ಹದಗೆಟ್ಟ ರಸ್ತೆ ಸರಿಪಡಿಸಿ

Update: 2018-04-11 18:40 GMT

ಮಾನ್ಯರೇ,

ಭಾರತ ಗ್ರಾಮೀಣ ಪ್ರಧಾನ ದೇಶವಾಗಿರುವುದರಿಂದ ಗ್ರಾಮಗಳ ಉದ್ಧಾರವೇ ದೇಶದ ಪ್ರಗತಿ ಎಂಬುವುದು ಮಹಾತ್ಮ್ಮಾ ಗಾಂಧಿಯವರ ಆಶಯವಾಗಿತ್ತು. ಆದರೆ ನಮಗೆ ಸ್ವಾತಂತ್ರ್ಯ ದೊರೆತು ಏಳು ದಶಕಗಳೇ ಗತಿಸಿದರೂ ನಮ್ಮ ಗ್ರಾಮೀಣ ಪ್ರದೇಶಗಳು ಇನ್ನೂ ಹೇಳಿಕೊಳ್ಳುವ ಪ್ರಗತಿ ಸಾಧಿಸಿಲ್ಲ. ಇದಕ್ಕೆ ಕಾರಣ ನಾವುಗಳು ಚುನಾಯಿಸಿ ಕಳಿಸುವ ಜನಪ್ರತಿನಿಧಿಗಳು ತೋರುವ ದಿವ್ಯ ನಿರ್ಲಕ್ಷ ಎಂದು ಹೇಳಿದರೆ ತಪ್ಪಾಗಲಾರದು. ಇದಕ್ಕೆ ತಾಜಾ ಉದಾಹರಣೆ ಎಂದರೆ ಸಿಂದಗಿ ತಾಲೂಕಿನ ಗುಂದಗಿ ಗ್ರಾಮ.
 ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಈ ಗ್ರಾಮದ ಪ್ರಮುಖ ರಸ್ತೆಯನ್ನು ಆಲಮೇಲ ಮಾರ್ಗವಾಗಿ 37 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಆದರೆ ಕೇವಲ ಒಂದೆರಡು ವರ್ಷಗಳಲ್ಲಿ 5.4ಕಿ.ಮೀ.ನಷ್ಟು ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಹೀಗಾಗಿ ಈ ಗ್ರಾಮದ ಜನರು ಹಾಳಾಗಿರುವ ರಸ್ತೆಯಲ್ಲಿ ಸಂಚರಿಸಲು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಮಳೆ ಬಂದರಂತೂ ರಸ್ತೆ ಚರಂಡಿಯಾಗಿ ಮಾರ್ಪಡುತ್ತದೆ. ರಸ್ತೆಯ ಮೇಲೆಲ್ಲಾ ನೀರು ತುಂಬಿಕೊಳ್ಳುವುದರಿಂದ ಟಂ ಟಂ, ಜೀಪು, ಬೈಕ್ ಇತ್ಯಾದಿ ವಾಹನ ಚಾಲಕರಿಗೆ ರಸ್ತೆ ಹೊಂಡಗಳ ಬಗ್ಗೆ ತಿಳಿಯದೆ ಅಪಘಾತಗಳು ಸಂಭವಿಸುತ್ತವೆ. ಅಲ್ಲದೆ ಹೊಲ-ಮನೆಗೆ ನಿತ್ಯ ಓಡಾಡುವ ಜನ-ಜಾನುವಾರುಗಳು ಈ ಹಾಳು ರಸ್ತೆಯಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡ ಉದಾಹರಣೆಗಳು ಇವೆ. ಆದ್ದರಿಂದ ಇನ್ನಾದರೂ ಈ ಭಾಗಕ್ಕೆ ಸಂಬಂಧಪಟ್ಟ ಸ್ಥಳೀಯ ಜನಪ್ರತಿನಿಧಿಗಳು ಎನಿಸಿಕೊಂಡವರು ಎಚ್ಚ್ಚೆತ್ತುಗೊಂಡು ಸಂಪೂರ್ಣವಾಗಿ ಹದಗೆಟ್ಟ ಗುಂದಗಿ ಗ್ರಾಮದ ರಸ್ತೆಯನ್ನು ಸರಿಪಡಿಸಿ, ಜನ-ಜಾನುವಾರುಗಳು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬೇಕಾಗಿದೆ.

Similar News