ನಡೆಸಿದೆ. ಕೇಂದ್ರದಲ್ಲಿ 11 ವರ್ಷ ಆಡಳಿತ ನಡೆಸಿದೆ. ಈ ಅಲ್ಪಕಾವಧಿಯಲ್ಲಿ ದಲಿತರ ಏಳಿಗೆಗೆ ಬಿಜೆಪಿ ಶ್ರಮಿಸಿದೆ. ನನ್ನಂತ ಒಬ್ಬ ಸಾಮಾನ್ಯ ವ್ಯಕ್ತಿಗೂ ಕೂಡ ಪಕ್ಷ ಟಿಕೆಟ್ ನೀಡುವ ಮೂಲಕ ಸಾಮಾನ್ಯ ವ್ಯಕ್ತಿಗೂ ಅವಕಾಶ ಕಲ್ಪಿಸಿದೆ. ಸಿಎಂ ಸಿದ್ದರಾಮಯ್ಯರವರು ಇಂದಿರಾ ಕ್ಯಾಂಟೀನ್ ತೆರೆದು ಕೆಲವು ಮಂದಿಗೆ ಊಟ ನೀಡಿ ರಾಜ್ಯವನ್ನು ಹಸಿವು ಮುಕ್ತ ಮಾಡಿದ್ದೇವೆಂದು ಹೇಳುತ್ತಾರೆ. ಕೇಂದ್ರ ಸರ್ಕಾರ ಅನುದಾನದಲ್ಲಿ ಅಕ್ಕಿ ನೀಡಿ ನಾವೇ ಉಚಿತ ಅಕ್ಕಿ ನೀಡುತ್ತಿದ್ದೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಜಮ್ಮುಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದರು. ಶೇ.90 ಭಾಗ ಗೆಲುವು ಸಾಧಿಸಿದ್ದೇವೆ. ಹೆಚ್ಚಿನ ಸಂಖ್ಯೆಯ ಯುವಕರು ಬಿಜೆಪಿ ಪರವಿದ್ದಾರೆ. ಈ ಬಾರಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಬಿಜೆಪಿ ಕೇವಲ ಅಧಿಕಾರ ಹಿಡಿಯಲು ಸ್ಥಾಪಿತವಾದ ಪಕ್ಷವಲ್ಲ. ಸರ್ವತೋಮುಖ ಅಭಿವೃದ್ಧೀಯೇ ಪಕ್ಷದ ಗುರಿ. ಜನರ ಬದುಕಿನಲ್ಲಿ ಬದಲಾಗಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬದಲಾಗಬೇಕು ಅದೇ ಬಿಜೆಪಿ ಪಕ್ಷದ ಉದ್ದೇಶ. ಇಂದು ಶೇ.90ರಷ್ಟು ಜನರು ಬ್ಯಾಂಕ್ ಖಾತೆ ಹೊಂದಿದ್ದಾರೆ. 12 ರೂ. ವಿಮೆ ಮಾಡಿಸಲಾಗಿದೆ. ಮುದ್ರಾ ಯೋಜನೆಯಡಿಯಲ್ಲಿ ಉದ್ಯೋಗ ಸಾಲ ನೀಡಲಾಗುತ್ತಿದೆ. ಬಡವರ ದಲಿತರ ಉದ್ದರಕ್ಕಾಗಿ ಇಷ್ಟೆಲ್ಲ ಯೋಜನೆ ಜಾರಿಗೆ ತಂದ ಬಿಜೆಪಿ ಸರ್ಕಾರ ದಲಿತರ ವಿರೋಧಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ತಾವು ಎಂದು ಕೂಡ ದ್ವೇಷದ ರಾಜಕಾರಣ ಮಾಡಿಲ್ಲ. ಪ್ರೀತಿಯ ರಾಜಕಾರಣ ಮಾಡಿದ್ದೇನೆ. ಗ್ರಾಮ ವಾಸ್ತವ್ಯ ಮಾಡಿದಾಗ ಅದನ್ನು ವಿರೋಧ ಪಕ್ಷದವರು ಟೀಕಿಸಿದರು. ಜಾತಿ ಜಾತಿ ಮಧ್ಯೆ ಜಗಳ ಮಾಡಿಸುವ ಕೆಲಸ ಮಾಡಿಲ್ಲ. ದಲಿತ ದೌರ್ಜನ್ಯಕ್ಕೆ ಅವಕಾಶ ನೀಡಿಲ್ಲ. ನಂಬಿಕೆಯ ರಾಜಕಾರಣ ಮಾಡಿದ್ದೇನೆ ಎಂದರು.

ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿದರು. ಸಮಾರಂಭದಲ್ಲಿ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಜೆ.ಡಿ.ಲೋಕೇಶ್, ಬಿಜೆಪಿ ಮುಖಂಡರಾದ ಕೋಟೆ ರಂಗನಾಥ್, ಜಸಿಂತಾ ಅನಿಲ್‍ಕುಮಾರ್, ಸೋಮಶೇಖರ್, ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್, ಹಿರಿಗಯ್ಯ, ಮುತ್ತಯ್ಯ, ಹೊನ್ನಬೋವಿ, ಬೆಳವಾಡಿ ರವೀಂದ್ರ, ಮೀನಾಕ್ಷಿ ಮಂಜುನಾಥ್, ಹಿರೇಮಗಳೂರು ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.

ಶಾಸಕನಾಗಿ ಜಿಗ್ನೇಶ್ ಮೇವಾನಿ ಏನೂ ಮಾಡಿಲ್ಲ: 

ಗುಜರಾತ್ ಶಾಸಕ ಜಿಗ್ನೇಶ್ ಗೆ ಗುಜರಾತ್‍ನಲ್ಲಿ ಏನೂ ಮಾಡಲು ಆಗಿಲ್ಲ. ಈಗ ಕರ್ನಾಟಕದಲ್ಲಿ ಬಿಜೆಪಿ ಸೋಲಿಸುತ್ತೇವೆ ಎಂದು ಓಡಾಡುತ್ತಿದ್ದಾರೆ. ಮೀಸಲಾತಿಯಡಿಯಲ್ಲಿ ಎಂಎಲ್‍ಎ ಆದ ಅವರನ್ನು ಮೊದಲ ಆದ್ಯತೆ ಏನು ಎಂದು ಮಾದ್ಯಮದವರು ಕೇಳಿದರೆ ನೀರು ಕೊಡಿಸುತ್ತೇವೆ, ಮೂಲಭೂತ ಸೌಕಭ್ಯ ಕೊಡಿಸುತ್ತೇವೆ ಎನ್ನುತ್ತಾರೆ. ಯಾಕೆ ಅವರಿಗೆ ದಲಿತರ ಸಮಸ್ಯೆ ವಿರುದ್ಧ ಹೋರಾಟ ಮಾಡಬೇಕೆಂದು ಆನಿಸಿಲ್ಲವೇ? ದಲಿತರ ಸಮಸ್ಯೆ ತಿಳಿದಿಲ್ಲವೇ? ಮೋದಿಯವರ ವಿರುದ್ಧ  ಹುಚ್ಚನಂತೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಚಿತ್ರದುರ್ಗದಲ್ಲಿ ಮೋದಿಯವರು ಸಮಾರಂಭಕ್ಕೆ ಬಂದರೆ ಗಲಾಟೆ ಮಾಡಿ ಎಂದು ಹೇಳುವ ನಾಯಕ ನಮಗೆ ಬೇಡ. ನಮ್ಮನ್ನು ಒಳ್ಳೆಯ ದಾರಿಯಲ್ಲಿ ಕೊಂಡೊಯ್ಯುವ ನಾಯಕ ಬೇಕು.
- ಕೆ.ಶಿವರಾಮ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News