ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆ: ಪ್ರಧಾನಿಗೆ ರಾಹುಲ್ ಆಗ್ರಹ

Update: 2018-04-16 17:21 GMT

ಹೊಸದಿಲ್ಲಿ, ಎ.16: ದೇಶದ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸುವ ಬಗ್ಗೆ ಪ್ರಧಾನಿ ಮೋದಿಗೆ ನಿಜವಾಗಿಯೂ ಕಳಕಳಿಯಿದ್ದರೆ ಅಪ್ರಾಪ್ತ ವಯಸ್ಕರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆ ನಡೆಸಿ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

 ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, 2016ರಲ್ಲಿ 19,675 ಪ್ರಕರಣ ದಾಖಲಾಗಿದೆ. ಇದು ನಾಚಿಕೆಗೇಡಿನ ವಿಷಯ. ಪ್ರಧಾನಿ ಮೋದಿಯವರಿಗೆ ದೇಶದ ಹೆಣ್ಣುಮಕ್ಕಳ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ಇಂತಹ ಪ್ರಕರಣಗಳ ತ್ವರಿತ ವಿಚಾರಣೆ ನಡೆಸಿ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ರಾಹುಲ್ , ‘ಸ್ಪೀಕ್ ಅಪ್’ ಎಂಬ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಕಥುವಾ ಹಾಗೂ ಉನ್ನಾವೊದಲ್ಲಿ ನಡೆದ ಅತ್ಯಾಚಾರ ಘಟನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ಮೋದಿ, ದುಷ್ಕರ್ಮಿಗಳನ್ನು ಸುಮ್ಮನೆ ಬಿಡುವುದಿಲ್ಲ . ದೇಶದ ಹೆಣ್ಣುಮಕ್ಕಳಿಗೆ ಖಂಡಿತಾ ನ್ಯಾಯ ದೊರಕಲಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್, ಪ್ರಧಾನಿಗೆ ದೇಶದ ಹೆಣ್ಣುಮಕ್ಕಳ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದರೆ ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆಯಾಗಲಿ ಎಂದು ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News