ಸಿದ್ದರಾಮಯ್ಯಗಾಗಿ ಕ್ಷೇತ್ರ ತ್ಯಾಗಕ್ಕೆ ಸಿದ್ಧ: ಶಾಸಕ ಬಿ.ಬಿ.ಚಿಮ್ಮನಕಟ್ಟಿ
Update: 2018-04-12 20:42 IST
ಬೆಂಗಳೂರು, ಎ.12: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಚುನಾವಣೆಯಲ್ಲಿ ನನ್ನ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ಯಾವುದೆ ಶರತ್ತು ಇಲ್ಲದೆ ಅವರಿಗಾಗಿ ಕ್ಷೇತ್ರವನ್ನು ಬಿಟ್ಟುಕೊಡುತ್ತೇನೆ ಎಂದು ಬಾದಾಮಿ ಕ್ಷೇತ್ರದ ಹಿರಿಯ ಶಾಸಕ ಬಿ.ಬಿ.ಚಿಮ್ಮನಕಟ್ಟಿ ತಿಳಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು. ಅವರ ಭವಿಷ್ಯ ಉಜ್ವಲವಾಗಬೇಕು ಎಂಬುದು ನನ್ನ ಬಯಕೆ. ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡು ಕ್ಷೇತ್ರಗಳಲ್ಲಿ ಅವರು ಸ್ಪರ್ಧಿಸಲಿ ಎಂದರು.
ಬಾದಾಮಿ ಕ್ಷೇತ್ರದಲ್ಲಿ ನನ್ನ ಮುಂದಾಳತ್ವದಲ್ಲೆ ಪ್ರಚಾರ ಕೈಗೊಂಡು ಸಿದ್ದರಾಮಯ್ಯರನ್ನು ಗೆಲ್ಲಿಸಿಕೊಂಡು ಬರುತ್ತೇವೆ. ನಾನು ಆರು ಬಾರಿ ಶಾಸಕ ಹಾಗೂ ಎರಡು ಬಾರಿ ಸಚಿವನಾಗಿದ್ದೇನೆ. ಸ್ವ ಇಚ್ಛೆಯಿಂದ ಕ್ಷೇತ್ರವನ್ನು ಬಿಟ್ಟು ಕೊಡುತ್ತೇನೆ. ಅಲ್ಲದೆ, ಅವರಿಗೆ ಅಗತ್ಯವಿರುವ ಸಹಾಯವನ್ನು ಮಾಡುತ್ತೇನೆ ಎಂದು ಚಿಮ್ಮನಕಟ್ಟಿ ಹೇಳಿದರು.