ಧಾರವಾಡ: ಜಾಹೀರಾತು ಪ್ರಸಾರಕ್ಕೆ ಮಾಧ್ಯಮ ಪ್ರಮಾಣೀಕರಣ ಕಡ್ಡಾಯ; ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ
ಧಾರವಾಡ, ಎ.11: ರಾಜಕೀಯ ಪ್ರಚಾರದ ಪತ್ರಿಕಾ ಜಾಹೀರಾತು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತು ಹಾಗೂ ಸಾಮಾಜಿಕ ಜಾಲತಾಣಗಳು, ಮೊಬೈಲ್ ಎಸ್‌ಎಂಎಸ್, ಇ-ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ಬುಧವಾರ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕೇಬಲ್ ಟಿವಿ ಪ್ರಸಾರಕರು, ಮೊಬೈಲ್ ನೆಟ್‌ವರ್ಕ್ ಹಾಗೂ ಬಲ್ಕ್ ಎಸ್‌ಎಂಎಸ್ ಪೂರೈಕೆದಾರರಿಗೆ ಮಾಧ್ಯಮ ಪ್ರಮಾಣೀಕರಣದ ಕುರಿತು ಅರಿವು ಮೂಡಿಸುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾಹೀರಾತುಗಳಿಗೆ ಕಡ್ಡಾಯವಾಗಿ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ನಿಗದಿತ ನಮೂನೆ-ಎ ದಲ್ಲಿ ಅರ್ಜಿ ಸಲ್ಲಿಸಿ, ನಮೂನೆ -ಬಿ ಯಲ್ಲಿ ಅನುಮತಿ ಪಡೆಯಬೇಕು. ಜಾಹೀರಾತಿನ ವೆಚ್ಚವನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಜಾಹೀರಾತು ಅನುಮತಿ ಹಾಗೂ ಪಾವತಿ ಸುದ್ದಿಯ ಮೇಲೆ ನಿಗಾವಹಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ ಎಂದು ಅವರು ತಿಳಿಸಿದರು.
ಪಾವತಿ ಸುದ್ದಿ ಪ್ರಕಟಿಸುವುದು ಪ್ರಜಾ ಪ್ರಾತಿನಿಧಿಕ ಕಾಯ್ದೆ 1951ರಡಿ ಶಿಕ್ಷಾರ್ಹ ಅಪರಾಧವಾಗಿದೆ. ಪಾವತಿ ಸುದ್ದಿಯು ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಅಪಾಯಕಾರಿಯಾಗಿದೆ. ಪಾವತಿ ಸುದ್ದಿ ಕುರಿತಂತೆ ಈಗಾಗಲೇ ಪ್ರೆಸ್‌ಕೌನ್ಸಿಲ್ ಆಫ್ ಇಂಡಿಯಾ, ಮಾಧ್ಯಮ ಸಂಸ್ಥೆಗಳು ಹಾಗೂ ಸುಪ್ರಿಕೋರ್ಟ್ ಗಂಭೀರವಾಗಿ ಪರಿಗಣಿಸಿ ಪಾವತಿ ಸುದ್ದಿ ಎಂದರೆ ಚುನಾವಣೆಗೆ ಸಂಬಂಧಿಸಿದಂತೆ ನಗದು ಅಥವಾ ಯಾವುದೇ ಉಡುಗೊರೆ ರೂಪದಲ್ಲಿ ಪಡೆದುಕೊಂಡು ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗೆ ಸಂಬಂಧಿಸಿದ ಸುದ್ದಿ ಅಥವಾ ವಿಶ್ಲೇಷಣೆ ಮಾಧ್ಯಮದಲ್ಲಿ (ಮುದ್ರಣ ಹಾಗೂ ವಿದ್ಯುನ್ಮಾನ) ಪ್ರಕಟವಾಗಿದ್ದಲ್ಲಿ ಅದನ್ನು ಪಾವತಿ ಸುದ್ದಿ ಎಂದು ಪರಿಗಣಿಸಲಾಗುವುದು ಎಂದು ಅವರು ಹೇಳಿದರು.
ಪಾವತಿ ಸುದ್ದಿ ಪ್ರಕಟವಾದರೆ ಪರಿಶೀಲಿಸಿ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರನ್ವಯ ಪ್ರಕರಣ ದಾಖಲಿಸುವುದಲ್ಲದೇ, ಎರಡು ವರ್ಷಗಳ ಜೈಲು ಶಿಕ್ಷೆಗೆ ಒಳಪಡಿಸಲು ಅವಕಾಶವಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು. ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಜಾಹೀರಾತು ಪ್ರಮಾಣೀಕರಿಸಲು ಜಿಲ್ಲಾಮಟ್ಟದ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯನ್ನು ರಚಿಸಲಾಗಿದೆ ಎಂದು ಬೊಮ್ಮನಹಳ್ಳಿ ತಿಳಿಸಿದರು.
ಎಲ್ಲ ಪತ್ರಿಕಾ, ದೃಶ್ಯ ಮಾಧ್ಯಮ ಹಾಗೂ ಸ್ಥಳೀಯ ಕೇಬಲ್ ಟಿವಿಗಳಲ್ಲಿ ಪ್ರಸಾರವಾಗುವ ಚುನಾವಣಾ ಜಾಹೀರಾತುಗಳ ಪ್ರಕಟಣೆಗೆ ಮುಂಚಿತವಾಗಿ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯ ಅನುಮತಿ ಕಡ್ಡಾಯವಾಗಿರುತ್ತದೆ. ಕೇಬಲ್ ಟಿವಿ, ಸಾಮಾಜಿಕ ಜಾಲತಾಣ, ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಇ-ಪತ್ರಿಕೆಗಳ ಸುದ್ದಿಗಳ ಕುರಿತಂತೆ ನಿಗಾವಹಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.
ಪಾವತಿ ಸುದ್ದಿ ಪರಿಗಣಿಸಿ ಪ್ರಕಟವಾದ 96 ಗಂಟೆಯೊಳಗೆ ಸಂಬಂಧಿಸಿದ ಪಕ್ಷ ಅಥವಾ ಅಭ್ಯರ್ಥಿಗಳಿಗೆ ಸ್ಪಷ್ಟೀಕರಣ ಕೇಳಿ ನೋಟಿಸ್ ನೀಡಲಾಗುವುದು. ಅಭ್ಯರ್ಥಿಗಳು 48 ಗಂಟೆಯೊಳಗೆ ನೋಟಿಸ್‌ಗೆ ಉತ್ತರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಚುನಾವಣೆ ವೆಚ್ಚ ವಿಭಾಗದ ನೋಡಲ್ ಅಧಿಕಾರಿ ಎಸ್.ಉದಯಶಂಕರ್, ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಮಹೇಶ್‌ಕುಮಾರ್, ಅಪರ ಜಿಲ್ಲಾಧಿಕಾರಿ ರಮೇಶ್ ಕಳಸದ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.