ಮೆಹಬೂಬ ಮುಫ್ತಿ ಸರಕಾರದಿಂದ ಬಿಜೆಪಿಯ ಎಲ್ಲಾ ಸಚಿವರು ರಾಜೀನಾಮೆ?

Update: 2018-04-17 16:44 GMT

ಹೊಸದಿಲ್ಲಿ, ಎ.17: ಕಥುವಾ ಅತ್ಯಾಚಾರ ಪ್ರಕರಣದ ಆರೋಪಿಗಳ ಪರ ರ್ಯಾಲಿ ನಡೆಸಿದ್ದ ಇಬ್ಬರು ಬಿಜೆಪಿ ಸಚಿವರು ಇತ್ತೀಚೆಗಷ್ಟೇ ಮೆಹಬೂಬ ಮುಫ್ತಿ ಸರಕಾರಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮೆಹಬೂಬಾ ಮುಫ್ತಿ ಸರಕಾರದಲ್ಲಿರುವ ಬಿಜೆಪಿಯ ಎಲ್ಲಾ ಸಚಿವರು ರಾಜೀನಾಮೆ ಪತ್ರವನ್ನು ಪಕ್ಷಕ್ಕೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ನಾಯಕ ರಾಮ್ ಮಹಾದೇವ್ ನಡೆಸಿದ್ದ ಸಭೆಯಲ್ಲಿ ನೀಡಿದ್ದ ಸೂಚನೆಯಂತೆ ಸಚಿವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಬೆಂಬಲದೊಂದಿಗೆ ಮೆಹಬೂಬ ಮುಫ್ತಿಯವರ ಪಿಡಿಪಿ ಜಮ್ಮು ಕಾಶ್ಮೀರ ರಾಜ್ಯದ ಅಧಿಕಾರದಲ್ಲಿದೆ. ಬಿಜೆಪಿ ಸಚಿವರು ರಾಜೀನಾಮೆ ನೀಡುತ್ತಾರಾದರೂ ಪಿಡಿಪಿಗೆ ಬಿಜೆಪಿ ನೀಡಿರುವ ಬೆಂಬಲ ಹಿಂದೆಗೆದುಕೊಳ್ಳುತ್ತಿದೆ ಎಂದರ್ಥವಲ್ಲ ಎಂದು ಮೂಲಗಳು ತಿಳಿಸಿವೆ.

ಮುಫ್ತಿಯವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಜೊತೆಗೆ ಮೈತ್ರಿ ಮುರಿದುಕೊಳ್ಳುವ, ತಾನು ನೀಡಿದ್ದ ಬೆಂಬಲವನ್ನು ಹಿಂದೆಗೆದುಕೊಳ್ಳುವ ಯಾವುದೇ ಉದ್ದೇಶ ಬಿಜೆಪಿಗಿಲ್ಲ. ಈ ರಾಜೀನಾಮೆಯ ಹಿಂದಿನ ಉದ್ದೇಶ ಇನ್ನಷ್ಟೇ ಸ್ಪಷ್ಟವಾಗಬೇಕಾಗಿದೆ ಎಂದ ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News