ತುಮಕೂರು ಜಿಲ್ಲೆಯಲ್ಲಿ 25 ಪಿಂಕ್ ಮತಗಟ್ಟೆಗಳು: ಜಿಲ್ಲಾಧಿಕಾರಿ ಕೆ.ಪಿ. ಮೋಹನ್‍ರಾಜ್
ತುಮಕೂರು,ಎ.12: ಚುನಾವಣಾ ಆಯೋಗದ ನಿರ್ದೇಶನದಂತೆ ಮಹಿಳಾ ಸಿಬ್ಬಂದಿಗಳೇ ಕರ್ತವ್ಯ ನಿರ್ವಹಿಸುವ 25 ಪಿಂಕ್ ಮತಗಟ್ಟೆಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಕೆ.ಪಿ. ಮೋಹನ್‍ರಾಜ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಚುನಾವಣಾ ಸಿದ್ಧತೆಯ ಬಗ್ಗೆ ನೋಡೆಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರು ನಗರದಲ್ಲಿ 5 ಮತಗಟ್ಟೆಗಳು ಹಾಗೂ ಉಳಿದಂತೆ ಜಿಲ್ಲೆಯಾದ್ಯಂತ 20 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಆಗಿರುತ್ತಾರೆ. ಈ ಬಗ್ಗೆ ಸಂಬಂಧಿಸಿದ ನೋಡೆಲ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ತುಮಕೂರು ಜಿಲ್ಲೆಯಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಮತಗಟ್ಟೆಗಳಲ್ಲಿ ರ್ಯಾಂಪ್‍ನಿರ್ಮಾಣ, ಶೌಚಾಲಯಗಳ ರಿಪೇರಿ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಬಾಕಿ ಮತಗಟ್ಟೆಗಳಲ್ಲಿ ರಿಪೇರಿ ಕಾರ್ಯಗಳು ಕೈಗೊಳ್ಳಲು ಆರ್‍ಓ ಹಾಗೂ ಎಆರ್‍ಓಗಳ ಮೂಲಕ ಅಂದಾಜು ಪಟ್ಟಿಯನ್ನು ಸಲ್ಲಿಸಿ ಅನುಮತಿ ಪಡೆಯುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಾರ್ವಜನಿಕರು, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಗೆ ವಿವಿಧ ಸೇವೆ ಒದಗಿಸುವ ಅನುಕೂಲಕ್ಕಾಗಿರುವ ಸುವಿಧ, ಸುಗಮ ಹಾಗೂ ಸಮಾಧಾನ್ ಮೂಲಕ ಸ್ವೀಕರಿಸಿರುವ ಅರ್ಜಿಗಳ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಅರ್ಜಿಗಳನ್ನು ನಿಯಮಾನುಸಾರ ನಿಗಧಿತ ಸಮಯದಲ್ಲಿ ವಿಲೇವಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪೋಸ್ಟಲ್ ಬ್ಯಾಲೇಟ್ ಹಾಗೂ ಸರ್ವೀಸ್ ವೋಟ್ಸ್ ಮತದಾರರ ಬಗ್ಗೆ ಮಾಹಿತಿ ಪಡೆದು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಿಸಿದ ನೋಡೆಲ್ ಅಧಿಕಾರಿಗೆ ಸೂಚಿಸಿದರಲ್ಲದೆ, ಮತದಾನ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಸಿಬ್ಬಂದಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸಬೇಕಾಗಿದೆ. ಇದಕ್ಕಾಗಿ ಎಲ್ಲಾ ರೀತಿಯಲ್ಲೂ ಸಿದ್ಧತೆಗಳನ್ನು ಮಾಡಿಕೊಳ್ಳಿ. ಚುನಾವಣಾ ಸಿಬ್ಬಂದಿಗಳ ಯೋಗಕ್ಷೇಮ ನೋಡಿಕೊಳ್ಳುವುದು ಅತಿಮುಖ್ಯ ಎಂದರು.
ಚುನಾವಣಾ ಕರ್ತವ್ಯದಲ್ಲಿ ಅರೆ ಸೇನಾಪಡೆ: ಚುನಾವಣೆಯನ್ನು ಪಾರದರ್ಶಕ ಹಾಗೂ ಶಾಂತಿಯುತವಾಗಿ ನಡೆಸಲು ಹಾಗೂ ಚುನಾವಣಾ ಅಕ್ರಮಗಳನ್ನು ತಡೆಯಲು ಸಶಸ್ತ್ರ ಸೇನಾ ಬಲ(ಬಿ.ಎಸ್.ಎಫ್.)ಕೇಂದ್ರೀಯ ಮೀಸಲು ಪಡೆ ಹಾಗೂ ಇಂಡೊ-ಟಿಬೇಟಿಯನ್ ಬಾರ್ಡ್‍ರ್ ಪೊಲೀಸ್‍ನ 549 ಯೋಧರು ತುಮಕೂರು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದಾರೆ ಎಂದು ಸಭೆಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್‍ಎಫ್‍ನ 89 ಯೋಧರು, ಪಾವಗಡದಲ್ಲಿ 91 ಬಿಎಸ್‍ಎಫ್ ಯೋಧರು, ಚಿಕ್ಕನಾಯಕನಹಳ್ಳಿಯಲ್ಲಿ 96 ಬಿಎಸ್‍ಎಫ್, ಕುಣಿಗಲ್‍ನಲ್ಲಿ ಐಟಿಬಿಪಿಯ 91 ಯೋಧರು, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ 102 ಸಿಆರ್‍ಪಿಎಫ್ ಯೋಧರು, ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ 80 ಬಿಎಸ್‍ಎಫ್ ಯೋಧರನ್ನು ಭದ್ರತೆ ಹಾಗೂ ಚುನಾವಣಾ ಅಕ್ರಮಗಳನ್ನು ತಡೆಯಲು ನಿಯೋಜಿಸಲಾಗಿದೆ. ಚೆಕ್ ಪೋಸ್ಟ್‍ಗಳಲ್ಲಿ ಯೋಧರನ್ನು ನಿಯೋಜಿಸಲಾಗಿದ್ದು, ಇವರೊಂದಿಗೆ ಸ್ಥಳೀಯ ಪೊಲೀಸರು ಕೂಡ ಕರ್ತವ್ಯದಲ್ಲಿರುತ್ತಾರೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೋಮಶೇಖರ್, ಸಿಇಓ ಅನೀಸ್ ಕಣ್ಮಣಿ ಜಾಯ್ ಸೇರಿದಂತೆ ನೋಡೆಲ್ ಅಧಿಕಾರಿಗಳು ಭಾಗವಹಿಸಿದ್ದರು.