ವಿಶ್ವಸಂಸ್ಥೆಯ ಸಂಸ್ಥೆಗಳಿಗೆ ಭಾರತೀಯರ ಆಯ್ಕೆ

Update: 2018-04-17 17:09 GMT

ನ್ಯೂಯಾರ್ಕ್, ಎ. 16: ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿ (ಎಕಸಾಕ್)ಯು ‘ಸರಕಾರೇತರ ಸಂಘಟನೆ ಸಮಿತಿ’ಗೆ ಸೋಮವಾರ ನಡೆಸಿದ ಚುನಾವಣೆಯಲ್ಲಿ, ಅತಿ ಹೆಚ್ಚು ಸಂಖ್ಯೆಯ ಮತಗಳನ್ನು ಪಡೆದು ಭಾರತ ಜಯ ಗಳಿಸಿದೆ. ಅದೇ ವೇಳೆ, ಸಮಿತಿಯ ಇತರ ಉಪಸಂಸ್ಥೆಗಳಿಗೆ ನಡೆದ ಐದು ಪ್ರತ್ಯೇಕ ಚುನಾವಣೆಗಳಲ್ಲಿಯೂ ಧ್ವನಿ ಮತದಿಂದ ಭಾರತ ಆಯ್ಕೆಗೊಂಡಿದೆ.

ಸಮಿತಿಯ ವಿವಿಧ ಉಪ ಸಂಸ್ಥೆಗಳಿಗೆ ವಿಶ್ವಸಂಸ್ಥೆಯಲ್ಲಿ ಮತದಾನ ನಡೆಯಿತು. ಆರ್ಥಿಕ, ಸಾಮಾಜಿಕ ಮತ್ತು ಪಾರಿಸಾರಿಕ- ಹೀಗೆ ಸಹ್ಯ ಬೆಳವಣಿಗೆಯ ಮೂರು ಆಯಾಮಗಳ ಮೇಲೆ ಸಮಿತಿಯು ವಿಶೇಷ ಗಮನ ನೀಡುತ್ತದೆ.

‘‘ವಿಶ್ವಸಂಸ್ಥೆಯ ಸದಸ್ಯರ ಪೈಕಿ ಭಾರತ ವ್ಯಾಪಕ ಬೆಂಬಲ ಮತ್ತು ಹಲವಾರು ಸ್ನೇಹಿತರನ್ನು ಹೊಂದಿರುವುದನ್ನು ಈ ಫಲಿತಾಂಶಗಳು ಮತ್ತೊಮ್ಮೆ ಸಾಬೀತುಪಡಿಸಿವೆ’’ ಎಂದು ವಿಶ್ವಸಂಸ್ಥೆಗೆ ಭಾರತದ ಖಾಯಂ ರಾಯಭಾರಿ ಸೈಯದ್ ಅಕ್ಬರುದ್ದೀನ್ ಚುನಾವಣೆಯ ಬಳಿಕ ಪಿಟಿಐಗೆ ಹೇಳಿದರು.

ಸರಕಾರೇತರ ಸಂಘಟನೆಗಳ ಸಮಿತಿಗೆ ನಡೆದ ಚುನಾವಣೆಯಲ್ಲಿ ಭಾರತ ಅಗ್ರ ಸ್ಥಾನ ಗಳಿಸಿದೆ.

ಸರಕಾರೇತರ ಸಂಘಟನೆ ಸಮಿತಿಯು ಎಕಸಾಕ್‌ನ ಸ್ಥಾಯಿ ಸಮಿತಿಯಾಗಿದೆ.

ಒಂದು ಸುತ್ತಿನ ರಹಸ್ಯ ಮತದಾನದಲ್ಲಿ, ಏಶ್ಯ ಪೆಸಿಫಿಕ್ ದೇಶಗಳ ವಿಭಾಗದಲ್ಲಿ ಬಹರೈನ್, ಚೀನಾ, ಭಾರತ ಮತ್ತು ಪಾಕಿಸ್ತಾನಗಳು ಆಯ್ಕೆಗೊಂಡರೆ, ಬ್ರೆಝಿಲ್, ಕ್ಯೂಬ, ಮೆಕ್ಸಿಕೊ ಮತ್ತು ನಿಕಾರಗುವ ದೇಶಗಳು 2019 ಜನವರಿ 1ರಿಂದ ಆರಂಭಗೊಳ್ಳುವ ನಾಲ್ಕು ವರ್ಷಗಳ ಅವಧಿಗೆ ಆಯ್ಕೆಗೊಂಡವು.

ಭಾರತಕ್ಕೆ ಅತಿ ಹೆಚ್ಚು, ಅಂದರೆ 46 ಮತಗಳು ಬಂದರೆ, ಪಾಕಿಸ್ತಾನಕ್ಕೆ 43 ಹಾಗೂ ಚೀನಾಕ್ಕೆ 39 ಮತ್ತು ಬಹರೈನ್‌ಗೆ 40 ಮತಗಳು ಲಭಿಸಿದವು.

ನಾಲ್ಕು ವರ್ಷಗಳ ಅವಧಿಯ ಇತರ ಹುದ್ದೆಗಳಿಗಾಗಿ 11 ದೇಶಗಳು ಧ್ವನಿಮತದಿಂದ ಅಂಗೀಕಾರ ಪಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News