ಗುಂಡ್ಲುಪೇಟೆ: ಬಸ್ಸಿಲ್ಲಿ ಬಿಟ್ಟಿದ್ದ ಆಭರಣಗಳನ್ನು ಮಹಿಳೆಗೆ ಮರಳಿಸಿದ ಆರೋಗ್ಯಾಧಿಕಾರಿಯ ವಾಹನ ಚಾಲಕ

Update: 2018-04-12 17:44 GMT

ಗುಂಡ್ಲುಪೇಟೆ,ಎ.12: ಆರೋಗ್ಯ ಇಲಾಖೆಯ ವಾಹನ ಚಾಲಕನೊಬ್ಬ ಚಿನ್ನದ ಆಭರಣಗಳನ್ನು ಬಸ್ಸಿನಲ್ಲಿ ಬಿಟ್ಟಿದ್ದ ಮಹಿಳೆಗೆ ಮತ್ತೆ ದೊರಕುವಂತೆ ಮಾಡಿರುವ ಘಟನೆ ನಡೆದಿದೆ. 

ತಾಲೂಕು ಆರೋಗ್ಯಾಧಿಕಾರಿಗಳ ವಾಹನ ಚಾಲಕ ದಯಾನಂದ್ ತಾಲೂಕಿನ ತೆರಕಣಾಂಬಿ ಬಸ್ ನಿಲ್ದಾಣದಲ್ಲಿ ಗೋಳಾಡುತ್ತಿದ್ದ ಮಹಿಳೆಗೆ ಆಭರಣಗಳು ದೊರಕುವಂತೆ ಮಾಡಿದವರು. ಎ.11ರ ಸಂಜೆ 6 ಗಂಟೆಯ ಸಮಯದಲ್ಲಿ ತಾಲೂಕಿನ ಹುಲ್ಲೇಪುರ ಗ್ರಾಮದ ಮಂಜುಳಾ ಎಂಬವರು ಚಾಮರಾಜನಗರದ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಗಿರವಿಗಿಟ್ಟಿದ್ದ ಮೂರು ಲಕ್ಷ ರೂಪಾಯಿ ಬೆಲೆಯ ಆಭರಣಗಳನ್ನು ಬಿಡಿಸಿಕೊಂಡು ಸ್ವಗ್ರಾಮಕ್ಕೆ ತೆರಳಲು ಗುಂಡ್ಲುಪೇಟೆಗೆ ಹೋಗುವ ಸಾರಿಗೆ ಬಸ್ ಹತ್ತಿ ತೆರಕಣಾಂಬಿಯಲ್ಲಿ ಇಳಿಯುವಾಗ ಆಭರಣವಿದ್ದ ಬ್ಯಾಗನ್ನು ಮರೆತಿದ್ದಾರೆ. ನಂತರ ಆಭರಣ ಬಿಟ್ಟಿರುವುದು ಗಮನಕ್ಕೆ ಬಂದಿದೆ. 

ಬೆಲೆಬಾಳುವ ಆಭರಣಗಳು ಕೈತಪ್ಪುವ ಭೀತಿಯಲ್ಲಿ ರೋಧಿಸುತ್ತಿದ್ದುದನ್ನು ಕಂಡ ಚಾಲಕ ದಯಾನಂದ್ ಆಕೆಯ ಕೈಯಲ್ಲಿದ್ದ ಟಿಕೆಟ್ ಆಧಾರದ ಮೇಲೆ ಬಸ್ ನಂಬರ್ ಗುರುತಿಸಿ ತಮ್ಮ ಇಲಾಖೆಯ ಸಿಬ್ಬಂದಿಗೆ ಕರೆ ಮಾಡಿ ಗುಂಡ್ಲುಪೇಟೆಯ ನಿಲ್ದಾಣಕ್ಕೆ ಬಂದ ಬಸ್‍ನಿಂದ ಬ್ಯಾಗ್ ಸಂಗ್ರಹಿಸಿ ಆಕೆಗೆ ನೀಡಿದ್ದಾರೆ. 'ಆಭರಣ ಕಳೆದುಹೋಗಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತಿತ್ತು. ಸದ್ಯ ದೇವರ ರೂಪದಲ್ಲಿ ದಯಾನಂದ್ ಬಂದು ನಮ್ಮಕುಟುಂಬವನ್ನು ಉಳಿಸಿದರು' ಎಂದು ಮಹಿಳೆ ಧನ್ಯವಾದ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News