ಮದ್ದೂರು ಕ್ಷೇತ್ರದಿಂದ ಕಲ್ಪನ, ಮಧು ಮಾದೇಗೌಡ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್: ಎನ್.ಚಲುವರಾಯಸ್ವಾಮಿ

Update: 2018-04-12 18:25 GMT

ಮದ್ದೂರು, ಎ.12: ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕರಾದ ಕಲ್ಪನ ಸಿದ್ದರಾಜು ಮತ್ತು ಮಧು ಮಾದೇಗೌಡರಲ್ಲಿ ಒಬ್ಬರು ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಗುರುವಾರ ನಾಗಮಂಗಲ ವಿಧಾನಸಭಾ ಕ್ಷೇತ್ರದ ಗುಡಿದೊಡ್ಡಿ ಗ್ರಾಮದ ಬೀರೇಶ್ವರ ಚನ್ನಕೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕೊಪ್ಪ ವೃತ್ತದ ಚುನಾವಣಾ ಪ್ರಚಾರ ಆರಂಭಿಸಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಟಿಕೆಟ್ ಆಕಾಂಕ್ಷಿತರಾಗಿದ್ದ ವಿಧಾನಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ ಮತ್ತು ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ಅವರ ಮನವೊಲಿಸಲಾಗಿದ್ದು, ಕಲ್ಪನ ಅಥವಾ ಮಧು ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಅವರು ಹೇಳಿದರು.

ಎ.20 ರಂದು ನಾಗಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸ್ಪರ್ಧಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ. ನಂತರ, ಮಧ್ಯಾಹ್ನ ನಾಗಮಂಗಲ ಪಟ್ಟಣದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಾ.ಎಚ್.ಸಿ.ಮಹದೇವಪ್ಪ, ಇತರ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಬರುವುದಿಲ್ಲ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ. ಅನೇಕ ಸಮೀಕ್ಷೆಗಳೂ ಇದನ್ನೇ ಹೇಳಿವೆ. ಮಂಡ್ಯ ಜಿಲ್ಲೆಯಲ್ಲಿ ಕನಿಷ್ಠ 4ರಿಂದ 5 ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಕೈಗೊಂಡಿರುವ ಹಲವಾರು ಜನೋಪಯೋಗಿ ಕೆಲಸಗಳಿಂದ ಮತದಾರರು ಕಾಂಗ್ರೆಸ್‍ಗೆ ಮತ ಹಾಕಲಿದ್ದಾರೆ. ನನ್ನ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂ.ಗಳ ಅನುದಾನದಲ್ಲಿ ಅನೇಕ ಅಭಿವೃದ್ಧಿ ಕೆಲಸ ಕೈಗೊಂಡಿದ್ದೇನೆ ಎಂದು ಅವರು ಹೇಳಿದರು.

ಗುಡಿದೊಡ್ಡಿ, ಮರಳಿಗ, ಗೊಲ್ಲರದೊಡ್ಡಿ, ಕೋಣಸಾಲೆ, ಗೂಳೂರು, ಬಿದರಕೋಟೆ, ಮೂಡಲದೊಡ್ಡಿ, ಹುರುಗಲವಾಡಿ, ನಂಬಿನಾಯಕನಹಳ್ಳಿ, ಡಿ.ಹೊಸಹಳ್ಳಿ, ಚೊಟ್ಟನಹಳ್ಳಿ ಸೇರಿದಂತೆ ಕೊಪ್ಪ 1ನೆ ವೃತ್ತದ ಗ್ರಾಮಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡರು.

ತಾಪಂ ಮಾಜಿ ಸದಸ್ಯರಾದ ಬಿ.ಎಂ.ರಘು, ಮರಳಿಗ ಸ್ವಾಮಿ, ಜಿಪಂ ಮಾಜಿ ಸದಸ್ಯ ಜವರಹರಲಾಲ್, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಜೋಗಿಗೌಡ,  ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರೀಗೌಡ,  ವಿ.ಕೆ.ಜಗದೀಶ್, ಗ್ರಾಪಂ ಮಾಜಿ ಅಧ್ಯಕ್ಷ ದಿವಾಕರ್, ಕೋಳಿ ಫಾರಂ ವೆಂಕಟೇಶ್, ಯೋಗಾನಂದ, ಗುಡಿದೊಡ್ಡಿ ತಮ್ಮಯ್ಯ,  ಗೀತಾಶಿವರಾಮು, ಪಣ್ಣೆದೊಡ್ಡಿ ವಿಜಯೇಂದ್ರ, ಮರಳಿಗ ವಾಸು, ಗೊಲ್ಲರದೊಡ್ಡಿ ಜಯರಾಂ, ಇತರ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News