ಈ ತೀರ್ಪು ದೇಶಕ್ಕೆ ಅವಮಾನ: ಮಕ್ಕಾ ಮಸೀದಿ ಸ್ಫೋಟದ ಸಾಕ್ಷಿದಾರ

Update: 2018-04-16 16:10 GMT

ಹೈದರಾಬಾದ್, ಎ.16: 2007ರಲ್ಲಿ ನಡೆದ ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿರುವ ನ್ಯಾಯಾಲಯದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಕರಣದ ಸಾಕ್ಷಿದಾರರೊಬ್ಬರು ಈ ಪ್ರಕರಣದಲ್ಲಿ ನ್ಯಾಯ ವಿಳಂಬ ಮಾತ್ರವಲ್ಲ ನ್ಯಾಯವನ್ನು ನಿರಾಕರಿಸಲಾಗಿದೆ ಎಂದು ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನೆ ನಡೆದ ದಿನದಂದು ಸ್ಥಳದಲ್ಲಿದ್ದ, ಪ್ರಕರಣದ ಪ್ರಮುಖ ಸಾಕ್ಷಿ ಮುಹಮ್ಮದ್ ಇರ್ಫಾನ್ ಎರಡನೇ ಬಾಂಬನ್ನು ಪತ್ತೆಹಚ್ಚಿ ಅದನ್ನು ಬಾಂಬ್ ಸ್ಕ್ವಾಡ್‌ಗೆ ನೀಡಿದ್ದರು. ಈ ತೀರ್ಪು ದೇಶಕ್ಕೇ ಅವಮಾನ ಎಂದು ತಿಳಿಸಿರುವ ಇರ್ಫಾನ್, ನನಗೆ ಇನ್ನೂ ನ್ಯಾಯಾಂಗದ ಮೇಲೆ ನಂಬಿಕೆಯಿದೆ. ಉನ್ನತ ನ್ಯಾಯಾಲಯಗಳಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ. ತನಿಖಾ ಸಂಸ್ಥೆಗಳು ಇನ್ನಷ್ಟು ಶ್ರಮಪಟ್ಟರೆ ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

2007ರ ಮೇ 18ರಂದು ಹೈದರಾಬಾದ್‌ನ ಮಕ್ಕಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ಸಂದರ್ಭದಲ್ಲಿ ನಡೆದ ಪ್ರಬಲ ಸ್ಫೋಟದಲ್ಲಿ ಒಂಬತ್ತು ಮಂದಿ ಸಾವಿಗೀಡಾಗಿದ್ದು, 58 ಮಂದಿ ಗಾಯಗೊಂಡಿದ್ದರು. ಪ್ರಕರಣದ ಹತ್ತು ಆರೋಪಿಗಳ ಪೈಕಿ ಕೇವಲ ಐವರನ್ನು ವಿಚಾರಣೆಗೊಳಪಡಿಸಲಾಗಿದೆ. ಉಳಿದ ಐವರಲ್ಲಿ ಒಬ್ಬ ಸಾವನ್ನಪ್ಪಿದರೆ ಇತರ ನಾಲ್ವರು ಇನ್ನೂ ತಲೆಮರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News