ಮೂಡಿಗೆರೆ: ಕಿರಿದಾದ ಕಾಂಕ್ರೀಟ್ ರಸ್ತೆ ನಿರ್ಮಾಣ; ಪಪಂ ವಿರುದ್ಧ ಸ್ಥಳೀಯರ ಆಕ್ರೋಶ
ಮೂಡಿಗೆರೆ, ಎ.12: ಪಟ್ಟಣದ ತತ್ಕೊಳ ರಸ್ತೆಯ ಶಾಲಿನಿ ಕ್ಲಿನಿಕ್ ಸಮೀಪದ ಅಡ್ಡರಸ್ತೆಯ ಕಾಮಗಾರಿ ಸಮರ್ಪಕವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಈ ರಸ್ತೆ ಮೊದಲೇ ಇಕ್ಕಟ್ಟಿನ ರಸ್ತೆಯಾಗಿತ್ತು. ಈಗ ಇನ್ನಷ್ಟು ಕಿರಿದಾಗಿಸಿ ವಾಹನಗಳ ಸಂಚಾರಕ್ಕೆ ತೊಡಕಾಗುವಂತೆ ಕಾಂಕ್ರೀಟ್ ಕಾಮಗಾರಿ ಮಾಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ವಿವಿಧ ರಸ್ತೆಗಳನ್ನು ನಗರೋತ್ಥಾನ ಅನುದಾನ ಬಳಸಿ ಪಪಂ.ನಿಂದ ಕಾಂಕ್ರಿಟೀಕರಣ ಕಾಮಗಾರಿ ನಡೆಸುತ್ತಿದ್ದು, ಜೆಎಂ.ರಸ್ತೆ ಸೇರಿದಂತೆ ಕೆಲವೆಡೆ ಕಿರಿದಾಗಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕಾಂಕ್ರೀಟ್ ರಸ್ತೆಯನ್ನು ನಿಯಮದ ಪ್ರಕಾರ ಕನಿಷ್ಠ ಮೂರೂವರೆ ಮೀಟರ್ ಅಗಲವಾಗಿ ನಿರ್ಮಿಸಬೇಕು. ಆದರೆ ಇಲ್ಲಿ ಕೇವಲ ಮೂರು ಮೀಟರ್ ಅಗಲದ ರಸ್ತೆ ನಿರ್ಮಿಸಲಾಗಿದೆ. ರಸ್ತೆಯನ್ನು ನೆಲಮಟ್ಟಕ್ಕೆ ನಿರ್ಮಿಸಿದ್ದರೆ ವಾಹನಗಳು ಬದಿಗೆ ಸರಿದು ಚಲಿಸಲು ಅವಕಾಶವಾಗುತ್ತಿತ್ತು. ಆದರೆ ಅರ್ಧ ಅಡಿಯಷ್ಟು ಮೇಲ್ಮಟ್ಟಕ್ಕೆ ನಿರ್ಮಿಸಿರುವ ಪರಿಣಾಮ ವಾಹನಗಳು ರಸ್ತೆಯಿಂದ ಕೆಳಕ್ಕೆ ಇಳಿಯುವಂತಿಲ್ಲ. ಹೀಗಾಗಿ ಇಂತಹ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಅಭಿಮುಖ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಎಸ್ಟಿಮೇಟ್‍ನ ಪ್ರಕಾರ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಸಿದ್ಧ ಉತ್ತರ ನೀಡುತ್ತಿದ್ದಾರೆ. ಅತ್ಯಂತ ಕಿರಿದಾದ ರಸ್ತೆ ನಿರ್ಮಾಣದಿಂದ ಪ್ರತಿನಿತ್ಯ ಬೆಳೆಯುತ್ತಿರುವ ಮೂಡಿಗೆರೆ ಪಟ್ಟಣದಲ್ಲಿ ವಾಹನಗಳ ದಟ್ಟಣೆಯಂತೂ ದುಪ್ಪಟವಾಗುತ್ತಿದೆ. ಪಟ್ಟಣ ಪಂಚಾಯತ್ ನಿಂದ ಪುರಸಭೆ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಬಗ್ಗೆಯೂ ಸ್ಥಳೀಯ ಜನಪ್ರತಿನಿಧಿಗಳು ಆಗಾಗ ಭಾಷಣದಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ರಸ್ತೆಗಳನ್ನು ಮಾತ್ರ ಮೇಲ್ದರ್ಜೆಗೇರಿಸುವ ಬಗ್ಗೆ ಮುಂದಾಲೋಚನೆ ಮಾಡದಿರುವುದು ವಾಹನ ದಟ್ಟಣೆ ಇನ್ನಷ್ಟು ಹೆಚ್ಚಾಗಲು ಕಾರಣವಾಗುತ್ತಿದೆ ಎನ್ನಲಾಗುತ್ತಿದೆ.