ದಾವಣಗೆರೆ: ಎರಡು ಕುಟುಂಬಗಳ ನಡುವೆ ಮಾರಾಮಾರಿ; 9 ಮಂದಿಗೆ ಗಾಯ
ದಾವಣಗೆರೆ,ಎ.11: ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ಘಟನೆಯಲ್ಲಿ ಮೂವರು ಮಹಿಳೆಯರು ಸೇರಿ 9 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಚನ್ನಗಿರಿ ತಾಲೂಕಿನ ಚಿರಡೋಣಿಯಲ್ಲಿ ನಡೆದಿದೆ.
ಚಿರಡೋಣಿ ಗ್ರಾಮದಲ್ಲಿ ಮಾದಿಗರ ನಾಗಪ್ಪ ಹಾಗೂ ನಾಯಕ್ ಸಮುದಾಯದ ರೇವಣಿ ನಾಯಕ್ ಕುಟುಂಬಗಳ ಮನೆಯ ಮಧ್ಯೆದಲ್ಲಿ ಸುಮಾರು 10 ಅಡಿ ಸರ್ಕಾರಿ ಜಾಗವಿದೆ. ಈ ಜಾಗವನ್ನು ಜನರು ಓಡಾಡಲು ಬಿಡಲಾಗಿದೆ. ಆದರೆ, ಈ ಜಾಗವನ್ನು ರೇವಣಿ ಕುಟುಂಬದವರು ತಮ್ಮದು ಎಂದು ವಾದಿಸುತ್ತಿದ್ದು, ನಾಗಪ್ಪ ಕುಟುಂಬಸ್ಥರು ನಮ್ಮದು ಎಂದು ಆಕ್ಷೇಪವೆತ್ತುತ್ತಿದ್ದಾರೆ.
ಇದೇ ಜಾಗದಲ್ಲಿ ಮಂಗಳವಾರ ತಡರಾತ್ರಿ ನಾಗಪ್ಪ ಕುಟುಂಬಸ್ಥರು ಎಲೆ ಅಡಿಕೆ ಉಗಿದಿದ್ದಕ್ಕೆ ರೇವಣಿ ನಾಯಕ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ, ರೇವಣಿ ನಾಯಕ್ ಹಾಗೂ ಸೋದರ ಕುಮಾರ್ ನಾಯಕ ಇಬ್ಬರು ನಾಗಪ್ಪನ ಜೊತೆಗೆ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ.
ಎರಡು ಕುಟುಂಬಗಳ ಮಧ್ಯ ಇಡೀ ರಾತ್ರಿ ಗಲಾಟೆ ನಡೆದಿದ್ದು, ಮಹಿಳೆಯರು, ಗಂಡಸರು ಮಕ್ಕಳು ಎನ್ನದೇ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ನಾಗಪ್ಪ ಕುಟುಂಬದ ಮೂವರು ಮಹಿಳೆಯರು ಹಾಗೂ ಇಬ್ಬರು ಗಂಡು ಮಕ್ಕಳಿಗೆ ತೀವ್ರವಾದ ಗಾಯಗಳಾಗಿವೆ. ಇದೀಗ ಒಳಪೆಟ್ಟು ಬಿದ್ದಿರುವ ಆರು ಜನರು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಮೂವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಗ್ರಾಮದಲ್ಲಿ ಇದೀಗ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಚನ್ನಗಿರಿ ತಾಲೂಕು ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಎರಡು ಸಮುದಾಯದಿಂದ ಪ್ರಕರಣ ದಾಖಲಿಸಲಾಗಿದೆ