×
Ad

ಮುಗುಳುವಳ್ಳಿ: ಕೊಳವೆಬಾವಿ ಸಂಪರ್ಕ ಕಡಿತಕ್ಕೆ ರೈತರ ಆಕ್ರೋಶ

Update: 2018-04-11 22:55 IST

ಚಿಕ್ಕಮಗಳೂರು, ಎ.11: ತೀವ್ರ ಬರದಿಂದಾಗಿ ಬೆಳೆದ ಬೆಳೆಗಳು ಒಣಗಿ ಹೋಗಿವೆ. ಲಕ್ಷಾಂತರ ರೂ. ಖರ್ಚು ಮಾಡಿ ಕೊರೆಸಿದ ಕೊಳವೆ ಬಾವಿಯ ನೀರನ್ನೂ ಇಡೀ ಗ್ರಾಮಕ್ಕೆ ಸರಬರಾಜು ಮಾಡುತ್ತಿದ್ದೇವೆ. ಪಂಚಾಯತ್ ವತಿಯಿಂದ ನೀರು ಪೂರೈಕೆಗಾಗಿ ಅಳವಡಿಸಿರುವ ಟಿಸಿ ಹಾಳಾಗಿದ್ದು, ನೀರು ಪೂರೈಕೆಯಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆಇಬಿ ಅಧಿಕಾರಿಗಳು ಅನಧೀಕೃತ ವಿದ್ಯುತ್ ಸಂಪರ್ಕ ಪಡೆದಿದ್ದಾರೆಂದು ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗಿದೆ ಎಂದು ಆರೋಪಿಸಿ ಅನಧೀಕೃತ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಕೆಇಬಿ ನೌಕರರನ್ನು ಅಡ್ಡಗಟ್ಟಿ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದ ಘಟನೆ ಮುಗುಳುವಳ್ಳಿ ಗ್ರಾಮದಲ್ಲಿ ಬುಧವಾರ ನಡೆಯಿತು.

ಚಿಕ್ಕಮಗಳೂರು ತಾಲೂಕಿ ಅಂಬಳೆ ಹೋಬಳಿ ವ್ಯಾಪ್ತಿಯಲ್ಲಿರುವ ಮುಗುಳುವಳ್ಳಿ ಗ್ರಾಮದಲ್ಲಿ ಬುಧವಾರ ಅಧಿಕಾರಿಗಳ ಸೂಚನೆ ಮೇರೆಗೆ ಕೆಇಬಿ ನೌಕರರು ಅನಧೀಕೃತ ಕೊಳವೆಬಾವಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಗ್ರಾಮಕ್ಕೆ ಆಗಮಿಸಿದ್ದರು. ಅಲ್ಲದೇ ಗ್ರಾಮದಲ್ಲಿದ್ದ ಕೆಲ ರೈತರು ತಮ್ಮ  ಕೊಳವೆ ಬಾವಿಗಳಿಗೆ ಅನಧೀಕೃತವಾಗಿ ಪಡೆದಿದ್ದ ವಿದ್ಯುತ್ ಸಂಪರ್ಕಗಳ ಪೈಕಿ ಜಗದೀಶ್, ಬಸವರಾಜ್, ಕೃಷ್ಣಪ್ಪ ಎಂಬವರು ಅನಧೀಕೃತ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು.

ಈ ಸುದ್ದಿ ತಿಳಿಯುತ್ತಿದ್ದಂತೆ ಮುಗುಳುವಳಿ ಗ್ರಾಮದ ಸಮೀಪದಲ್ಲೇ ಇರುವ ಜಮೀನುಗಳಿಗೆ ಆಗಮಿಸಿದ ರೈತರು ಹಾಗೂ ಗ್ರಾಮಸ್ಥರು ಕೆಇಬಿ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದನ್ನು ಕಂಡು ಕುಪಿತರಾಗಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಕೆಇಬಿ ವಾಹನವನ್ನು ಮುಂದೆ ಹೋಗಲು ಬಿಡದೇ ಸಿಬ್ಬಂದಿಯನ್ನು ಅಡ್ಡಗಟ್ಟಿ ನಿಂತು, ಇಲಾಖೆಯ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ವಾಹನ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಕೆಇಬಿ ಸಿಬ್ಬಂದಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದಾಗಿ ತಿಳಿಸಿದರೂ ರೈತರು ಅವರನ್ನು ಸ್ಥಳದಿಂದ ಕದಲಲು ಬಿಡಲಿಲ್ಲ.

ಈ ಸಂದರ್ಬದಲ್ಲಿ ಕೆಲ ಗ್ರಾಮಸ್ಥರು ಆಕ್ರೋಶಭರಿತರಾಗಿ ಮಾತನಾಡಿ, ಸಕಲಾದಲ್ಲಿ ಮಳೆಯಾಗದೇ ಈ ಭಾಗದ ರೈತರು ಸಾಲ ಮಾಡಿ ಬೆಳೆದ ಬೆಳೆಗಳು ಒಣಗಿ ಹೋಗಿವೆ. ಸಂಬಂಧಿಸಿದ ಶಾಸಕರು, ಜನಪ್ರತಿನಿಧಿಗಳ ಬಳಿ ಗೋಳು ಹೇಳಿಕೊಂಡರೆ ಕುಡಿಯಲೇ ನೀರಿಲ್ಲ, ಇನ್ನು ಬೆಳೆಗೆ ಎಲ್ಲಿಂದ ನೀರು ಕೊಡೋದು ಎಂದು ಉಢಾಪೆಯ ಉತ್ತರ ನೀಡುತ್ತಿದ್ದಾರೆ. ಕೆಲ ರೈತರು 5 ಲಕ್ಷಕ್ಕೂ ಹೆಚ್ಚು ಸಾಲ ಸೂಲ ಮಾಡಿ ಕೊಳವೆ ಬಾವಿ ಕೊರೆಸಿದ್ದು, ಕೆಇಬಿಗೆ ಹಣಕಟ್ಟಿದರೂ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳನ್ನು ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ಬೇರೆದಾರಿ ಇಲ್ಲದೇ ರೈತರು ವಿದ್ಯುತ್ ಸಂಪರ್ಕವನ್ನು ಅನಧೀಕೃತವಾಗಿ ಪಡೆದಿರಬಹುದು. ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದ್ದು, ಗ್ರಾಮಪಂಚಾಯತ್ ವತಿಯಿಂದ ಕೊರೆಸಲಾದ ಕೊಳವೆ ಬಾವಿಗೆ ಅಳವಡಿಸಿರುವ ಟಿಸಿ ಕೆಟ್ಟು ನಿಂತಿರುವುದರಿಂದ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಗ್ರಾಮಸ್ಥರು ಹನಿ ನೀರಿಗೂ ಪರಿತಪಿಸುತ್ತಿದ್ದಾರೆ. ಇದನ್ನು ಕಂಡು ಕೊಳವೆಬಾವಿ ಹೊಂದಿರುವ ರೈತರೇ ಗ್ರಾಮದ ಮನೆಗಳಿಗೆ ನೀರು ಪೂರೈಸುತ್ತಿದ್ದಾರೆ. ಆದರೆ ಈಗ ಏಕಾಏಕಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು ನೀರಿಗೆ ಹಾಹಾಕಾರ ಉಂಟಾಗಿದೆ. ಈ ಅವ್ಯವಸ್ಥೆಗೆ ಕಿಇಬಿ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ, ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ಕೆಲ ರೈತರು ಈ ವೇಳೆ ಆಕ್ರೋಶದಿಂದ ಅಧಿಕಾರಿಗಳು, ಸಿಬ್ಬಂದಿ ಮೇಲೆ ಕೂಗಾಡಿದರು.

ಈ ವೇಳೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಎಸ್ಸೈಗಳಾದ ಕರೀಗೌಡ ಹಾಗೂ ದಾದಾಫೀರ್, ಗ್ರಾಮಸ್ಥರ ಮನವೊಲಿಸಲು ಮುಂದಾಗಿ ಠಾಣೆಗೆ ಬಂದು ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ, ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ರೈತರೇ ತೊಂದರೆಗೆ ಸಿಲುಕುತ್ತಾರೆ. ದೂರು ನೀಡಿದರೆ ಪ್ರಕರಣ ದಾಖಲಿಸಲಬೇಕಾಗುತ್ತದೆ ಎಂದು ಮನವರಿಕೆ ಮಾಡಿದರು. ಇದಕ್ಕೂ ಗ್ರಾಮಸ್ಥರು ಜಗ್ಗಲಿಲ್ಲ. ಈ ವೇಳೆ ಪೊಲೀಸರು ಹಾಗೂ ಗ್ರಾಮಸ್ಥರು, ಕೆಇಬಿ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಗ್ರಾಮದಲ್ಲಿನ ನೀರಿನ ಸಮಸ್ಯೆಬಗ್ಗೆ ಮನವರಿಕೆ ಮಾಡಿದರು. ಸ್ಥಳದಲ್ಲೇ ಹಣ ಪಾವತಿಸುತ್ತೇವೆ. ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪಕ್ ನೀಡಿ ಎಂದು ಕೆಲ ರೈತರು ಅಧಿಕಾರಿಗಳಿಗೆ ತಿಳಿಸಿದರು. 

ಬಳಿಕ ಅಧಿಕಾರಿಗಳು ಈ ಬಗ್ಗೆ ಚರ್ಚಿಸಿದ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರಲಾಗುವುದು. ಅಲ್ಲಿಯವರೆಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸದಿರಲು ಸೂಚಿದ್ದರಿಂದ ಸ್ಥಳದಲ್ಲಿದ್ದ ಬಿಗುವಿನ ವಾತಾವರಣ ತಿಳಿಯಾಯಿತು. ಈ ಬಗ್ಗೆ ಚರ್ಚಿಸುವ ಸಲುವಾಗಿ ಅಧಿಕಾರಿಗಳು ಹಾಗೂ ಗ್ರಾಮಸ್ಥರನ್ನು ಠಾಣೆಗೆ ಬರಲು ತಿಳಿಸಿರುವುದಾಗಿ ಪೊಲೀಸರು ವಾರ್ತಾಭಾರತಿಗೆ ತಿಳಿಸಿದ್ದಾರೆ.

ಗ್ರಾಮದಲ್ಲಿನ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಕೆಇಬಿ ಅಧಿಕಾರಿಗಳನ್ನು ಸಾಕಷ್ಟು ಬಾರಿ ಬೇಡಿಕೊಂಡಿದ್ದೇವೆ. ರೈತರು ಹಣ ಪಾವತಿಸಲೂ ಸಿದ್ಧರಿದ್ದಾರೆ. ಆದರೆ ಅಧಿಕಾರಿಗಳೇ ನಿರ್ಲಕ್ಷ್ಯವಹಿಸಿದ್ದಾರೆ. ಬೆಳೆಗೆ ಹಾಗೂ ಕುಡಿಯಲು ಗ್ರಾಮದಲ್ಲಿ ನೀರಿನ ಅನ್ಯ ಮೂಲಗಳಿಲ್ಲ. ಇದು ಅಧಿಕಾರಿಗಳಿಗೂ ತಿಳಿದಿದೆ. ಆದರೂ ಏಕಾಏಕಿ ಬಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ಗ್ರಾಮಸ್ಥರು ಬದುಕುವುದಾದರೂ ಹೇಗೆ?, ಪಂಚಾಯತ್ ವತಿಯಿಂದ ನೀರು ಪೂರೈಸುವ ಕೊಳವೆಬಾವಿಯ ಟಿಸಿಯೂ ಹಾಳಾಗಿದೆ. ದುರಸ್ತಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ರೈತರ ಆಕ್ರೋಶಕ್ಕೆ ಕೆಇಬಿ ಅಧಿಕಾರಿಗಳೇ ಕಾರಣ
- ವಿಜಯ್‍ಕುಮಾರ್, ಗ್ರಾಪಂ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News