×
Ad

ಚಿಕ್ಕಮಗಳೂರು: ಯುರೇಕಾ ಅಕಾಡೆಮಿಯಲ್ಲಿ ತಿಂಗಳ ಸಂಗೀತ ಕಾರ್ಯಕ್ರಮ

Update: 2018-04-12 22:41 IST

ಚಿಕ್ಕಮಗಳೂರು, ಎ.12: ಇಡೀ ದೇಶವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವ ಹಾಗೆ ಮಾಡಿದ ಕಲಾವಿದ ರವಿಚಂದ್ರನ್ ಎಂದು ನಗರಸಭೆ ಸದಸ್ಯ ಎಂ.ಆರ್.ದೇವರಾಜ ಶೆಟ್ಟಿಯವರು ಅಭಿಪ್ರಾಯಿಸಿದರು.

ಗುರುವಾರ ನಗರದ ಯುರೇಕಾ ಅಕಾಡೆಮಿಯಲ್ಲಿ ತಿಂಗಳ ಸಂಗೀತ ಕಾರ್ಯಕ್ರಮದ ಅಂಗವಾಗಿ ಈ ತಿಂಗಳು ಕನ್ನಡದ ಕನುಸುಗಾರ ನಿರ್ದೇಶಕ, ನಿರ್ಮಾಪಕ, ನಟ, ಸಂಗೀತ ನಿರ್ದೇಶನಕ ಕ್ರೇಜಿ ಸ್ಟಾರ್ ರವಿಚಂದ್ರನ್ ವಿಶೇಷ 'ಕನಸುಗಾರ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರವಿಚಂದ್ರನ್ ಚಿತ್ರಗಳು ಎಂದರೆ ಮಹಿಳಾ ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಅವರ ಚಿತ್ರಗಳಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಶಸ್ತ್ಯವಿರುತ್ತದೆ. ಅವರು ಸೋಲು, ಗೆಲುವಿಗೆ ಅಂಜದೇ ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ತಂದು ಕೊಟ್ಟರು ಎಂದು ಹೇಳಿದರು.

ಗಾಯಕ, ಉದ್ಯಮಿ ಪಿ.ಎಸ್.ದೀಪಕ್ ಮಾತನಾಡಿ, ಸುಧೀರ್ ಹಾಗೂ ಎಂ.ಎಸ್.ಪೂರ್ವಿ ಅವರು ಗಾಯಕರ ತಂಡವನ್ನು ಕಟ್ಟಿ ಕಲಾವಿದರಿಗೆ ವೇದಿಕೆ ಅವಕಾಶವನ್ನು ನೀಡುತ್ತಿರುವುದು ಸಂತಸ ತಂದಿದೆ. ಗಾಯಕರಾಗಿ ತಾನೂ ಬೆಳೆದು ಇತರನ್ನೂ ಬೆಳೆಸುತ್ತಿರುವ ಇಂತಹ ಕಲಾವಿದರನ್ನು ನಾವು ಪಡೆದಿರುವುದು ಬಹಳ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿಯ ದೀಪಕ್ ದೊಡ್ಡಯ್ಯ ಮಾತನಾಡಿ, ಎಲ್ಲಾ ವೃತ್ತಿರಂಗದಲ್ಲೂ ಸ್ಪರ್ಧೆ ಸಾಮಾನ್ಯ, ಮತ್ಸರವಿಲ್ಲದೆ ಕೆಲಸ ಮಾಡುವುದು ತುಂಬಾ ಅಪರೂಪ. ಒಂದು ಮೇಣದ ಬತ್ತಿಯಿಂದ ನೂರಾರು ದೀಪ ಬೆಳಗಿಸಬಹುದು. ಆದರೆ ಆ ಮೇಣದ ಬತ್ತಿಯ ಬೆಳಕು ಎಂದಿಗೂ ಕಮ್ಮಿಯಾಗುವುದಿಲ್ಲ. ಕಲಾವಿದರನ್ನು ಬೆಳೆಸುತ್ತಾ ತಾನೂ ಬೆಳೆಯುತ್ತಿರುವ ಪೂರ್ವಿ ತಂಡಕ್ಕೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದರು.

ಚಿಕ್ಕಮಗಳೂರಿನ ಕ್ರಿಯಾಶೀಲ ಛಾಯಾಗ್ರಾಹಕ, ವ್ಯಂಗ್ಯಚಿತ್ರ ಕಲಾವಿದ ದಯಾನಂದ್ ಮುಖ್ಯ ಅತಿಥಿಗಳಾಗಿದ್ದರು. ಎಂ.ಎಸ್.ಸುಧೀರ್ ಸ್ವಾಗತಿಸಿ, ರಾಯ್ ನಾಯಕ್ ವಂದಿಸಿದರು. ಸಮಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ವಿಶೇಷವೆಂಬಂತೆ ಈ ಬಾರಿ  ಎರಡು ದಿನಗಳ ಕಾಲ ರವಿಚಂದ್ರನ್ ಹಾಡುಗಳ ರಸದೌತಣ ಮನರಂಜಿಸಿತು. ಹೊಸ ಪ್ರತಿಭೆಗಳನ್ನು ಪರಿಚಯಿಸುವ ಈ ಕಾರ್ಯಕ್ರಮದಲ್ಲಿ ಈ ಬಾರಿ ಇಬ್ಬರು ಹೊಸ ಕಲಾವಿದರು ತಮ್ಮ ಪ್ರತಿಭಾ ಪ್ರದರ್ಶನ ಮಾಡಿದರು. ಗಾಯನದಲ್ಲಿ ಎಂ.ಎಸ್.ಸುಧೀರ್, ಮೋಹನ್ ಕುಮಾರ್, ರಾಯ್‍ನಾಯಕ್, ಸಾರಥಿ ವೆಂಕಟೇಶ್, ದೀಪಕ್ ಪಿ.ಎಸ್, ಚೈತನ್ಯ, ಸಾತ್ವಿಕ್, ಶ್ರೀಮುತಿ ಕವಿತಾ ನಾಯಕ್, ರೂಪ ಅಶ್ವಿನ್, ಅರ್ಚನಾರಾವ್, ಶೃತಿ ಶ್ರೀಕಾಂತ್, ಅನುಷಾ, ಅಂಚನ್, ಲಕ್ಷ್ಮೀವಿನಯ್, ದೀಪ ಪ್ರದೀಪ್ ಅವರುಗಳು ತಮ್ಮ ಕಂಠಸಿರಿಯಿಂದ ಎಲ್ಲರ ಮನಸೊರೆಗೊಂಡರು. ಎರಡು ದಿನಗಳ ರವಿಚಂದ್ರನ್ ಗೀತೆಗಳನ್ನು ತಂಡದ ಎಲ್ಲಾ ಗಾಯಕರು ಪ್ರಸ್ತುತ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News