×
Ad

ಸಿಎಂ ಸಿದ್ದರಾಮಯ್ಯರಿಂದ ಬಿಜೆಪಿಗೆ ಹತ್ತು ಪ್ರಶ್ನೆಗಳು

Update: 2018-04-12 21:20 IST

ಬೆಂಗಳೂರು, ಎ.12: ರಾಜ್ಯ ಸರ್ಕಾರದ ವಿರುದ್ಧ ಹಲವಾರು ಆರೋಪಗಳನ್ನು ಹೊರಿಸುತ್ತಿರುವ ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹತ್ತು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗಳು ಹೀಗಿವೆ... 

ಕರ್ನಾಟಕವನ್ನು ಅತ್ಯಂತ ಭ್ರಷ್ಟ ರಾಜ್ಯವಾಗಿಸಿದ, ಬೆಂಗಳೂರು ನಗರವನ್ನು ಗಾರ್ಬೇಜ್ ಸಿಟಿ ಎಂದು ಕುಖ್ಯಾತಿ ಗಳಿಸುವಂತೆ ಮಾಡಿದ ಹಾಗೂ ರೈತರ ಮೇಲೆ ಗೋಲಿಬಾರ್‌ಗೆ ಆದೇಶಿಸಿದವರೊಬ್ಬರು ಈ ರೀತಿ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿರುವುದು ವಿಪರ್ಯಾಸ. ಆಧಾರ ರಹಿತ ಆರೋಪಗಳ ಹೊರತಾಗಿ ಕರ್ನಾಟಕದ 6.5 ಕೋಟಿ ಜನತೆಗೆ ನೀಡಲು ನಿಮ್ಮ ಬಳಿ ಏನಿದೆ?
ನೀವು ಅಭಿವೃದ್ಧಿಯ ಬಗ್ಗೆ ಚರ್ಚಿಸಬಹುದಾದರೆ, ದಯವಿಟ್ಟು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:

1. ಕನ್ನಡಿಗರ ಆಕಾಂಕ್ಷೆಯಂತೆ ನಾಡಿಗೆ ತನ್ನದೇ ಆದ ಪ್ರಮುಖ ಗುರುತು ಒದಗಿಸುವ ನಾಡ ಧ್ವಜ ಹೊಂದಲು ನೀವು ಬೆಂಬಲಿಸುತ್ತೀರಾ?
 2. ಸ್ವತಂತ್ರ ಧರ್ಮಕ್ಕಾಗಿ ಬಸವೇಶ್ವರ ಅನುಯಾಯಿಗಳ ಆಕಾಂಕ್ಷೆಗಳನ್ನು ನೀವು ಬೆಂಬಲಿಸುತ್ತೀರಾ?
3. ಮಹದಾಯಿ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಪ್ರಧಾನಮಂತ್ರಿಯವರ ಮಧ್ಯಸ್ಥಿಕೆಯನ್ನು ನೀವು ಬೆಂಬಲಿಸುತ್ತೀರಾ?
4. ಕೇಂದ್ರ ಸರಕಾರವು ವಾಣಿಜ್ಯ ಬ್ಯಾಂಕುಗಳಲ್ಲಿರುವ ರಾಜ್ಯದ ರೈತರ ಸಾಲ ಮನ್ನಾ ಮಾಡಬೇಕು ಎನ್ನುವುದನ್ನು ನೀವು ಬೆಂಬಲಿಸುತ್ತೀರಾ?
5. ಮಹಾರಾಷ್ಟ್ರದ ಯಾವತ್ಮಲ್‌ನಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಮತ್ತು ಅದಕ್ಕೆ ಪ್ರಧಾನಮಂತ್ರಿಗಳೆ ಹೊಣೆ ಎಂದು ದೂರಿದ್ದ. ಇದರ ಬಗ್ಗೆ ಬಿಜೆಪಿ ಸರಕಾರ ಏನು ಮಾಡುತ್ತಿದೆ? ರೈತರ ಆತ್ಮಹತ್ಯೆಗಳಿಗೆ ನೀವು ನಮ್ಮನ್ನು ದೂಷಿಸುತ್ತೀರಿ ಎಂದಾದರೆ ಈ ವಿಚಾರದಲ್ಲಿ ನೀವೇನು ಮಾಡುವಿರಿ?
6. ನೀವು ನೂರಾರು ಎಕರೆಗಳಷ್ಟು ಬಿಡಿಎ ಭೂಮಿಯನ್ನು ಡಿನೋಟಿಫೈ ಮಾಡಿದ್ದರಿಂದ ಹಲವಾರು ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ. ನೀವು ಏಕೆ ಹಾಗೆ ಮಾಡಿದ್ದು? ಬೆಂಗಳೂರಿನವರು ಮತ್ತೆ ನಿಮ್ಮನ್ನು ಹೇಗೆ ನಂಬುತ್ತಾರೆ?
7. ರೆಡ್ಡಿ ಸಹೋದರರು ರೂ.25,000 ಕೋಟಿ ಖನಿಜ ಸಂಪತ್ತನ್ನು ಲೂಟಿ ಮಾಡಲು ನೀವು ಬಿಟ್ಟದ್ದು ಏಕೆ? ಆ ಸಂದರ್ಭದಲ್ಲಿ ನೀವೇಕೆ ಅಸಹಾಯಕರಾದದ್ದು?
8. ನಾವು ಅನ್ನಭಾಗ್ಯ ಯೋಜನೆಯಡಿ ಸುಮಾರು 4 ಕೋಟಿಗೂ ಅಧಿಕ ಜನರಿಗೆ ಮಾಸಿಕ 7 ಕೆ.ಜಿ ಉಚಿತ ಅಕ್ಕಿ ಹಾಗೂ 1 ಕೋಟಿ ಮಕ್ಕಳಿಗೆ ಹಾಲು ನೀಡುತ್ತಿದ್ದೇವೆ. ನೀವು ಇದಕ್ಕಿಂತ ಭಿನ್ನವಾಗಿ ಏನು ಮಾಡುತ್ತೀರಿ?
9. ಬಿಜೆಪಿಯ ಮೂರು ಮುಖ್ಯಮಂತ್ರಿಗಳು 5 ವರ್ಷಗಳಲ್ಲಿ 6 ಕಿ.ಮೀ ಮೆಟ್ರೋ ಮಾರ್ಗವನ್ನು ನಿರ್ಮಿಸಿದ್ದರು. ನಾವು 5 ವರ್ಷಗಳಲ್ಲಿ 36 ಕಿ.ಮೀ ಮೆಟ್ರೋ ಮಾರ್ಗವನ್ನು ನಿರ್ಮಿಸಿದ್ದೇವೆ. ಹಂತ-2 ಅನ್ನು ನಿರ್ಮಿಸುತ್ತಿದ್ದೇವೆ ಮತ್ತು ಹಂತ-3 ಅನ್ನು ಸಿದ್ಧಪಡಿಸುತ್ತಿದ್ದೇವೆ.
10. ನಾವು ಭಾರತ ಸರಕಾರದಿಂದ ಉಪನಗರ ರೈಲು ಯೋಜನೆಗೆ ಅನುದಾನ ದೊರೆಯುವಂತೆ ಮಾಡಿದ್ದೇವೆ, ಎಲೆಕ್ಟ್ರಿಕಲ್ ಬಸ್‌ಗಳನ್ನು ಜಾರಿಗೊಳಿಸುತ್ತಿದ್ದೇವೆ, ಬಿಎಂಟಿಸಿ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸುತ್ತೇವೆ. ಸಂಚಾರ ದಟ್ಟಣೆ ನಿವಾರಣೆಗೆ ನಿಮ್ಮ ಪ್ರಕಾರ ಪರಿಹಾರವೇನು?
ಮತದಾರರೊಂದಿಗೆ ನಿಮ್ಮ ದೂರದೃಷ್ಟಿಯ ಬಗ್ಗೆ ಮಾತನಾಡಿ ಮತ್ತು ಆಧಾರ ರಹಿತ ಆರೋಪ ಮಾಡುವುದನ್ನು ನಿಲ್ಲಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News