ತಾಜ್ ಮಹಲ್ ದೇವರಿಗೆ ಸೇರಿದ್ದು: ವಕ್ಫ್ ಮಂಡಳಿ

Update: 2018-04-17 14:27 GMT

ಹೊಸದಿಲ್ಲಿ, ಎ.17: ತಾಜ್ ಮಹಲ್ ದೇವರಿಗೆ ಸೇರಿದ್ದು. ಆದರೆ ವ್ಯಾವಹಾರಿಕ ಕಾರಣಕ್ಕಾಗಿ ಅದನ್ನು ಸುನ್ನಿ ವಕ್ಫ್ ಮಂಡಳಿಯ ಆಸ್ತಿಯೆಂದು ಗುರುತಿಸುವಂತೆ ವಕ್ಫ್ ಮಂಡಳಿಯು ಮಂಗಳವಾರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿತು.

17ನೇ ಶತಮಾನಕ್ಕೆ ಸೇರಿದ ಸ್ಮಾರಕವು ತನಗೆ ಸೇರಿದ್ದು ಎಂಬುದನ್ನು ಸಾಬೀತುಪಡಿಸಲು ತಾಜ್ ಮಹಲನ್ನು ನಿರ್ಮಿಸಿದ ಮೊಘಲ್ ದೊರೆ ಶಹಜಹಾನ್ ಸಹಿ ಹಾಕಿರುವ ಮಾಲಕತ್ವದ ದಾಖಲೆಯ ಪ್ರತಿಯನ್ನು ಒದಗಿಸುವಂತೆ ಕಳೆದ ವಾರ ಸರ್ವೋಚ್ಚ ನ್ಯಾಯಾಲಯ ಸುನ್ನಿ ವಕ್ಫ್ ಮಂಡಳಿಗೆ ಸೂಚಿಸಿತ್ತು. ಇದಕ್ಕೆ ಮಂಗಳವಾರ ಪ್ರತಿಕ್ರಿಯಿಸಿರುವ ಮಂಡಳಿ ಅಂಥ ಯಾವುದೇ ದಾಖಲೆ ಶಹಜಹಾನ್‌ನ ವಂಶಜರಿಂದ ತಾನು ಪಡೆದುಕೊಂಡಿಲ್ಲ ಎಂದು ತಿಳಿಸಿದೆ.

ಯಾವ ಮನುಷ್ಯನೂ ತಾಜ್ ಮಹಲ್ ಮೇಲೆ ಮಾಲಕತ್ವ ಸ್ಥಾಪಿಸಲು ಸಾಧ್ಯವಿಲ್ಲ. ಆದರೆ ಅಲ್ಲಿ ವಿಧಿವಿಧಾನಗಳನ್ನು ನಡೆಸಲು ಅವಕಾಶ ನೀಡಿರುವ ಕಾರಣ ಅದು ವಕ್ಫ್ ಮಂಡಳಿಗೆ ಸೇರಿದ ಆಸ್ತಿಯಾಗಿದೆ ಎಂದು ಮಂಡಳಿ ಪರ ವಕೀಲರು ವಾದಿಸಿದ್ದಾರೆ. ತಾಜ್‌ಮಹಲನ್ನು ತನ್ನ ಆಸ್ತಿಯೆಂದು ಘೋಷಿಸಬೇಕೆಂದು ಕೋರಿ ಸುನ್ನಿ ವಾಕ್ಫ್ ಮಂಡಳಿ 2005ರಲ್ಲಿ ಅರ್ಜಿ ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿ 2010ರಲ್ಲಿ ಭಾರತೀಯ ಪುರಾತತ್ವ ಇಲಾಖೆ ಮೇಲ್ಮನವಿ ಸಲ್ಲಿಸಿತ್ತು. ತಾಜ್ ಮಹಲ್ ಮಾಲಕತ್ವವನ್ನು ವಕ್ಫ್ ಮಂಡಳಿಗೆ ನೀಡಿದರೆ ಮುಂದೆ ಕೆಂಪು ಕೋಟೆ, ಫತೇಹ್‌ಪುರ್ ಸಿಕ್ರಿ ಮುಂತಾದ ಸ್ಮಾರಕಗಳ ಮೇಲೂ ಇದೇ ರೀತಿಯ ಮನವಿಗಳು ದಾಖಲಾಗಬಹುದು ಎಂದು ಇಲಾಖೆ ತನ್ನ ಮೇಲ್ಮನವಿಯಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News