×
Ad

ಕಥುವಾ ಬಾಲಕಿ ಹತ್ಯೆಗೆ ಖಂಡನೆ: ಕಠಿಣ ಶಿಕ್ಷೆಗೆ ಕೊಡಗು ಜಿಲ್ಲಾ ಎಸ್‍ಕೆಎಸ್ಸೆಸ್ಸೆಫ್ ಒತ್ತಾಯ

Update: 2018-04-17 23:34 IST

ಮಡಿಕೇರಿ,ಎ.17: ಭಾರತದ ಹೂದೋಟವೆಂದೇ ಪ್ರಸಿದ್ಧಿಯನ್ನು ಪಡೆದಿರುವ ಕಾಶ್ಮೀರದ  ಕಥುವಾದಲ್ಲಿ ಅಪ್ರಾಪ್ತ ಬಾಲಕಿ ಆಸಿಫಾಳ ಮೇಲಿನ ಅತ್ಯಾಚಾರ ಮತ್ತು ಹತ್ಯಾ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಕೊಡಗು ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಕೆಎಸ್‍ಎಸ್‍ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎ.ಅಶ್ರಫ್ ಮಿಸ್ಬಾಹಿ, ಉನ್ನತ ಸಂಸ್ಕೃತಿ, ಜೀವನ ಮೌಲ್ಯಗಳಿಗಾಗಿ ಇಡೀ ವಿಶ್ವವನ್ನು ತನ್ನತ್ತ ಸೆಳೆಯುತ್ತಿರುವ ಭಾರತ, ಮಹಾನ್ ವ್ಯಕ್ತಿಗಳು, ಪುಣ್ಯ ಪುರುಷರು ಬದುಕಿರುವ ಪುಣ್ಯ ಭೂಮಿಯೇ ಆಗಿದೆ. ಇಂತಹ ನೆಲದಲ್ಲಿ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಯುವ ಮೂಲಕ ಇಡೀ ರಾಷ್ಟ್ರ ತಲೆತಗ್ಗಿಸುವಂತಾಗಿದೆಯೆಂದು ಬೇಸರ ವ್ಯಕ್ತಪಡಿಸಿದರು.

ಅತ್ಯಂತ ಅಮಾನವೀಯವಾದ ಇಂತಹ ಕೃತ್ಯವೆಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮೌನವಾಗಿರುವುದು ಅತ್ಯಂತ ಖೇದಕರ ಮತ್ತು ಇದನ್ನು ಸಂಘಟನೆ ತೀವ್ರವಾಗಿ ವಿರೋಧಿಸುತ್ತದೆ. ದುಷ್ಕೃತ್ಯವೆಸಗಿದವರನ್ನು ಕಠಿಣ ಕಾನೂನು ಕ್ರಮಗಳಿಗೆ ಒಳಪಡಿಸಿ ಶಿಕ್ಷಿಸಬೇಕು. ಆ ಮೂಲಕ ಮತ್ತೆಂದಿಗೂ ಯಾವುದೇ ಹೆಣ್ಣು ಮಗಳಿಗೆ ಇಂತಹ ಸಂಕಷ್ಟ ಎದುರಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆಯೆಂದು ತಿಳಿಸಿದರು.

ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಹತ್ಯಾ ಪ್ರಕರಣ ಈ ರಾಷ್ಟ್ರದ ಜಾತ್ಯತೀತ ನಿಲುವುಗಳನ್ನು, ಕೋಮು ಸೌಹಾರ್ದತೆಯನ್ನು, ಸಹಿಷ್ಣುತೆಯನ್ನು ಕದಡಬಹುದೆಂದು ಆತಂಕ ವ್ಯಕ್ತಪಡಿಸಿದ ಅಶ್ರಫ್ ಮಿಸ್ಬಾಹಿ, ಘಟನೆಗೆ ಕಾರಣರಾದವರನ್ನು ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‍ಕೆಎಸ್‍ಎಸ್‍ಎಫ್ ರಾಜ್ಯ ಕಾರ್ಯದರ್ಶಿ ಪಿ.ಎಂ. ಆರಿಫ್ ಫೈಝಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಪೊನ್ನಂಪೇಟೆಯ ಸಾಜಿರ್, ಸಂಚಾಲಕ ಗುಹ್ಯದ ಕರೀಂ ಮುಸ್ಲಿಯಾರ್, ಸದಸ್ಯರುಗಳಾದ ನೆಲ್ಯಹುದಿಕೇರಿಯ ಶರ್ಫುದ್ದೀನ್ ಹಾಗೂ ಪೊನ್ನಂಪೇಟೆಯ ಫೈಝಲ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News