×
Ad

ಧಾರವಾಡ: ಅಲ್ಪಸಂಖ್ಯಾತ ಸಮುದಾಯದ ಮುಖಂಡರಿಗೆ ಇವಿಎಂ-ವಿವಿಪ್ಯಾಟ್ ಬಳಕೆ ಕುರಿತು ಕಾರ್ಯಾಗಾರ

Update: 2018-04-12 20:55 IST

ಧಾರವಾಡ, ಎ.12: ಜಿಲ್ಲಾ ಸ್ವೀಪ್ ಸಮಿತಿಯು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಹಾಗೂ ವಿವಿಪ್ಯಾಟ್ ಮತಯಂತ್ರ ಬಳಕೆ ಕುರಿತು, ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಮ್, ಕ್ರೈಸ್ತ ಹಾಗೂ ಜೈನ ಸಮಾಜಗಳ ಮುಖಂಡರಿಗೆ ಜಿ.ಪಂ.ಸಭಾಂಗಣದಲ್ಲಿ ಗುರುವಾರ ಕಾರ್ಯಾಗಾರ ನಡೆಸಲಾಯಿತು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ, ಜಿ.ಪಂ. ಸಿಇಓ ಸ್ನೇಹಲ್ ಮಾತನಾಡಿ, ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಬಾರಿ ವಿವಿಪ್ಯಾಟ್ ಬಳಕೆಗೆ ಬರುತ್ತಿದೆ. ಅದರ ಬಗ್ಗೆ ಎಲ್ಲ ಜನಸಾಮಾನ್ಯರಿಗೆ ತಿಳುವಳಿಕೆ ನೀಡುವ ಜವಾಬ್ದಾರಿಯು ಮುಖಂಡರ ಮೇಲಿರುತ್ತದೆ ಎಂದರು.

ಎ.14 ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ. ನಿಮ್ಮ ಮತಗಟ್ಟೆ, ತಹಶೀಲ್ದಾರ್ ಕಚೇರಿ ಅಥವಾ ಮತದಾರರ ಸೌಲಭ್ಯ ಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸಬಹುದು. ಮೊಬೈಲ್ ಸಂಖ್ಯೆ 9731979899ಗೆ ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಎಸ್‌ಎಂಎಸ್ ಕಳುಹಿಸಿ ಮತಗಟ್ಟೆ ಮಾಹಿತಿ ಪಡೆಯಬಹುದು ಎಂದು ಅವರು ಹೇಳಿದರು.

1800 11 1950 ಸಹಾಯವಾಣಿ ಸಂಖ್ಯೆ ಸಂಪರ್ಕಿಸಬಹುದು. ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಚುನಾವಣಾ ಆಯೋಗ ಸೂಚಿಸಿದ ಇತರ ಯಾವುದೇ ಗುರುತಿನ ಕಾರ್ಡ್ ಬಳಸಿ ಮತ ಹಾಕಬಹುದು. ಈ ಬಾರಿ ವಿಶೇಷಚೇತನರಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಮತದಾನ ಮಾಡಲು ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಯಾವುದೇ ಆಮಿಷಗಳಿಗೆ ಒಳಗಾಗದೆ ಎಲ್ಲರೂ ನ್ಯಾಯಸಮ್ಮತವಾಗಿ ವಿವೇಚನೆಯಿಂದ ಮತ ಚಲಾಯಿಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ್ ಕಳಸದ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನವೀನ ಶಿಂತ್ರೆ, ಪ್ರೊಬೇಷನರಿ ಎ.ಸಿ.ಶೇಖರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ.ಎಸ್.ದೊಡ್ಡಮನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಎಪಿಸಿ ಕೆ.ಎಂ.ಶೇಖ್, ಡಾ.ಈಶ್ವರ ಸಾತಿಹಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News