ಸಚಿವೆ ಉಮಾಶ್ರೀ, ಸಂಸದೆ ಶೋಭಾ ವಿರುದ್ಧ ಸ್ಫರ್ಧೆ: ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ
ಚಿಕ್ಕಮಗಳೂರು, ಎ.12: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾನು ಕೆಜೆಪಿ ಪಕ್ಷದಿಂದ ರಾಜ್ಯ ಎರಡು ಕ್ಷೇತ್ರಗಳ್ಲಿ ಸ್ಪರ್ಧಿಸಲಿದ್ದು, ಬಾಗಲಕೋಟೆ ಜಿಲ್ಲೆಯ ತೆರದಾಳ್ ಹಾಗೂ ಯಶವಂತಪುರ ಕ್ಷೇತ್ರದಲ್ಲಿ ಸ್ಫರ್ಧಿಸುವುದಾಗಿ ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ತೆರದಾಳ್ ಕ್ಷೇತ್ರದಲ್ಲಿ ಉಮಾಶ್ರೀಯವರ ವಿರುದ್ಧ ಹಾಗೂ ಯಶವಂತಪುರ ಕ್ಷೇತ್ರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಎರಡು ಕ್ಷೇತ್ರದಲ್ಲಿ ಸ್ಫರ್ಧಿಸುವುದಾಗಿ ತಿಳಿಸಿದರು.
ಈ ಎರಡು ಕ್ಷೇತ್ರದಲ್ಲಿ ಈಗಾಗಲೇ ಮೂರು ಬಾರಿ ಪ್ರವಾಸ ಮಾಡಿದ್ದೇನೆ. ಲೇಡಿ ಹಿಟ್ಲರ್ ಶೋಭಾ ಕರಂದ್ಲಾಜೆ ವಿರುದ್ಧ ಸ್ಫರ್ಧಿಸಿ ಸೋಲಿಸಲೇ ಬೇಕು ಎಂದು ಪಣ ತೋಟಿದ್ದೇನೆ ಎಂದರು.
ಶೋಭಾ ಕರಂದ್ಲಾಜೆ ವಿರುದ್ಧ ನಿಮಗೇಕೆ ಅಷ್ಟು ಸಿಟ್ಟು ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪರವರು ಕೆಜೆಪಿ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆಯವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಲು ಮುಂದಾದರು. ಅದನ್ನು ನಾನು ವಿರೋಧಿಸಿದೆ. ಆದ್ದರಿಂದ ನನ್ನ ಮೇಲೆ ದ್ವೇಷ ಬೆಳೆಸಿಕೊಂಡರು. ಅವರು ತನ್ನನ್ನು ಸರ್ವನಾಶ ಮಾಡುವ ಉದ್ದೇಶದಿಂದ ತನ್ನ ವಿರುದ್ಧ ಮಾಟಮಂತ್ರ ಮಾಡಿಸಿದ್ದರು. ಹಾಗೂ ಬೆಂಗಳೂರಿನ ಪ್ರೆಸ್‍ಕ್ಲಬ್ ಮತ್ತು ಶಿವಮೊಗ್ಗದಲ್ಲಿ ತನ್ನ ಮೇಲೆ ಹಲ್ಲೆ ಮಾಡಿಸಿದರು. ಅವರನ್ನು ಕೆಜೆಪಿ ಕಾರ್ಯಾಧ್ಯಕ್ಷರನ್ನಾಗಿ ಮಾಡದಿರಲು ತಾನು ಅಡ್ಡಿಪಡಿಸಿದ್ದಕ್ಕೆ ತನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಇದನ್ನು ಹೊರತು ತನಗೂ ಅವರಿಗೂ ವೈಯಕ್ತಿಕ ದ್ವೇಷವಿಲ್ಲ ಎಂದರು.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಕೆಜೆಪಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಈಗಾಗಲೇ 46 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂರು ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದೆ. ಎರಡನೇ ಪಟ್ಟಿಯನ್ನು ಏ.15ರಂದು ಗುಲ್ಬರ್ಗಾದಲ್ಲಿ ಬಿಡುಗಡೆ ಮಾಡಲಾಗುವುದು ಹಾಗೂ ಅಂತಿಮ ಪಟ್ಟಿಯನ್ನು ಏ.17ರಂದು ಬೆಂಗಳೂರಿನಲ್ಲಿ ಬಿಡುಗಡೆಮಾಡಲಾಗುವುದು ಎಂದರು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದದಿಂದ ದಿಲೀಪ್ ಕುಮಾರ್, ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಹೆಚ್. ವಿ. ಬಾಲರಾಜ್, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಜಯರಾಮ್‍ರವರು ಸ್ಫರ್ಧಿಸಲಿದ್ದಾರೆ. ಉಳಿದ ಎರಡು ಕ್ಷೇತ್ರದ ಅಭ್ಯರ್ಥಿಗಳನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಲಾಗುವುದು ಎಂದರು.
ಕೆಜೆಪಿ ಮೊದಲ ಪಟ್ಟಿಯಲ್ಲಿ 10 ಜನ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಯಶವಂತಪುರ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆಯವರು ಸ್ಫರ್ಧಿಸಲಿದ್ದು, ಅವರನ್ನು ಠೇವಣಿ ಇಲ್ಲದಂತೆ ಸೇಲಿಸಲು ಕೆಜೆಪಿಯಿಂದ ಮಾಸ್ಟರ್ ಪ್ಲಾನ್ ರೆಡಿಮಾಡಿದ್ದೇವೆ. ಯಾವ ರೀತಿಯ ಪ್ಲಾನ್ ಮಾಡಿದ್ದೇವೆ ಎಂಬುದು ಚುನಾವಣೆ ನಂತರದಲ್ಲಿ ತಿಳಿಯಲಿದೆ. ರಾಜ್ಯದಲ್ಲಿ 30 ಸ್ಥಾನಗಳನ್ನು ಕೆಜೆಪಿ ಪಡೆದುಕೊಳ್ಳುವ ವಿಶ್ವಾಸವಿದೆ ಎಂದರು.
ಸುದ್ಧಿಗೊಷ್ಠಿಯಲ್ಲಿ ಕೆಜೆಪಿ ಜಿಲ್ಲಾ ಕಾರ್ಯದರ್ಶಿ ರಾಜಶೇಖರ್, ಮೂಡಿಗೆರೆ ಕ್ಷೇತ್ರದ ಅಭ್ಯರ್ಥಿ ದಿಲೀಪ್ ಕುಮಾರ್, ತರೀಕೆರೆ ಅಭ್ಯರ್ಥಿ ಜಯರಾಮ್, ಸುನೀಲ್ ಕುಮಾರ್ ಇದ್ದರು.
ಶೋಭಾಕರಂದ್ಲಾಜೆ ಹಾಗೂ ಬಿಎಸ್ ಯಡಿಯೂರಪ್ಪರವರ ಸಿಡಿ ತಮ್ಮ ಬಳಿ ಇದೆ ಎನ್ನುತ್ತೀರಿ. ಅದನ್ನು ಬಿಡುಗಡೆಗೊಳಿಸಿ ಎಂಬ ಪತ್ರಕರ್ತರ ಪ್ರಶ್ನೆಗೆ 'ಚುನಾವಣಾ ನೀತಿ ಸಂಹಿತೆ ಇರುವುದರಿಂದ ಸಿ.ಡಿ. ವಿಚಾರ ಮಾತನಾಡುವುದಿಲ್ಲ' ಎಂದರು. ಸಿ.ಡಿ ವಿಚಾರವೊಂದು ಬುಟ್ಟಿಯೊಳಗಿನ ಹಾವಿನ ತರ ಬುಸುಗುಟ್ಟುವುದು ಮಾತ್ರನಾ ಎಂಬ ಪ್ರಶ್ನೆಗೆ 'ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ' ಎಂದು ಹಾರಿಕೆಯ ಉತ್ತರ ನೀಡಿದರು.