ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮನುಷ್ಯನ ಸಂಹವನ ಬಹಳ ಬಡವಾಗಿದೆ: ಡಾ.ಮೊಗಳ್ಳಿ ಗಣೇಶ್
ಮೈಸೂರು,ಎ.12: ವಿದ್ಯುನ್ಮಾನ ಮಾಧ್ಯಮಗಳಲ್ಲಿ, ಬೇರೆ ಬೇರೆ ತಾಂತ್ರೀಕೃತ ವ್ಯವಸ್ಥೆಗಳಲ್ಲಿ ಮನುಷ್ಯನ ಸಂವಹನ ಬಹಳ ಬಡವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಮೊಗಳ್ಳಿ ಗಣೇಶ್ ಬೇಸರ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಜಾನಪದ ವಿಭಾಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಭಾಷಾ ಪ್ರಯೋಗಾಲಯದಲ್ಲಿ ಗುರುವಾರ ಆಯೋಜಿಸಲಾದ ಜಾನಪದ ಸರಣಿ ಉಪನ್ಯಾಸ-3ರಲ್ಲಿ ವಿದ್ಯುನ್ಮಾನ ಜಾನಪದ ಕುರಿತು ಉಪನ್ಯಾಸ ನೀಡಿದರು.
ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬೇರೇ ಬೇರೆ ತಾಂತ್ರೀಕೃತ ವ್ಯವಸ್ಥೆಗಳಲ್ಲಿ ಮನುಷ್ಯನ ಸಂವಹನ ಬಹಳ ಬಡವಾಗಿದೆ. ಮನುಷ್ಯನ ಮಾತಿನ ಮನುಷ್ಯತ್ವ ಬಹಳ ಕಡಿಮೆಯಾಗಿದೆ. ಮಾತಿನ ವ್ಯಾಪಾರ ಬಹಳ ಜೋರಾಗಿದೆ. ಮಾತಿನಲ್ಲಿನ ಅಂತಃಕರಣ ಕಳೆದು ಹೋಗಿದೆ ಎಂದು ವಿಷಾದಿಸಿದರು. ಈಗ ಮಾತಿನಿಂದಲೇ ಅವಘಡಗಳು ನಿರ್ಮಾಣವಾಗಲಿದೆ. ಮಾತು ರಾಜಕೀಯ ಉದ್ಯಮವಾಗಿದೆ. ಮಾತಿನಿಂದ ಏನೆಲ್ಲ ಅನಾಹುತಗಳು ನಡೆಯುತ್ತವೆ. ಅಂತರ್ಜಾಲದ ಹೊಸ ತಲೆ ಮಾರಿನ ಈ ಜನಪದ ವಿಶೇಷವಾಗಿ ಹಳೆಯ ಕಾಲದ ಜಾನಪದ ಪ್ರಕಾರಗಳ ಹಾಗೆ ಯಾವುದೇ ಸಾಹಿತ್ಯವನ್ನು ನಿರ್ಮಾಣ ಮಾಡುತ್ತಿಲ್ಲ. ಆಗತಾನೇ ಹುಟ್ಟಿ, ಆಗತಾನೇ ಲಯವಾಗುವ ಒಂದು ಬಗೆಯ ಅಭಿವ್ಯಕ್ತಿಯನ್ನು ಆತುರದ, ತುರ್ತಿನ ಅಭಿವ್ಯಕ್ತಿಗಳನ್ನು ಮಾತ್ರ ಮಾಡುತ್ತದೆ ಎಂದು ಹೇಳಿದರು.
ಇದರಿಂದ ಭಾಷೆಗಳ, ನಾಗರಿಕತೆಗಳ, ಮಾನವನ ಸಂಬಂಧಗಳು ಗಟ್ಟಿಯಾಗಿ ಉಳಿಯುತ್ತಿಲ್ಲ. ಇದು ತುರ್ತಿನಿಂದ ಹುಟ್ಟುವ ಗೂಳಿ ಕಾಳಗದ ಕಾಲ. ಮಾತು ಜಾಗತೀಕರಣಗೊಂಡ ಮಾರುಕಟ್ಟೆ. ಮಾತಿನ ಜಾಗತೀಕರಣ ಅತ್ಯಂತ ವೇಗವಾಗಿ ಬೆಳೆದಿದೆ. ಆಧುನಿಕತೆ ಬೆಳೆದಂತೆ ಯಂತ್ರಗಳ ಮೂಲಕ ಹೆಚ್ಚು ಹೆಚ್ಚು ಉತ್ಪಾದನೆ ನಡೆಯುತ್ತಿದೆ. ಉತ್ಪಾದನೆಗೆ ತಕ್ಕಂತೆ ಬದಲಾವಣೆ, ಮೊಬೈಲ್ ಕ್ರಾಂತಿ, ಅಂತರ್ಜಾಲದ ಕ್ರಾಂತಿ ನಡೆದಿದೆ ಎಂದು ತಿಳಿಸಿದರು.
ಜಾನಪದೀಯ ವಾದ್ಯಗಳನ್ನು ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಪ್ರೀತಿ ಶ್ರೀಮಂಧರ್ ಕುಮಾರ್, ಜಾನಪದ ಅಧ್ಯಯನ ಮಂಡಳಿಯ ಡಾ.ಎಂ.ನಂಜಯ್ಯ ಹೊಂಗನೂರು ಮತ್ತಿತರರು ಉಪಸ್ಥಿತರಿದ್ದರು.