ಮಡಿಕೇರಿ: ಕಾವೇರಿ ನದಿ ಸ್ವಚ್ಛತಾ ಕಾರ್ಯಕ್ಕೆ ಚಕ್ರವರ್ತಿ ಸೂಲಿಬೆಲೆ ಚಾಲನೆ

Update: 2018-04-11 17:40 GMT

ಮಡಿಕೇರಿ, ಎ.11: ದಕ್ಷಿಣ ಭಾರತದ ಕೋಟ್ಯಾಂತರ ಜನರ ಅನ್ನದಾತೆಯಾಗಿ, ಜೀವನದಿಯ ಸ್ಥಾನ ಪಡೆದಿರುವ ಕಾವೇರಿಯ ಒಡಲಿನಿಂದ ಟನ್‍ಗಟ್ಟಲೆ ತ್ಯಾಜ್ಯ ಪದಾರ್ಥಗಳನ್ನು ಹೊರತೆಗೆಯುವ ಮೂಲಕ ಭಾಗಮಂಡಲದಲ್ಲಿ ನದಿ ಸ್ವಚ್ಛತಾ ಕಾರ್ಯಕ್ಕೆ ಯುವ ಬ್ರಿಗೇಡ್‍ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಚಾಲನೆ ನೀಡಿದರು.

ಬುಧವಾರ ಬೆಳಗ್ಗೆ ಕಾವೇರಿಯ ಉಗಮ ಸ್ಥಾನವಾದ ಶ್ರೀತಲಕಾವೇರಿ ಮತ್ತು ಸಂಗಮ ಕ್ಷೇತ್ರ ಭಾಗಮಂಡಲದ ಶ್ರೀ ಭಗಂಡೇಶ್ವರ ದೇಗುಲಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ, ಕಾವೇರಿಯ ಸ್ವಚ್ಛತೆ ಮತ್ತು ಪಾವಿತ್ರ್ಯತೆಯನ್ನು ಸಂರಕ್ಷಿಸುವ ಸಂಕಲ್ಪದೊಂದಿಗೆ ನದಿಯ ಹರಿವಿನ ಪ್ರದೇಶಗಳಲ್ಲಿನ ಸ್ವಚ್ಛತಾ ಕಾರ್ಯಕ್ಕೆ ಚಾಲನೆಯನ್ನು ನೀಡಲಾಯಿತು.

ಕಾವೇರಿ ನದಿ ಸಾಗುವ ಹಾದಿಯಲ್ಲಿ ಬರುವ, ಮೂರ್ನಾಡು ಸನಿಹದ ಬಲಮುರಿಯ ಶ್ರೀಅಗಸ್ತ್ಯೇಶ್ವರ ದೇವಸ್ಥಾನದ ಬಳಿಯ ಸೇತುವೆಯ ಬಳಿಯಲ್ಲಿ ಚಕ್ರವರ್ತಿ ಸೂಲಿಬೆಲೆ, ಯುವ ಬ್ರಿಗೇಡ್‍ನ ಮೈಸೂರು ವಿಭಾಗದ ಪ್ರಮುಖರಾದ ಚಂದ್ರು ಮತ್ತು ಅವರೊಂದಿಗಿನ ನುರಿತ ಕಾರ್ಯಪಡೆ, ಕಾವೇರಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಚಂದ್ರಮೋಹನ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಮಡಿಕೇರಿಯ ಕ್ಲೀನ್ ಸಿಟಿ ಫೋರಂ ಅಧ್ಯಕ್ಷ ಚೆಯ್ಯಂಡ ಸತ್ಯ, ಗ್ರಾಮಸ್ಥರು ಸೇರಿದಂತೆ ಹಲವಾರು ಮಂದಿ ನದಿ ವ್ಯಾಪ್ತಿಯಲ್ಲಿದ್ದ ತ್ಯಾಜ್ಯವನ್ನು ಹೊರತೆಗೆಯುವ ಕಾರ್ಯದಲ್ಲಿ ಯಶಸ್ವಿಯಾದರು.

ಬಲಮುರಿ ಸೇತುವೆಯ ಬಳಿಯಲ್ಲಿ ಕಾವೇರಿಯಲ್ಲಿದ್ದ ಪ್ಲಾಸ್ಟಿಕ್, ವಸ್ತ್ರಗಳ ರಾಶಿಯನ್ನು ಕಾರ್ಯಕರ್ತರು ಟನ್‍ಗಟ್ಟಲೆ ಹೊರತೆಗೆದು ಹಾಕುವ ಮೂಲಕ, ಜೀವನದಿ ಕಾವೇರಿ ನಿರಾಳವಾಗಿ ಉಸಿರಾಡಲು ಅವಕಾಶ ಒದಗಿಸಿದರು. ಅಂದಾಜು 10 ಟನ್‍ಗೂ ಹೆಚ್ಚಿನ ತ್ಯಾಜ್ಯವನ್ನು ಈ ಪ್ರದೇಶದಿಂದ ಹೊರತೆಗೆಯುವ ಮೂಲಕ ನದಿ ಸ್ವಚ್ಛತೆಯ ಬದ್ಧತೆಯನ್ನು ತೋರುವ ಕಾರ್ಯ ನಡೆಯಿತು.

ನದಿ ಹರಿವಿನ ಪ್ರದೇಶದ ಉದ್ದಕ್ಕೂ ಪುಣ್ಯ ಕ್ಷೇತ್ರಗಳಿದ್ದು, ಇಲ್ಲೆಲ್ಲ ಕಾವೇರಿಯ ದರ್ಶನಕ್ಕೆ ಬರುವ ಭಕ್ತಾದಿಗಳು ಧಾರ್ಮಿಕ ವಿಧಿ ವಿಧಾನಗಳ ಬಳಿಕ ತಾವೇ ಪೂಜಿಸುವ ಕಾವೇರಿಯಲ್ಲಿ ತೊಟ್ಟ ಬಟ್ಟೆಗಳನ್ನು ವಿಸರ್ಜಿಸಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಒಗೆಯುತ್ತಿರುವುದು ಕಾವೇರಿ ಮಲಿನಗೊಳ್ಳಲು ಪ್ರಮುಖ ಕಾರಣವಾಗಿದೆ. ಈ ರೀತಿ ಮಲಿನಗೊಳ್ಳುತ್ತಿರುವ ಕಾವೇರಿಯನ್ನು ಸ್ವಚ್ಛಗೊಳಿಸುವ ಇರಾದೆಯೊಂದಿಗೆ ಚಕ್ರವರ್ತಿ ಸೂಲಿಬೆಲೆ ಅವರು ಕೈಗೊಂಡಿರುವ ಅಭಿಯಾನಕ್ಕೆ ಬಲಮುರಿ ಗ್ರಾಮಸ್ಥರು ತುಂಬು ಮೆಚ್ಚುಗೆಯನ್ನು ವ್ಯಕ್ತಪಡಿಸಿರುವುದಲ್ಲದೆ, ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿರುವುದು ವಿಶೇಷ.

ಕಾವೇರಿ ಸ್ವಚ್ಛತಾ ಕಾರ್ಯದ ಜೊತೆ ಜೊತೆಯಲ್ಲೆ ಇಂದು ಸೂಲಿಬೆಲೆ ಮತ್ತು ಅವರ ಸಂಗಡಿಗರು ನದಿ ಹರಿವಿನ ಪ್ರದೇಶದ ಸಾಕಷ್ಟು ಗ್ರಾಮಸ್ಥರದನ್ನು ಭೇಟಿಯಾಗಿ, ನದಿ ಸ್ವಚ್ಛತೆಯ ಪ್ರಾಮುಖ್ಯತೆಯ ಬಗ್ಗೆ ಅವರಲ್ಲಿ ಅರಿವು ಮೂಡಿಸಿದರು.

ಬಲಮುರಿಯ ಸ್ವಚ್ಛತಾ ಕಾರ್ಯದಲ್ಲಿ ಮೂರ್ನಾಡು ಗೋ ಗ್ರೀನ್ ಫೋರಂ ಪ್ರಮುಖರಾದ ಅರುಣ್ ಅಪ್ಪಚ್ಚು, ಕ್ಲೀನ್‍ಸಿಟಿ ಫೋರಂ ನ ಮೋಂತಿ ಗಣೇಶ್, ಬಲಮುರಿ ಅಗಸ್ತ್ರೇಶ್ವರ ದೇವಸ್ಥಾನದ ಅಧ್ಯಕ್ಷರಾದ ಸಾಧು ತಿಮ್ಮಯ್ಯ, ಜಿ.ಪಂ ಮಾಜಿ ಉಪಾಧ್ಯಕ್ಷೆ ಉಷಾ ದೇವಮ್ಮ ಮೊದಲಾದವರು ಪಾಲ್ಗೊಂಡಿದ್ದರು.

ಎ.12 ರಂದು ನೆಲ್ಯಹುದಿಕೇರಿಯಲ್ಲಿ 

ನೆಲ್ಯಹುದಿಕೇರಿ ಮತ್ತು ಸಿದ್ದಾಪುರ ವಿಭಾಗದಲ್ಲಿ ಎ.12ರಂದು ಯುವ ಬ್ರಿಗೇಡ್ ಮತ್ತು ಸ್ಥಳೀಯರಿಂದ ಕಾವೇರಿ ಸ್ವಚ್ಛತಾ ಕಾರ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News