ಮಧ್ಯಪ್ರದೇಶದ 80 ಶಾಲೆಗಳಿಗೆ ಮರು ನಾಮಕರಣ

Update: 2018-04-15 14:26 GMT

ಹೊಸದಿಲ್ಲಿ, ಎ. 15: ಸಿಂಗ್ರೌಲಿ ಜಿಲ್ಲೆಯಲ್ಲಿರುವ 80 ಸರಕಾರಿ ಶಾಲೆಗಳಿಗೆ ಮರು ನಾಮಕರಣ ಮಾಡಲಾಗಿದೆ. ಈ ಶಾಲೆಗಳ ಹೆಸರಲ್ಲಿ ಜಾತಿ ಸೂಚಕ ಪದ ಇದೆ ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭೋಪಾಲದ ಪೂರ್ವ 780 ಕಿ.ಮೀ. ದೂರದಲ್ಲಿರುವ ಸಿಂಗ್ರೌಲಿಯಲ್ಲಿರುವ ಈ ಶಾಲೆಗಳಲ್ಲಿ 15ರಿಂದ 50 ವರ್ಷ ಹಳೆಯ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಾಲೆಗಳಿವೆ. ಆರಂಭದಲ್ಲಿ ಈ ಶಾಲೆಗಳಿಗೆ ಅನುಕೂಲಕ್ಕಾಗಿ ಜಾತಿ ಹೆಸರನ್ನು ಇರಿಸಲಾಗಿತ್ತು. ಆದರೆ, ಇದುವೆ ಈಗ ಶಾಲೆಗಳ ಹಿನ್ನಡೆಗೆ ಕಾರಣವಾಗಿದೆ.

 ‘‘ಈ ಪ್ರದೇಶದಲ್ಲಿ ಶಾಲೆ ಆರಂಭಿಸುವಾಗ ಅನನ್ಯತೆಯ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿದ್ದ ಹೆಚ್ಚು ಇದ್ದ ಜನಸಮುದಾಯದ ಹೆಸರನ್ನೇ ಇರಿಸಲಾಗಿತ್ತು. ದುರಾದೃಷ್ಟವೆಂದರೆ, ದಲಿತರ ಹೆಸರನ್ನು ಇರಿಸಿದ ಶಾಲೆಗೆ ಮೇಲ್ಜಾತಿಯವರು ತಮ್ಮ ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಿದ್ದಾರೆ. ಇದು ದಲಿತರಿಗೆ ಇರುವ ಶಾಲೆ ಎಂಬ ಭಾವನೆ ಅವರದ್ದು. ಇದು ಮಕ್ಕಳಲ್ಲಿ ಜಾತಿ ತಾರತಮ್ಯವನ್ನು ಹುಟ್ಟು ಹಾಕುತ್ತಿದೆ.’’ ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯರೊಬ್ಬರು ತಿಳಿಸಿದ್ದಾರೆ. ‘‘ಜಿಲ್ಲೆಯ ವಿವಿಧ ಸ್ಥಳಗಳಿಗೆ ಪ್ರವಾಸ ನಡೆಸಿದ ಸಂದರ್ಭ ನಾವು ಬಸೋರ್ ಟೋಲಾ, ಹರಿಜನ ಬಸ್ತಿ, ಗೋದಾನ್ ಟೋಲಾ, ಬೈಗಾ ಬಸ್ತಿ, ಖೈರಿವಾರಿ ಟೋಲಾ, ವಿರ್ಯಾನಿ ಟೋಲಾ ಹಾಗೂ ಇತರ ಹೆಸರನ್ನು ಶಾಲೆಗೆ ಇರಿಸಿರುವುದನ್ನು ನಾವು ನೋಡಿದೆವು. ಈ ಬಗ್ಗೆ ಸ್ಥಳೀಯರಲ್ಲಿ ಕೇಳಿದಾಗ, ಜಾತಿ ನೆಲೆಯಲ್ಲಿ ಶಾಲೆಗಳಿಗೆ ಈ ಹೆಸರು ಇರಿಸಲಾಗಿದೆ ಎಂದು ಹೇಳಿದ್ದಾರೆ ಹಾಗೂ ಇದು ಮಕ್ಕಳಲ್ಲಿ ಜಾತಿ ತಾರತಮ್ಯ ಉಂಟು ಮಾಡುತ್ತಿದೆ ಎಂದು ಪ್ರತಿಪಾದಿಸಿದ್ದಾರೆ’’ ಎಂದು ಸಿಂಗ್ರೌಲಿ ಜಿಲ್ಲಾಧಿಕಾರಿ ಅನುರಾಗ್ ಚೌಧರಿ ಹೇಳಿದ್ದಾರೆ.

‘‘ಮಾರ್ಚ್‌ನಲ್ಲಿ ಹೆಸರಿನ ಮುಂದೆ ಜಾತಿ ಇರುವ ಶಾಲೆಗಳನ್ನು ನಾವು ಗುರುತಿಸಲು ಆರಂಭಿಸಿದೆವು. ಇಂತಹ 80 ಶಾಲೆಗಳನ್ನು ಜಿಲ್ಲಾ ಪಂಚಾಯತ್ ಗುರುತಿಸಿತ್ತು. ಅನಂತರ ಈ ಶಾಲೆಗಳಿಗೆ ಜನಪ್ರಿಯ ವ್ಯಕ್ತಿಗಳ ಹೆಸರು ಇರಿಸಲು ಸೂಚಿಸಲಾಯಿತು’’ ಎಂದು ಚೌಧರಿ ಹೇಳಿದ್ದಾರೆ. ಈಗ ಶಾಲೆಗಳ ಹೆಸರಿನ ಮುಂದೆ ಯಾವುದೇ ಜಾತಿಯ ಹೆಸರಿಲ್ಲ. ಈ ಶಾಲೆಗಳಿಗೆ ಡಾ. ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಮಹಾರಾಣಿ ದುರ್ಗಾವತಿ, ಚಂದ್ರಶೇಖರ್ ಅಝಾದ್ ಮೊದಲಾದ ಹೆಸರುಗಳನ್ನು ಇರಿಸಲಾಗಿದೆ ಎಂದು ಚೌಧರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News