ಕಥುವಾ ಘಟನೆಗೆ ಕೋಮುಬಣ್ಣ ಹಚ್ಚಿ ಅತ್ಯಾಚಾರಿಗಳನ್ನು ಬೆಂಬಲಿಸಿದ ಬಿಜೆಪಿ: ರಾಜ್ ಠಾಕ್ರೆ ಟೀಕೆ

Update: 2018-04-16 15:10 GMT

ಮುಂಬೈ, ಎ.16: ಬಿಜೆಪಿ ಕಥುವಾ ಅತ್ಯಾಚಾರ ಪ್ರಕರಣಕ್ಕೆ ಕೋಮು ಬಣ್ಣ ನೀಡಿ ಅತ್ಯಾಚಾರಿಗಳನ್ನು ಬೆಂಬಲಿಸಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಕೇಸರಿ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ಆರೋಪಿಗಳ ಬೆಂಬಲಾರ್ಥವಾಗಿ ಮೆರವಣಿಗೆ ನಡೆಸಿದ ಕಥುವಾದ ವಕೀಲರು 'ಭಾರತ್ ಮಾತಾ ಕಿ ಜೈ' ಘೋಷಣೆ ಕೂಗಿದ್ದಕ್ಕೂ ಅವರು ಆಕ್ಷೇಪ ಸೂಚಿಸಿದ್ದಾರೆ.

ರಾಜಕೀಯ ಲಾಭಕ್ಕಾಗಿ ಬಿಜೆಪಿ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಮುನ್ನ ದಂಗೆಗಳನ್ನು ಪ್ರೇರೇಪಿಸಬಹುದು ಎಂಬ ತಮ್ಮ ಆರೋಪವನ್ನು ಅವರು ಪುನರುಚ್ಛರಿಸಿದರಲ್ಲದೆ  ಕೇಂದ್ರ ಸರಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ ಎಂದರು. "ಆ ಎಂಟು ವರ್ಷದ ಮುಗ್ಧ ಬಾಲೆಗೆ ತನ್ನ ಧರ್ಮದ ಬಗ್ಗೆಯೂ ತಿಳಿದಿರಲಿಲ್ಲ. ಆದರೂ ಆಕೆ ಇಷ್ಟೊಂದು ನೋವು ಅನುಭವಿಸುವಂತಾಯಿತು. ಆದರೂ ಇಲ್ಲೊಂದು ಪಕ್ಷ ಅತ್ಯಾಚಾರಿಗಳನ್ನು ಬೆಂಬಲಿಸುತ್ತಿದೆ'' ಎಂದು ಠಾಕ್ರೆ ಹೇಳಿದರು.

ಸೌದಿ ಅರೇಬಿಯಾದಲ್ಲಿ ನಡೆದಂತೆ ಇಲ್ಲಿಯೂ ಅತ್ಯಾಚಾರಿಗಳನ್ನು ಕೂಡಲೇ ಶಿಕ್ಷೆಗೆ ಗುರಿಪಡಿಸಬೇಕು ಎಂದ ಅವರು ``ನರೇಂದ್ರ ಮೋದಿಗೆ ಧೈರ್ಯವಿದ್ದರೆ ಅವರು ಬಾಂಗ್ಲಾದೇಶಿ ಮುಸ್ಲಿಮರನ್ನು ಭಾರತದಿಂದ ಹೊರ ಕಳುಹಿಸಬೇಕು. ಪಾಕಿಸ್ತಾನೀಯರನ್ನು ಭಾರತದ ನೆಲದಿಂದ ಕಿತ್ತೊಗೆಯಬೇಕು. ಅವರಿಂದ ಅಪಾಯವಿದೆಯೇ ಹೊರತು ಕಥುವಾದ ಮಗುವಿನಿಂದಲ್ಲ'' ಎಂದರು.

"ಪಾಕಿಸ್ತಾನಕ್ಕೆ ಪಾಠ ಕಲಿಸುವ ಬಗ್ಗೆ ಮೋದಿ ಮಾತನಾಡುತ್ತಾರೆ. ಆದರೆ ಅವರು ಅಲ್ಲಿನ ಆಗಿನ ಪ್ರಧಾನಿ ನವಾಜ್ ಶರೀಫ್ ಆವರ ಹುಟ್ಟುಹಬ್ಬದ ದಿನ ಅಚ್ಚರಿಯ ಭೇಟಿ ನೀಡಿ ಅವರೊಂದಿಗೆ ಕೇಕ್ ಕತ್ತರಿಸಿದರು'' ಎಂದು ಠಾಕ್ರೆ ನೆನಪಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News