ಸಿದ್ದರಾಮಯ್ಯರ ಕೈ ಸ್ಪರ್ಶವಿಲ್ಲದ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ

Update: 2018-04-17 04:10 GMT

ರಾಜ್ಯ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದರೊಂದಿಗೆ ಚುನಾವಣೆ ಇನ್ನಷ್ಟು ಕಾವು ಪಡೆದುಕೊಂಡಿದೆ. ನಾಡಿನ ಮತದಾರರು ಮಾತ್ರವಲ್ಲ, ವಿವಿಧ ಪಕ್ಷಗಳೂ ಕಾಂಗ್ರೆಸ್‌ನ ಪಟ್ಟಿ ಬಿಡುಗಡೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದವು. ಕಾಂಗ್ರೆಸ್‌ನ ನಡೆಯನ್ನು ಅರ್ಥ ಮಾಡಿಕೊಳ್ಳದೇ ಬಿಜೆಪಿ ಮತ್ತು ಜೆಡಿಎಸ್ ತಮ್ಮ ರಣತಂತ್ರ ರೂಪಿಸುವುದು ಅಸಾಧ್ಯ ಎನ್ನುವಂತಹ ಸನ್ನಿವೇಶ ರಾಜ್ಯದಲ್ಲಿದೆ. ಈ ಕಾರಣಕ್ಕಾಗಿಯೇ ಜೆಡಿಎಸ್ ಮತ್ತು ಬಿಜೆಪಿ ಹಂತಹಂತವಾಗಿ ತಮ್ಮ ಪಟ್ಟಿಗಳನ್ನು ಬಿಡುಗಡೆ ಮಾಡುತ್ತಿವೆೆ. ಪಟ್ಟಿ ಬಿಡುಗಡೆಗೊಂಡ ಬೆನ್ನಲ್ಲೇ ಅತೃಪ್ತರು, ಭಿನ್ನಮತೀಯರು ಹುಟ್ಟಿಕೊಳ್ಳುತ್ತಾರೆ. ಈ ಲಾಭವನ್ನು ತಮ್ಮ ತಮ್ಮ ಪಕ್ಷಕ್ಕೆ ಎಷ್ಟರಮಟ್ಟಿಗೆ ಪೂರಕವಾಗಿಸಬಹುದು ಎನ್ನುವ ಲೆಕ್ಕಾಚಾರವೂ ಇದರ ಹಿಂದಿದೆ. ಕಾಂಗ್ರೆಸ್‌ನ ಅತೃಪ್ತರಿಂದ ಬಿಜೆಪಿಗೆ ಲಾಭವಾಗುವುದು ಕಡಿಮೆ.

ಬಿಜೆಪಿ ತನ್ನೊಳಗಿನ ಬಂಡಾಯಗಳಿಂದಲೇ ತತ್ತರಿಸಿ ಕೂತಿದೆ. ಆದುದರಿಂದ, ಕಾಂಗ್ರೆಸ್‌ನ ಬಂಡಾಯಗಳನ್ನು ತನಗೆ ಪೂರಕವಾಗಿ ಬಳಸಿಕೊಳ್ಳುವುದು ದೂರದ ಮಾತು. ಜೆಡಿಎಸ್‌ನ ಕಾರ್ಯತಂತ್ರ ಆರಂಭವಾಗುವುದೇ ಕಾಂಗ್ರೆಸ್‌ನೊಳಗಿನ ಭಿನ್ನಮತಗಳನ್ನು ಬಳಸಿಕೊಳ್ಳುವ ಮೂಲಕ. ಆದರೆ ಪ್ರತಿಪಕ್ಷಗಳು ನಿರೀಕ್ಷಿಸಿದ ಮಟ್ಟಿಗೆ ಕಾಂಗ್ರೆಸ್‌ನೊಳಗೆ ಬಂಡಾಯಗಳು ಕಾಣಿಸುತ್ತಿಲ್ಲ. ಆದರೂ ಅಲ್ಲಲ್ಲಿ ಸಣ್ಣ ಪುಟ್ಟ ಗದ್ದಲಗಳು ಎದ್ದಿವೆ. ಪಟ್ಟಿ ಬಿಡುಗಡೆ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಆತ್ಮವಿಶ್ವಾಸವನ್ನು ಪ್ರದರ್ಶಿಸಿದೆ. ಮುಖ್ಯವಾಗಿ ಬೇರೆ ಪಕ್ಷಗಳಂತೆ ಹಂತ ಹಂತವಾಗಿ ಅದು ಹೆಸರುಗಳನ್ನು ಬಿಡುಗಡೆ ಮಾಡಲಿಲ್ಲ. 218 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಅದು ತನ್ನ ಅಭ್ಯರ್ಥಿಗಳನ್ನು ಘೋಷಿಸಿರುವುದು ಚುನಾವಣಾ ತಂತ್ರದ ಭಾಗವೇ ಆಗಿದೆ. ಎರಡು ಮೂರು ಹಂತಗಳಲ್ಲಿ ಹೆಸರುಗಳನ್ನು ಬಿಡುಗಡೆ ಮಾಡುತ್ತಾ ಹೋದಂತೆ, ಬಂಡಾಯ, ಅಸಮಾಧಾನ ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಪಕ್ಷದ ಮುಖಂಡರ ಮೇಲೆ ಒತ್ತಡಗಳು ಹೆಚ್ಚುತ್ತಾ ಹೋಗುತ್ತವೆ. ಇದರ ಲಾಭಗಳನ್ನು ಇತರ ಪಕ್ಷಗಳು ತಮ್ಮದಾಗಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ ಕಾಂಗ್ರೆಸ್ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೊಸತನ ಏನಿದೆ ಎಂದು ಇಣುಕಿದರೆ ನಿರಾಸೆ ಕಟ್ಟಿಟ್ಟ ಬುತ್ತಿ. 'ಹೇಗಾದರೂ ಸರಿ, ಗೆಲ್ಲಲೇ ಬೇಕು' ಎನ್ನುವ ಕಾರ್ಯತಂತ್ರದೊಂದಿಗೆ ರೂಪುಗೊಂಡ ಪಟ್ಟಿ ಇದು. ಆದುದರಿಂದ, ಬಹುತೇಕ ಅಭ್ಯರ್ಥಿಗಳು ಹಾಲಿ ಶಾಸಕರೇ ಆಗಿದ್ದಾರೆ.

ಹೊಸ ನಾಯಕರಿಗೆ ಅವಕಾಶ ನೀಡಿ ಅದೃಷ್ಟವನ್ನು ಪರೀಕ್ಷೆ ಮಾಡುವ ಧೈರ್ಯವನ್ನು ಅದು ಮಾಡಿಲ್ಲ. ಆದುದರಿಂದಲೇ, ಹೊಸ ಯುವಕರಿಗೆ ವಿಶೇಷ ಪ್ರಾಧಾನ್ಯತೆ ದೊರಕಿಲ್ಲ. ಕಾಂಗ್ರೆಸ್‌ನೊಳಗೆ ಒಂದಿಷ್ಟು ಬದಲಾವಣೆಗಳ ಗಾಳಿ ಬೀಸಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಕಾಂಗ್ರೆಸ್‌ನೊಳಗೆ ಹೊಸ ತಲೆಮಾರು ಮುನ್ನೆಲೆಗೆ ಬರಬೇಕಾದರೆ ಇನ್ನಷ್ಟು ಕಾಯಬೇಕು. ಅಂದರೆ ಅವರೆಲ್ಲ ತಮ್ಮ ಕೂದಲು ಹಣ್ಣಾಗುವವರೆಗೆ ಕಾಯಬೇಕು ಎನ್ನುವ ಸಂದೇಶವನ್ನು ಅದು ಯುವಕರಿಗೆ ನೀಡಿದೆ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ ಎಂದು ಕಾಂಗ್ರೆಸ್‌ನೊಳಗೆ ಹೇಳಿಕೊಳ್ಳಲಾಗುತ್ತಿದೆ. ಆದರೆ ಇಡೀ ಪಟ್ಟಿಯ ಕಡೆಗೆ ಕಣ್ಣಾಡಿಸಿದಾಗ ಅಲ್ಲಿ ಸಿದ್ದರಾಮಯ್ಯರ ಸಮಪಾಲು, ಸಮಬಾಳು ಘೋಷಣೆಗಳ ವಾಸನೆಯೇ ಬಡಿಯುವುದಿಲ್ಲ. ಅವರು ಕಾಂಗ್ರೆಸ್‌ನೊಳಗಿನ ಒಬ್ಬ ಪಕ್ಕಾ ರಾಜಕಾರಣಿಯಾಗಿ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದಾರೆ. ಆದುದರಿಂದ ಇವರೆಲ್ಲ ಸಿದ್ದರಾಮಯ್ಯರ ಅಭ್ಯರ್ಥಿಗಳು ಎನ್ನುವುದಕ್ಕಿಂತ ಕಾಂಗ್ರೆಸ್‌ನ ಅಭ್ಯರ್ಥಿಗಳೆನ್ನುವುದೇ ವಾಸಿ. ಶೋಷಿತ ಸಮುದಾಯದ ಜನಸಂಖ್ಯಾಬಲಕ್ಕೆ ಪೂರಕವಾಗಿ ಟಿಕೆಟ್ ಹಂಚಿಕೆಯಾಗಿಲ್ಲ. ಈ ಬಾರಿ ದಲಿತರಿಗೆ ಮತ್ತು ಮುಸ್ಲಿಮರಿಗೆ ಹೆಚ್ಚಿನ ಪಾಲು ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಅಂತಹದೇನು ಸಂಭವಿಸಲಿಲ್ಲ. ಬದಲಿಗೆ, ಲಿಂಗಾಯತರನ್ನು ಮತ್ತು ಒಕ್ಕಲಿಗರನ್ನು ಓಲೈಸುವ ಪ್ರಯತ್ನ ಮುಂದುವರಿದಿದೆ. ಬಿಜೆಪಿಯ ತೆಕ್ಕೆಯಲ್ಲಿದ್ದ ಲಿಂಗಾಯತ ಮತಗಳನ್ನು ತನ್ನದಾಗಿಸಿಕೊಳ್ಳುವುದು ಮತ್ತು ಲಿಂಗಾಯತರಿಗೆ ಮಣೆ ಹಾಕುವ ಸಂದರ್ಭದಲ್ಲಿ ಒಕ್ಕಲಿಗರು ಸಿಟ್ಟಾಗದಂತೆ ನೋಡಿಕೊಳ್ಳುವುದು ಹೀಗೆ ಎರಡು ಉದ್ದೇಶಗಳು ಇದರ ಹಿಂದಿವೆೆ. ಅಂಬರೀಷ್‌ರಂತಹ ಅಭ್ಯರ್ಥಿಗೂ ಟಿಕೆಟ್ ಕೊಡಲೇ ಬೇಕಾದಂತಹ ಸನ್ನಿವೇಶವಿದೆ ಎನ್ನುವುದೇ ಸಿದ್ದರಾಮಯ್ಯರ ಅಸಹಾಯಕತೆಯನ್ನು ಹೇಳುತ್ತದೆ.

ಅನಾರೋಗ್ಯದ ಕಾರಣದಿಂದಾಗಿ ಸಚಿವರಾಗಿ ಕರ್ತವ್ಯ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾದವರು ಅಂಬರೀಷ್. ಪೂರ್ಣ ಪ್ರಮಾಣದಲ್ಲಿ ಕ್ಷೇತ್ರಕ್ಕಾಗಿ ದುಡಿಯುವ ಆರೋಗ್ಯ ಅವರಲ್ಲಿ ಇಂದಿಗೂ ಇಲ್ಲ. ಆದರೆ ಅವರ ಜಾತಿ ಹಿನ್ನೆಲೆಯಿಂದಾಗಿ ಟಿಕೆಟ್ ನೀಡುವುದು ಸಿದ್ದರಾಮಯ್ಯ ಅವರಿಗೆ ಅನಿವಾರ್ಯವಾಗಿದೆ. ಅಂಬರೀಷ್ ಅವರಿಗೆ ಟಿಕೆಟ್ ನೀಡದೇ ಇದ್ದರೆ ಅವರು ಬಂಡಾಯ ಏಳುವ ಎಲ್ಲ ಸೂಚನೆಗಳಿದ್ದವು. ಇದು ಕಾಂಗ್ರೆಸ್‌ನ ಮೇಲೆ ಮಾತ್ರವಲ್ಲ, ಸಿದ್ದರಾಮಯ್ಯ ಸ್ಪರ್ಧಿಸಲಿರುವ ಚಾಮುಂಡೇಶ್ವರಿ ಕ್ಷೇತ್ರದ ಮೇಲೂ ಪರಿಣಾಮ ಬೀರಬಹುದು ಎನ್ನುವ ಆತಂಕವೇ ಅಂಬರೀಷ್‌ಗೆ ಟಿಕೆಟ್ ನೀಡುವಂತೆ ಮಾಡಿದೆ. ಮುಸ್ಲಿಮರು ಮತ್ತು ದಲಿತರು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರು. ಜೊತೆಗೆ, ಮುಸ್ಲಿಮರು ಬಿಜೆಪಿಯ ಭಯದಿಂದಲಾದರೂ ಕಾಂಗ್ರೆಸ್‌ಗೆ ಮತ ಹಾಕಿಯೇ ಹಾಕುತ್ತಾರೆ ಎನ್ನುವ ನಂಬಿಕೆಯಿಂದಲೋ ಏನೋ, ಅವರ ಜನಸಂಖ್ಯೆಗೆ ಅನುಗುಣವಾಗಿ ಅಭ್ಯರ್ಥಿಗಳು ಪಟ್ಟಿಯಲ್ಲಿಲ್ಲ.

ಮುಸ್ಲಿಮ್ ಅಭ್ಯರ್ಥಿಗಳ ಸಂಖ್ಯೆ ಈ ಹಿಂದಿಗಿಂತ ಇಳಿದಿದೆ. ಇದನ್ನು ಕಾಂಗ್ರೆಸ್ ಹೇಗೆ ತುಂಬಲಿದೆ? ಎನ್ನುವುದರ ಕುರಿತಂತೆ ಪಕ್ಷಾಧ್ಯಕ್ಷರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಲೇಬೇಕಾಗಿದೆ. ಕಾಂಗ್ರೆಸ್‌ನೊಳಗೆ ಈಗ ಇರುವ ಮುಸ್ಲಿಮ್ ನಾಯಕರು ವೃದ್ಧರಾಗಿದ್ದಾರೆ. ಹೊಸ ಮುಸ್ಲಿಮ್ ನಾಯಕರನ್ನು ಮುಂದೆ ಬರುವುದಕ್ಕೆ ಕಾಂಗ್ರೆಸ್ ಅವಕಾಶ ಕೊಡುತ್ತಿಲ್ಲ ಎನ್ನುವ ಆರೋಪಗಳಿಗೆ ಉತ್ತರಿಸದೇ ಇದ್ದರೆ ನಿಧಾನಕ್ಕೆ ಮುಸ್ಲಿಮರು ಕಾಂಗ್ರೆಸ್‌ನಿಂದ ದೂರ ಸರಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಪುತ್ರನಿಗೂ ಟಿಕೆಟ್ ದೊರಕಿದೆ. ಪುತ್ರ ಪ್ರೇಮದಲ್ಲಿ ತಾನು ದೇವಗೌಡರಿಗಿಂತ ಕಮ್ಮಿಯಿಲ್ಲ ಎನ್ನುವುದನ್ನು ಈ ಮೂಲಕ ಅವರು ತೋರಿಸಿಕೊಡಲು ಹೊರಟಂತಿದೆ. ನಿರೀಕ್ಷೆಯಂತೆ 9 ವಲಸಿಗರಿಗೆ ಟಿಕೆಟ್ ನೀಡಲಾಗಿದೆ. ಕರಾವಳಿಯಲ್ಲಿ ಬಿಲ್ಲವರಿಗೆ ಇನ್ನಷ್ಟು ಆದ್ಯತೆ ನೀಡಬಹುದಿತ್ತು. ಕರಾವಳಿಯಲ್ಲಿ ಹೊಸತಲೆಮಾರಿನ ಬಿಲ್ಲವ ನಾಯಕರನ್ನು ಸೃಷ್ಟಿಸುವ ಹೊಣೆಗಾರಿಕೆ ಕಾಂಗ್ರೆಸ್‌ಗಿದೆ. ಕರಾವಳಿಯ ಸಮಸ್ಯೆಗಳಿಗೆ ಇದರಲ್ಲಿ ಪರಿಹಾರವೂ ಇದೆ. ಜೊತೆಗೆ ಬಂಟ-ಬಿಲ್ಲವ ಎಂಬ ಬಿರುಕನ್ನು ಮುಚ್ಚುವ ಅಗತ್ಯವೂ ಕರಾವಳಿ ಕಾಂಗ್ರೆಸ್‌ಗಿದೆ.

ಮುಖ್ಯವಾಗಿ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದಿರುವುದು ಸ್ವಾಗತಾರ್ಹ. ಇದರಿಂದಾಗಿ ಒಬ್ಬ ನಾಯಕನ ಹಿತಾಸಕ್ತಿಗಾಗಿ ಎರಡೆರಡು ಚುನಾವಣೆಗಳನ್ನು ಜನರ ಮೇಲೆ ಹೇರುವ ಆರೋಪದಿಂದ ಸಿದ್ದರಾಮಯ್ಯ ಪಾರಾದಂತಾಗಿದೆ. ಜೊತೆಗೆ, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ವಿರೋಧಿಗಳು ಆಡಿಕೊಳ್ಳುವುದು ತಪ್ಪಿದಂತಾಗಿದೆ. ಸಿದ್ದರಾಮಯ್ಯರಂತಹ ನಾಯಕರು ಚಾಮುಂಡೇಶ್ವರಿಯಿಂದ ಆರಿಸಿ ಬರಬಾರದು ಎನ್ನುವುದಕ್ಕೆ ವಿರೋಧಿಗಳಲ್ಲಿ ಸಕಾರಣವಿಲ್ಲ. ಅವರಲ್ಲಿರುವ ಕಾರಣಗಳೆಲ್ಲವೂ ವೈಯಕ್ತಿಕ ಹಿತಾಸಕ್ತಿಯಿಂದ ಕೂಡಿರುವುದು. ಇದೀಗ ಚಾಮುಂಡೇಶ್ವರಿಯಲ್ಲಷ್ಟೇ ನಿಲ್ಲುವುದರಿಂದ, ತನ್ನ ವಿರೋಧಿಗಳ ಸವಾಲನ್ನು ಸಿದ್ದರಾಮಯ್ಯ ಎದೆಗೊಟ್ಟು ಸ್ವೀಕರಿಸಿದಂತಾಗಿದೆ. ಜೊತೆಗೆ ತನ್ನ ಕ್ಷೇತ್ರದ ಮತದಾರರಿಗೆ ಅವರು ನೀಡಿದ ಗೌರವವೂ ಆಗಿದೆ. ಅಭ್ಯರ್ಥಿ ಪಟ್ಟಿಯ ಕುರಿತಂತೆ ಒಟ್ಟಾರೆಯಾಗಿ ಹೇಳುವುದಾದರೆ ಕಾಂಗ್ರೆಸ್ ಹೊಸ ಬಾಟಲಲ್ಲಿ ಅದೇ ಹಳೇ ವೈನನ್ನು ಮತ್ತೆ ರಾಜ್ಯದ ಜನರಿಗೆ ಹಂಚಲು ಹೊರಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News