ಚೆನ್ನೈನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಕಪ್ಪುಬಾವುಟ ಪ್ರದರ್ಶನ

Update: 2018-04-12 05:13 GMT

ಚೆನ್ನೈ, ಎ.12: ರಕ್ಷಣಾ ಇಲಾಖೆಯ ಪ್ರದರ್ಶನವನ್ನು ಉದ್ಘಾಟಿಸಲು ಗುರುವಾರ ಚೆನ್ನೈಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಚೆನ್ನೈ ವಿಮಾನ ನಿಲ್ದಾಣದೊಳಗೆ ಪ್ರಯಾಣಿಕರ ಸೋಗಿನಲ್ಲಿ ಬಂದಿದ್ದ ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಏರ್‌ಪೋರ್ಟ್‌ನಲ್ಲಿ ಕಪ್ಪು ಬಲೂನ್‌ಗಳನ್ನು ಹಾರಿಬಿಟ್ಟು ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

 ಕೇಂದ್ರ ಸರಕಾರ ಸುಪ್ರೀಂಕೋರ್ಟ್ ಆದೇಶದಂತೆ ಮಾ.29ರಂದು ಕಾವೇರಿ  ನೀರು ನಿರ್ವಹಣಾ ಮಂಡಳಿ ರಚನೆ ಮಾಡದೇ ಮತ್ತಷ್ಟು ಕಾಲಾವಕಾಶವನ್ನು ಕೇಳಿದ್ದನ್ನು ಖಂಡಿಸಿ ಈಗ ತಮಿಳುನಾಡಿನಾದ್ಯಂತ ಪ್ರತಿಭಟನೆ ತೀವ್ರಗೊಂಡಿದ್ದು, ಚೆನ್ನೈನಲ್ಲಿ ನಡೆಯಬೇಕಾಗಿದ್ದ ಐಪಿಎಲ್ ಪಂದ್ಯಗಳಿಗೂ ಪ್ರತಿಭಟನೆ ಬಿಸಿ ತಟ್ಟಿತ್ತು. ಚೆನ್ನೈನಲ್ಲಿ ನಡೆಯಬೇಕಾಗಿದ್ದ ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸಲಾಗಿದೆ.

 ತಮಿಳುನಾಡಿನಲ್ಲಿ ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿ ಪ್ರತಿಭಟನೆ ನಡೆಯುತ್ತಿರುವ ಕಾರಣ ರಾಜ್ಯದ ಹಲವು ನಗರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರಧಾನಮಂತ್ರಿ ರಾಜ್ಯಕ್ಕೆ ಭೇಟಿ ನೀಡಿದಾಗ ಕಪ್ಪುಬಾವುಟ ಪ್ರದರ್ಶಿಸುವಂತೆ ಡಿಎಂಕೆ ತನ್ನ ಕಾರ್ಯಕರ್ತರಿಗೆ ಕರೆ ನೀಡಿತ್ತು.

ಬೆಳಗ್ಗೆ 9:30ಕ್ಕೆ ಚೆನ್ನೈ ವಿಮಾನ ನಿಲ್ದಾಣಕ್ಕೆ ತಲುಪಿದ ಪ್ರಧಾನಿ ಮೋದಿ ರಕ್ಷಣಾ ಇಲಾಖೆಯ ಕಾರ್ಯಕ್ರಮ ಉದ್ಘಾಟನೆ ಸ್ಥಳಕ್ಕೆ ತೆರಳಲು ರಸ್ತೆ ಮಾರ್ಗವನ್ನು ಬಳಸದೇ ಹೆಲಿಕಾಪ್ಟರ್‌ನಲ್ಲಿ ತೆರಳಿದರು. ಚೆನ್ನೈ ಏರ್‌ಪೋರ್ಟ್ ರೋಡ್‌ನಲ್ಲಿ ವಿಪರೀತ ಟ್ರಾಫಿಕ್ ಜಾಮ್ ಆಗಿದ್ದರಿಂದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಿ.ಮಿ. ದೂರ ನಡೆದುಕೊಂಡು ಹೋಗಿ ಪ್ರಧಾನಿಯನ್ನು ಸ್ವಾಗತಿಸಿದರು. ಈ ವೇಳೆ ನೂರಾರು ಪ್ರತಿಭಟನಾಕಾರರು ನಿರ್ಮಲಾಗೆ ಕಪ್ಪು ಭಾವುಟ ಪ್ರದರ್ಶಿಸಿದ್ದಾರೆ.

ಹಿರಿಯ ಚಿತ್ರ ನಿರ್ದೇಶಕ ಭಾರತಿರಾಜ, ಆಮೀರ್ ಹಾಗೂ ವೆಟ್ರಿಮಾರನ್ ನೇತೃತ್ವದಲ್ಲಿ ಚೆನ್ನೈ ವಿಮಾನ ನಿಲ್ದಾಣದೊಳಗೆ ಪ್ರಯಾಣಿಕರ ಸೋಗಿನಲ್ಲಿ ಪ್ರವೇಶಿಸಿ ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ತಕ್ಷಣವೇ ಇವರೆಲ್ಲರನ್ನೂ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News