ಪ್ರಧಾನಿ ನನಗೆ ನೀಡಿದ್ದ ಸಲಹೆಯನ್ನು ಖುದ್ದು ಪಾಲಿಸಿ ಆಗಾಗ ಮಾತನಾಡಲಿ: ಮನಮೋಹನ್ ಸಿಂಗ್

Update: 2018-04-18 08:48 GMT

ಹೊಸದಿಲ್ಲಿ, ಎ.18: ‘‘ಪ್ರಧಾನಿ ನರೇಂದ್ರ ಮೋದಿ ನನಗೆ ನೀಡಿದ ಸಲಹೆಯನ್ನು ಖುದ್ದು ಪಾಲಿಸಬೇಕು ಹಾಗೂ ಆಗಾಗ ಮಾತನಾಡಬೇಕು’’ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಕಥುವಾದಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳ ಬರ್ಬರ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋದಲ್ಲಿ ಯುವತಿಯೊಬ್ಬಳ ಮೇಲೆ ಬಿಜೆಪಿ ಶಾಸಕನೊಬ್ಬ ನಡೆಸಿದ್ದಾರೆನ್ನಲಾದ ಅತ್ಯಾಚಾರ ಪ್ರಕರಣಗಳ ಬಗ್ಗೆ ಪ್ರಧಾನಿ ಆರಂಭದಲ್ಲಿ ವಹಿಸಿದ್ದ ಮೌನದ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್ ಮೇಲಿನಂತೆ ಹೇಳಿದ್ದಾರೆ.

ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿಂಗ್, ಕಳೆದ ಶುಕ್ರವಾರ ಮೋದಿ ತಮ್ಮ ಮೌನ ಮುರಿದು ‘‘ಭಾರತದ ಪುತ್ರಿಯರಿಗೆ ನ್ಯಾಯ ದೊರೆಯುವುದು ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವುದು’’ ಎಂದು ಅಂಬೇಡ್ಕರ್ ಜಯಂತಿ ಸಮಾರಂಭವೊಂದರಲ್ಲಿ ಹೇಳಿರುವುದು ಖುಷಿ ನೀಡಿದೆ ಎಂದರು.

ತಾವು ಪ್ರಧಾನಿಯಾಗಿದ್ದಾಗ ಬಿಜೆಪಿ ತಮ್ಮನ್ನು ಮೌನ ಮೋಹನ್ ಸಿಂಗ್ ಎಂದು ಕುಹಕವಾಡುತ್ತಿದ್ದ ಬಗ್ಗೆ ಪ್ರಶ್ನಿಸಿದಾಗ ‘‘ನಾನು ಜೀವಮಾನವಿಡೀ ಇಂತಹ ಪ್ರತಿಕ್ರಿಯೆಗಳೊಂದಿಗೆ ಬದುಕುತ್ತಿದ್ದೇನೆ’’ ಎಂದು ಹೇಳಿದರು.

ಈ ಹಿಂದೆಲ್ಲಾ ಮೋದಿ ಮೌನ ವಹಿಸಿದಾಗಲೆಲ್ಲಾ ತಪ್ಪು ಮಾಡಿಯೂ ತಪ್ಪಿಸಿಕೊಳ್ಳಬಹುದೆಂಬ ಭಾವನೆ ಮೂಡಿತ್ತು. ಅಧಿಕಾರದಲ್ಲಿರುವವರು ಸರಿಯಾದ ಸಮಯದಲ್ಲಿ ಮಾತನಾಡಿದರೆ ನಿಖರ ಸಂದೇಶ ರವಾನಿಸಿದಂತಾಗುವುದು’’ಎಂದು ಸಿಂಗ್ ಅಭಿಪ್ರಾಯ ಪಟ್ಟರು.

ಕಥುವಾ ಪ್ರಕರಣವನ್ನು ಜಮ್ಮು ಕಾಶ್ಮೀರ ಸರಕಾರ ನಿಭಾಯಿಸಿದ ರೀತಿಯ ಬಗ್ಗೆ ಪ್ರಶ್ನಿಸಿದಾಗ ‘‘ಆಕೆ ಇದನ್ನು ಇನ್ನಷ್ಟು ಗಂಭೀರವಾಗಿ ನಿಭಾಯಿಸಿ ಒಂದು ಕಠಿಣ ನಿಲುವು ತಳೆಯಬೇಕಿತ್ತು’’ ಎಂದು ಮನಮೋಹನ್ ಸಿಂಗ್ ಹೇಳಿದರು.

‘‘ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ಕಾನೂನು ಸುವ್ಯವಸ್ಥೆ ಸಮಸ್ಯೆಗಳು, ಮುಸ್ಲಿಮರು ಮತ್ತು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭ ಪರಿಣಾಮ ಬೀರುವುದು’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News