ದಾವಣಗೆರೆ: ಲೋಕಸಭೆ ಬಜೆಟ್ ಅಧಿವೇಶನಕ್ಕೆ ಅಡ್ಡಿ ಖಂಡಿಸಿ ಉಪವಾಸ ಸತ್ಯಾಗ್ರಹ

Update: 2018-04-12 15:54 GMT

ದಾವಣಗೆರೆ,ಎ.12: ಉದ್ದೇಶಪೂರ್ವಕವಾಗಿ ಲೋಕಸಭೆ ಬಜೆಟ್ ಅಧಿವೇಶನವನ್ನು ಕಾಂಗ್ರೆಸ್ ಹಾಳುಗೆಡವಿದೆ ಎಂದು ಆರೋಪಿಸಿ ಹಾಗೂ ಇತರೆ ಪ್ರತಿಪಕ್ಷಗಳ ಧೋರಣೆ ಖಂಡಿಸಿ ನಗರದಲ್ಲಿ ಗುರುವಾರ ಸಂಸದ ಜಿ.ಎಂ ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು. 

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಲೋಕಸಭೆ ಕಲಾಪಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ಬಿಜೆಪಿ ಮುಖಂಡರು, ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭ ಮಾತನಾಡಿದ ಸಂಸದ ಜಿ.ಎಂ ಸಿದ್ದೇಶ್ವರ್, ಲೋಕಸಭೆ ಬಜೆಟ್ ಅಧಿವೇಶನ 23 ದಿನಗಳ ಕಾಲ ನಡೆಯಲು ಬಿಡದ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ದೇಶಕ್ಕೆ, ದೇಶ ವಾಸಿಗಳಿಗೆ ತುಂಬಲಾರದ ನಷ್ಟವನ್ನುಂಟು ಮಾಡಿವೆ. ವಿಪಕ್ಷಗಳಿಗೆ ಕಲಾಪದಲ್ಲಿ ಚರ್ಚಿಸಲು ಅವಕಾಶವಿದ್ದರೂ, ಕಲಾಪಕ್ಕೆ ಅಡ್ಡಿಪಡಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ಸಂಸತ್ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದ ಯಾವೊಬ್ಬ ಸಂಸದರು, ಕೇಂದ್ರ ಸಚಿವರೂ ಅಧಿವೇಶನದ ಅವಧಿಯ ತಮ್ಮ ವೇತನ, ಭತ್ಯೆ ಪಡೆಯುವುದಿಲ್ಲ. ಈ ಮೂಲಕ ವಿಪಕ್ಷಗಳು ಮಾಡಿದ ನಷ್ಟವನ್ನು ತಕ್ಕ ಮಟ್ಟಿಗೆ ತುಂಬುವ ಕೆಲಸ ಮಾಡಲಿದೆ ಎಂದರು.

ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ಕಾಂಗ್ರೆಸ್ ಸೇರಿದಂತೆ ಅದರ ಮಿತ್ರಪಕ್ಷಗಳ ನಡೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಇದು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ. ದೇಶದ ಜನತೆಯೂ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ವರ್ತನೆ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಕಲಾಪದಲ್ಲಿ ಬಜೆಟ್ ಮೇಲೆ ಚರ್ಚೆ ನಡೆಸುವ ಬದಲಿಗೆ, ಅದಕ್ಕೆ ಮಾರಕವಾಗುವಂತೆ ವಿಪಕ್ಷಗಳು ವರ್ತಿಸಿದ್ದು ಖಂಡನೀಯ ಎಂದು ದೂರಿದರು.

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಲೋಕಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಉದ್ದಟತನ ಇದೇ ರೀತಿ ಮುಂದುವರಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ವಿಪಕ್ಷಗಳು ಸೌಹಾರ್ದಯುತವಾಗಿ ವಿಷಯದ ಬಗ್ಗೆ ಚರ್ಚೆ ನಡೆಸಬೇಕೇ ಹೊರತು, ಪ್ರಧಾನಿ ಮೋದಿ ಸರ್ಕಾರದ ಜನಪರ ಕಾರ್ಯ, ಯೋಜನೆ, ಸಾಧನೆ ಬಗ್ಗೆ ಜನರಿಗೆ ಸಂದೇಶ ಹೋಗುತ್ತದೆಂಬ ಕಾರಣಕ್ಕೆ ಕಲಾಪಕ್ಕೆ ಅಡ್ಡಿಪಡಿಸುವುದು ಶೋಭೆಯಲ್ಲ ಎಂದರು. 

ಉಪವಾಸ ಸತ್ಯಾಗ್ರಹದಲ್ಲಿ ಆಂಧ್ರದ ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶಕುಮಾರ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಶಾಸಕರಾದ ಬಿ.ಪಿ. ಹರೀಶಗೌಡ, ಪ್ರೊ.ಎನ್. ಲಿಂಗಣ್ಣ, ಎಚ್.ಎಸ್. ನಾಗರಾಜ, ಮಾಯಕೊಂಡ ಆನಂದಪ್ಪ, ಎಚ್.ಕೆ. ಬಸವರಾಜ, ಲೋಕಿಕೆರೆ ನಾಗರಾಜ, ಎಚ್.ಎನ್. ಶಿವಕುಮಾರ, ಪಾಲಿಕೆ ಸದಸ್ಯ ಡಿ.ಕೆ. ಶಿವಕುಮಾರ, ರಾಜನಹಳ್ಳಿ ಶಿವಕುಮಾರ ಪೈಲ್ವಾನ್, ವಕೀಲ ಎ.ವೈ. ಪ್ರಕಾಶ, ಎನ್. ರಾಜಶೇಖರ, ಕೊಂಡಜ್ಜಿ ಜಯಪ್ರಕಾಶ, ಧನುಷ ರೆಡ್ಡಿ, ವೈ. ಮಲ್ಲೇಶ, ಕೆ. ಹೇಮಂತಕುಮಾರ, ಎಲ್.ಡಿ. ಗೋಣೆಪ್ಪ, ಪ್ರಭು ಕಲ್ಬುರ್ಗಿ, ಬಿ.ಎಸ್. ಜಗದೀಶ, ಎಚ್.ಸಿ. ಜಯಮ್ಮ, ಸವಿತಾ ರವಿಕುಮಾರ, ಪುಷ್ಪಾ  ವಾಲಿ, ಚೇತುಬಾಯಿ, ದೇವೀರಮ್ಮ, ಶಾಂತಾ ದೊರೈ, ಉಮೇಶ್ ಪಾಟೀಲ್, ಡಿ.ಎಸ್. ಜಯಣ್ಣ, ಟಿಂಕರ್ ಮಂಜಣ್ಣ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News