ಪರ್ಯಾಯ ರಾಜಕಾರಣದ ಸುತ್ತಮುತ್ತ

Update: 2018-04-15 18:54 GMT

ಕಾಂಗ್ರೆಸ್ ಪಕ್ಷ ನವ ಉದಾರವಾದಿ ಆರ್ಥಿಕ ನೀತಿಯನ್ನು ಪ್ರತಿಪಾದಿಸಿ ದರೂ ಭಾರತ ಮತನಿರಪೇಕ್ಷ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯ ಬೇಕೆಂಬ ನಿಲುವಿಗೆ ಬದ್ಧವಾಗಿದೆ. ಬ್ರಾಹ್ಮಣರಿಂದ ಹಿಡಿದು ದಲಿತ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರು ಕಾಂಗ್ರೆಸ್‌ನ ಸಂಘಟನಾ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಈ ಎಲ್ಲ ಸಮುದಾಯಗಳ ಆಶಯಗಳನ್ನು ಸಹ ಕಾಂಗ್ರೆಸ್ ರಕ್ಷಿಸ ಬೇಕಾಗುತ್ತದೆ. ಹೀಗಾಗಿ ಅದು ಬಿಜೆಪಿಯಷ್ಟು ಅಪಾಯಕಾರಿ ಪಕ್ಷವಾಗುವುದಿಲ್ಲ. ಎಡಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಾಗಲೆಲ್ಲ ಕಾಂಗ್ರೆಸ್ ಸರಿಯಾದ ದಾರಿಯಲ್ಲಿ ನಡೆದಿದೆ. ಕೇಂದ್ರದಲ್ಲಿ ಮೊದಲನೇ ಯುಪಿಎ ಸರಕಾರ ಬಂದಾಗ ಬ್ಯಾಂಕ್ ಮತ್ತು ವಿಮಾ ಕ್ಷೇತ್ರಗಳಲ್ಲಿ ಬಂಡವಾಳ ವಾಪಸಾತಿಗೆ ಹಾಗೂ ವಿದೇಶಿ ಬಂಡವಾಳ ಹೂಡಿಕೆಗೆ ಎಡಪಕ್ಷಗಳು ವಿರೋಧಿಸಿದಾಗ ಕಾಂಗ್ರೆಸ್ ಆ ನೀತಿಯನ್ನು ಕೈಬಿಟ್ಟಿತ್ತು.

ಈ ಚುನಾವಣೆ ಸಂದರ್ಭದಲ್ಲಿ ಭೇಟಿಯಾಗುವ ಅನೇಕ ಸ್ನೇಹಿತರು ಪರ್ಯಾಯ ರಾಜಕಾರಣದ ಕುರಿತು ಪ್ರಶ್ನಿಸುತ್ತಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ ಅಲ್ಲವೇ? ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಅನ್ನು ಏಕೆ ಬೆಂಬಲಿಸಬೇಕು ಎಂದು ಕೇಳುತ್ತಾರೆ. ಇವೆರಡಕ್ಕೆ ಪರ್ಯಾಯವಾಗಿ ರೈತ ಸಂಘಟನೆಗಳು, ದಲಿತ ಸಂಘಟನೆಗಳು ಮತ್ತು ಎಡಪಕ್ಷಗಳು ಒಂದುಗೂಡಿ ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ರೂಪಿಸಬೇಕು ಎಂದು ಅಭಿಪ್ರಾಯಪಡುತ್ತಾರೆ. ಬಿಜೆಪಿ ಬೆದರಿಕೆಗೆ ಮಣಿದು ಹೀಗೆ ಎಷ್ಟು ದಿನ ಕಾಂಗ್ರೆಸ್ ಅನ್ನು ಬೆಂಬಲಿಸುತ್ತ ಹೋಗಬೇಕು. ಹೀಗೆ ತರಾವರಿ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಸುಲಭವಲ್ಲ.

ಬಿಜೆಪಿಗೆ ಕಾಂಗ್ರೆಸ್ ಪರ್ಯಾಯವಲ್ಲ ಎಂಬುದು ನಿಜ. ಈ ಎರಡೂ ಪಕ್ಷಗಳು ಪ್ರತಿನಿಧಿಸುವ ವರ್ಗ ಹಿತಾಸಕ್ತಿ ಒಂದೇ ಆಗಿದೆ ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಈ ತ್ರಿಕರಣಗಳನ್ನು ಎರಡೂ ಪಕ್ಷಗಳು ಪೋಷಿಸುತ್ತಿವೆ. ಕೋಮುವಾದಿ ಬಿಜೆಪಿ ಬೆಳೆಯಲು ಕಾಂಗ್ರೆಸ್‌ನ ಮೃದು ಹಿಂದುತ್ವ ನೀತಿ ಹಾಗೂ ನವ ಉದಾರೀಕರಣದ ಆರ್ಥಿಕ ಧೋರಣೆಗಳು ಕಾರಣ. ಆದ್ದರಿಂದ ಇವೆರಡು ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ತಾತ್ವಿಕವಾಗಿ ಒಪ್ಪಿಕೊಳ್ಳುವಲ್ಲಿ ಯಾವುದೇ ಅಭ್ಯಂತರವಿಲ್ಲ. ಇವೆರಡಕ್ಕೆ ಪರ್ಯಾಯವಾಗಿ ಸಮಾನತೆಯ ಸಮಾಜ ಕಟ್ಟುವುದಕ್ಕಾಗಿ ಒಂದು ನಿರ್ದಿಷ್ಟ ತತ್ವದ ಆಧಾರದಲ್ಲಿ ಹೊಸ ರಾಜಕಾರಣವೊಂದು ರೂಪಗೊಳ್ಳಬೇಕು ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ.

ಕಾಂಗ್ರೆಸ್ ಮತ್ತು ಬಿಜೆಪಿ ಇವೆರಡೂ ಪ್ರತಿನಿಧಿಸುವ ಆರ್ಥಿಕ ಧೋರಣೆಗೆ ಪರ್ಯಾಯವಾದ ಧೋರಣೆ ಮತ್ತು ಕಾರ್ಯಕ್ರಮಗಳ ಆಧಾರದಲ್ಲಿ ಹೊಸ ರಾಜಕೀಯ ಶಕ್ತಿಯೊಂದನ್ನು ರೂಪಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತ ಬಂದಿದ್ದರೂ ವಿಫಲವಾಗುತ್ತಲೇ ಬಂದಿದೆ ಎಂಬುದು ಕೂಡ ಅಷ್ಟೇ ನಿಜ. ಒಂದು ಕನಿಷ್ಠ ಕಾರ್ಯಕ್ರಮದ ಆಧಾರದಲ್ಲಿ ಪರ್ಯಾಯ ರೂಪಿಸುವ ಯತ್ನಗಳು ಈ ದೇಶದಲ್ಲಿ ನಡೆದಿಲ್ಲ ಎಂದಲ್ಲ. ಇಂತಹ ಪ್ರಯೋಗಗಳು ಜನಾಂದೋಲನದ ರಾಜಕಾರಣದಲ್ಲಿ ಕೊಂಚ ಮಟ್ಟಿಗೆ ಯಶಸ್ಸು ಕಂಡರೂ ಸಂಸದೀಯ ರಾಜಕಾರಣದಲ್ಲಿ ವಿಫಲಗೊಂಡಿದೆ. ಕೋಮುವಾದಿ ಬಿಜೆಪಿಯನ್ನು ದೂರವಿಡುವ ಉದ್ದೇಶದಿಂದ ಎಡಪಕ್ಷಗಳು ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರಕಾರಕ್ಕೆ ಬೆಂಬಲ ನೀಡಿದ್ದವು. ಆದರೆ ಕನಿಷ್ಠ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಬದ್ಧವಾಗಿ ಉಳಿಯಲಿಲ್ಲವೆಂದು ಎಡಪಕ್ಷಗಳು ಬೆಂಬಲ ವಾಪಸ್ ಪಡೆದವು.

ಯುಪಿಎ ಸರಕಾರಕ್ಕೆ ಬೆಂಬಲ ವಾಪಸ್ ಪಡೆದ ನಂತರ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ದೂರವಿಟ್ಟು ಪ್ರಾದೇಶಿಕ ಪಕ್ಷಗಳ ನೆರವಿನಿಂದ ಮೂರನೆಯ ಶಕ್ತಿಯೊಂದನ್ನು ರೂಪಿಸಲು ಎಡಪಕ್ಷಗಳು ಯತ್ನಿಸಿದವು. ಆದರೆ ಆ ಪ್ರಯತ್ನವೂ ಸಫಲವಾಗಲಿಲ್ಲ. ಪ್ರಾದೇಶಿಕ ಪಕ್ಷಗಳಿಗೆ ನಿರ್ದಿಷ್ಟವಾದ ಸಾಮಾಜಿಕ ಮತ್ತು ಆರ್ಥಿಕ ಧೋರಣೆಗಳಿರುವುದಿಲ್ಲ. ಹೀಗಾಗಿ ಮೂರನೇ ಶಕ್ತಿಯ ಪ್ರಯೋಗವೂ ಯಶಸ್ವಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಎಡಪಕ್ಷಗಳು ಸೇರಿ ಒಂದು ನಿರ್ದಿಷ್ಟ ಸಿದ್ಧ್ದಾಂತದ ಆಧಾರದಲ್ಲಿ ಪರ್ಯಾಯ ರೂಪಿಸುವ ಯತ್ನ ಕೂಡ ನಡೆಯಿತು. ಆದರೆ ಚುನಾವಣಾ ರಾಜಕಾರಣದಲ್ಲಿ ಅದು ಯಶಸ್ವಿಯಾಗಲಿಲ್ಲ. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಎಡಪಕ್ಷಗಳು ಒಂದುಗೂಡಿ ಸ್ಪರ್ಧಿಸಿದರೂ ಜಯ ಸಾಧಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಎಡ ಪರ್ಯಾಯ ರೂಪಿಸುವ ಯತ್ನ ಕೂಡ ವಿಫಲಗೊಂಡಿತು. ಈ ಹಿನ್ನೆಲೆಯಲ್ಲಿ ದೇಶದ ರಾಜಕಾರಣ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಧ್ರುವೀಕರಣಗೊಂಡಿದೆ.

ಬಂಡವಾಳಶಾಹಿ ಪಾಳೆಯಗಾರಿ ಶಕ್ತಿಗಳಿಗೆ ಪರ್ಯಾಯ ರೂಪಿಸುವಲ್ಲಿ ಎಡ ಮತ್ತು ಪ್ರಗತಿಪರ ಶಕ್ತಿಗಳು ವಿಫಲಗೊಂಡ ಹಿನ್ನೆಲೆಯಲ್ಲಿ ದೇಶದ ಜನರ ಮುಂದೆ ಕಾಂಗ್ರೆಸ್ ಮತ್ತು ಬಿಜೆಪಿ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಕಾಂಗ್ರೆಸ್ ಅನ್ನು ಕಟುವಾಗಿ ಟೀಕಿಸುತ್ತ ಬಂದ ಉಗ್ರವಾದಿ ಕಮ್ಯುನಿಸ್ಟರು ಮತ್ತು ಸಮಾಜವಾದಿಗಳು ಕೂಡ ಏನೇ ಆಗಲಿ ಕಾಂಗ್ರೆಸ್ ಗೆದ್ದರೆ ಸಾಕೆಂದು ಬಯಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ವರ್ಗದ ಹಿತಾಸಕ್ತಿಯನ್ನು ಪ್ರತಿನಿಧಿಸಿದರೂ ಕಾಂಗ್ರೆಸ್ ಮತ್ತು ಬಿಜೆಪಿ ರಾಜಕೀಯವಾಗಿ ಒಂದೇ ಅಲ್ಲ.

ಸ್ವಾತಂತ್ರಾ ಚಳವಳಿಯ ಹಿನ್ನೆಲೆಯಲ್ಲಿ ಬೆಳೆದು ಬಂದ ಕಾಂಗ್ರೆಸ್ ಈ ದೇಶದ ದೊಡ್ಡ ಸೆಕ್ಯೂಲರ್ ಪಕ್ಷ ಎಂದು ಹೆಸರಾಗಿದೆ. ಆದರೆ ಬಿಜೆಪಿ ಎಂಬುದು ಆರೆಸ್ಸೆಸ್‌ನ ರಾಜಕೀಯ ವೇದಿಕೆ. ಈಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಆರೆಸ್ಸೆಸ್‌ಗೆ ನಂಬಿಕೆ ಇಲ್ಲ. ಅಂತಲೇ ಇದನ್ನು ಬುಡಮೇಲು ಮಾಡಿ ಮನುವಾದಿ ಹಿಂದೂ ರಾಷ್ಟ್ರವನ್ನು ನಿರ್ಮಿಸುವ ಗುಪ್ತ ಕಾರ್ಯಸೂಚಿಯನ್ನು ಅದು ಹೊಂದಿದೆ. ಅದಕ್ಕೆ ಪೂರಕವಾಗಿ ಹಿಂದುತ್ವದ ಅಡಿಪಾಯದ ಮೇಲೆ ಅತ್ಯಂತ ಬಲಿಷ್ಟವಾದ ಸಂಘಟನೆಯನ್ನು ಅದು ಕಟ್ಟಿಕೊಂಡಿದೆ. ತನ್ನದೇ ಆದ ಸಾವಿರಾರು ಶಾಲೆಗಳನ್ನು, ಆಸ್ಪತ್ರೆಗಳನ್ನು ಅದು ನಡೆಸುತ್ತಿದೆ. ಎಲ್ಲ ಜಾತಿ ಧರ್ಮಗಳ ಜನ ತಮ್ಮ ಆರ್ಥಿಕ ಮತ್ತು ಸಾಮಾಜಿಕ ಬೇಡಿಕೆಗಳಿಗಾಗಿ ಒಂದಾಗುವುದನ್ನು ಅದು ವಿರೋಧಿಸುತ್ತದೆ.

ಆರ್ಥಿಕ, ಸಾಮಾಜಿಕ ಸಮಸ್ಯೆಗಳು ಚರ್ಚೆಗೆ ಬಾರದಂತೆ ಅಯೋಧ್ಯೆ ಮಂದಿರ ನಿರ್ಮಾಣ, ಗೋಹತ್ಯೆ ನಿಷೇಧ ಮತ್ತು ಮತಾಂತರದಂತಹ ವಿಷಯಗಳನ್ನು ಇಟ್ಟುಕೊಂಡು ಅದು ಯುವಕರನ್ನು ಸಂಘಟಿಸುತ್ತಿದೆ. ಇಟಲಿಯ ಮುಸಲೋನಿಯ ಪ್ಯಾಶಿಸ್ಟ್ ಪಾರ್ಟಿಯಿಂದ ಮತ್ತು ಜರ್ಮನಿಯ ಹಿಟ್ಲರ್‌ನ ನಾಝಿ ಪಾರ್ಟಿಯಿಂದ ಸೈದ್ಧಾಂತಿಕ ಸ್ಫೂರ್ತಿ ಪಡೆದ ಸಂಘ ಪರಿವಾರ ಭಾರತದ ಸಂವಿಧಾನವನ್ನೇ ಬದಲಿಸುವ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಗುರಿ ಹೊಂದಿದೆ. ಅಲ್ಪ ಸಂಖ್ಯಾತರನ್ನು ಪ್ರತ್ಯೇಕಿಸುವ ಹಾಗೂ ದಲಿತ ದುರ್ಬಲ ವರ್ಗಗಳಿಗಿರುವ ಸಾಮಾಜಿಕ ನ್ಯಾಯದ ಅವಕಾಶಗಳನ್ನು ನಿರಾಕರಿಸುವ ಸಂಘ ಪರಿವಾರ ಅತ್ಯಂತ ಅಪಾಯಕಾರಿಯಾಗಿದೆ.

ಆದರೆ ಕಾಂಗ್ರೆಸ್ ಪಕ್ಷ ನವ ಉದಾರವಾದಿ ಆರ್ಥಿಕ ನೀತಿಯನ್ನು ಪ್ರತಿಪಾದಿಸಿ ದರೂ ಭಾರತ ಮತನಿರಪೇಕ್ಷ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯ ಬೇಕೆಂಬ ನಿಲುವಿಗೆ ಬದ್ಧವಾಗಿದೆ. ಬ್ರಾಹ್ಮಣರಿಂದ ಹಿಡಿದು ದಲಿತ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರು ಕಾಂಗ್ರೆಸ್‌ನ ಸಂಘಟನಾ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಈ ಎಲ್ಲ ಸಮುದಾಯಗಳ ಆಶಯಗಳನ್ನು ಸಹ ಕಾಂಗ್ರೆಸ್ ರಕ್ಷಿಸ ಬೇಕಾಗುತ್ತದೆ. ಹೀಗಾಗಿ ಅದು ಬಿಜೆಪಿಯಷ್ಟು ಅಪಾಯಕಾರಿ ಪಕ್ಷವಾಗುವುದಿಲ್ಲ. ಎಡಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಾಗಲೆಲ್ಲ ಕಾಂಗ್ರೆಸ್ ಸರಿಯಾದ ದಾರಿಯಲ್ಲಿ ನಡೆದಿದೆ. ಕೇಂದ್ರದಲ್ಲಿ ಮೊದಲನೇ ಯುಪಿಎ ಸರಕಾರ ಬಂದಾಗ ಬ್ಯಾಂಕ್ ಮತ್ತು ವಿಮಾ ಕ್ಷೇತ್ರಗಳಲ್ಲಿ ಬಂಡವಾಳ ವಾಪಸಾತಿಗೆ ಹಾಗೂ ವಿದೇಶಿ ಬಂಡವಾಳ ಹೂಡಿಕೆಗೆ ಎಡಪಕ್ಷಗಳು ವಿರೋಧಿಸಿದಾಗ ಕಾಂಗ್ರೆಸ್ ಆ ನೀತಿಯನ್ನು ಕೈಬಿಟ್ಟಿತ್ತು. ಹೀಗಾಗಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸನ್ನಿವೇಶದಲ್ಲೂ ನಮ್ಮ ಬ್ಯಾಂಕಿಂಗ್ ವಲಯ ಸುರಕ್ಷಿತವಾಗಿತ್ತು. ಈಗ ಮೋದಿ ಕಾಲದಲ್ಲಿ ಅದು ವಿನಾಶದ ಅಂಚಿಗೆ ಬಂದು ನಿಂತಿದೆ.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪರ್ಯಾಯ ರೂಪಿಸುವ ಮುನ್ನ ಸದ್ಯದ ಸವಾಲುಗಳಿಗೆ ನಾವು ಮುಖಾಮುಖಿಯಾಗಬೇಕಿದೆ. ಪ್ರಜಾಪ್ರಭುತ್ವಕ್ಕೆ ಗಂಡಾಂತರಕಾರಿಯಾದ ಹಿಂದುತ್ವ ಮತ್ತು ಕಾರ್ಪೊರೇಟ್ ಬಂಡವಾಳಶಾಹಿಯ ಅಪವಿತ್ರ ಮೈತ್ರಿಯಿಂದ ಎದುರಾಗಿರುವ ಬಿಕ್ಕಟ್ಟನ್ನು ನಿವಾರಿಸಬೇಕಾಗಿದೆ. ಈ ದೇಶದ ಮೂವತ್ತರೊಳಗಿನ ಯುವಕರಲ್ಲಿ ಅತ್ಯಂತ ಅಪಾಯಕಾರಿಯಾಗಿ ಬೆಳೆದ ಹಿಂದುತ್ವದ ಉನ್ಮಾದವನ್ನು ಕಡಿಮೆ ಮಾಡಬೇಕಾಗಿದೆ. ಈ ದೇಶದಲ್ಲಿ ಈಗಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿದರೆ ಒಂದು ಜನಪರ ಪರ್ಯಾಯ ರೂಪಿಸಲು ಸಾಧ್ಯವಾಗುತ್ತದೆ. ಈಗ ಆ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬಂದಿದೆ. ಅದಕ್ಕಾಗಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾದ ಬಿಜೆಪಿಯನ್ನು ಶತಾಯಗತಾಯ ಸೋಲಿಸಬೇಕೆಂದು ಎಡಪಕ್ಷಗಳು ಕರೆನೀಡಿವೆ.

ಅತ್ಯಂತ ಗಂಭೀರವಾದ ಮತ್ತು ಅಪಾಯಕಾರಿಯಾದ ಸನ್ನಿವೇಶದಲ್ಲಿ ಪ್ಯಾಶಿಸ್ಟ್ ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡುವುದು ಅಗತ್ಯವಾಗಿದೆ. ಮೊದಲು ಮನೆಗೆ ಹತ್ತಿದ ಬೆಂಕಿಯನ್ನು ಆರಿಸಲು ಕ್ರಮ ಕೈಕೊಳ್ಳಬೇಕು. ಈ ಬೆಂಕಿಯನ್ನು ಆರಿಸಲು ಯಾವ ನೀರಿನ ಅಗತ್ಯ ಬಿದ್ದರೂ ಅದನ್ನು ಬಳಸಿಕೊಳ್ಳಬೇಕು. ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳುವುದು ಒಂದೇ ಈಗ ದೇಶದ ಮುಂದೆ ಇರುವ ದಾರಿಯಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಸುರಕ್ಷಿತವಾಗಿ ಉಳಿದರೆ ಮಾತ್ರ ದುಡಿಯುವ ಜನರ ಹಿತಾಸಕ್ತಿ ರಕ್ಷಿಸುವ ಪರ್ಯಾಯ ರೂಪಿಸಲು ಸಾಧ್ಯವಾಗುತ್ತದೆ. ಕಾರ್ಪೊರೇಟ್ ಬಂಡವಾಳಶಾಹಿಗೆ ತನ್ನ ಹಿತಾಸಕ್ತಿಗೆ ಪ್ರಜಾಪ್ರಭುತ್ವ ಅಡ್ಡಿಯಾದರೆ ಅದನ್ನೂ ಕೂಡ ಅದು ಉಳಿಸುವುದಿಲ್ಲ. ಆದ್ದರಿಂದ ಪ್ರಜಾಪ್ರಭುತ್ವದ ರಕ್ಷಣೆ ಮೊದಲ ಆದ್ಯತೆಯಾಗಬೇಕಾಗಿದೆ.

ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ವ್ಯವಸ್ಥೆ ಚುನಾವಣಾ ರಾಜಕಾರಣದಲ್ಲಿ ಮಾತ್ರ ರೂಪುಗೊಳ್ಳುವುದಿಲ್ಲ. ಅದು ಪರ್ಯಾಯ ಆರ್ಥಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ರೂಪುಗೊಳ್ಳುತ್ತದೆ. ಅದೊಂದು ಸುದೀರ್ಘವಾದ ಪಯಣ. ಈ ಪಯಣದಲ್ಲಿ ಅಡ್ಡಿಯಾಗಿರುವ ತೊಂದರೆಗಳನ್ನು ಮೊದಲು ನಿವಾರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆೆ ಚುನಾವಣೆಗೆ ಸೀಮಿತವಾಗಿ ಹೇಳುವುದಾದರೆ ಪ್ಯಾಶಿಸ್ಟ್ ಕೋಮುವಾದಿ ಶಕ್ತಿಗಳನ್ನು ಮೊದಲು ಹತ್ತಿಕ್ಕಬೇಕು. ನಮ್ಮ ಸುತ್ತಲಿನ ಬೆಂಕಿಯನ್ನು ಮೊದಲು ನಂದಿಸಿ ಆನಂತರ ಪರ್ಯಾಯದತ್ತ ಹೆಜ್ಜೆ ಇಡಬೇಕು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News