ಮಗನ ಮದುವೆಯಲ್ಲಿ ‘ನಿಷೇಧಿತ ಮಾಂಸ’ದೂಟ: ವ್ಯಕ್ತಿಗೆ ಹಲ್ಲೆ

Update: 2018-04-18 16:57 GMT

ರಾಂಚಿ,ಎ.18: ತನ್ನ ಮಗನ ಮದುವೆಯಲ್ಲಿ ಅತಿಥಿಗಳಿಗೆ ‘ನಿಷೇಧಿತ ಮಾಂಸ’ವನ್ನು ಉಣಬಡಿಸಿದ್ದಾನೆ ಎಂಬ ಶಂಕೆಯಿಂದ ಗುಂಪೊಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಯ ಮೇಲೆ ಹಲ್ಲೆಗೈದ ಆಘಾತಕಾರಿ ಘಟನೆ ಜಾರ್ಖಂಡ್‌ನ ಕೊಡೆರ್ಮಾ ಜಿಲ್ಲೆಯ ಡೋಮಚಂಚಾ ಬ್ಲಾಕ್‌ನ ನವಾದಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಘಟನೆಯ ಬಳಿಕ ಗ್ರಾಮದಲ್ಲಿ ಮತ್ತು ಸುತ್ತುಮುತ್ತಲ ಪ್ರದೇಶಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದ್ದು,ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಘಟನೆಗೆ ಸಂಬಂಧಿಸಿದಂತೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಉದ್ವಿಗ್ನತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಕಿಡಿಗೇಡಿಗಳ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಕೊಡೆರ್ಮಾ ಎಸ್‌ಪಿ ಶಿವಾನಿ ತಿವಾರಿ ಅವರು ಬುಧವಾರ ತಿಳಿಸಿದರು.

‘ನಿಷೇಧಿತ ಮಾಂಸ’ವನ್ನು ಅತಿಥಿಗಳಿಗೆ ಉಣಬಡಿಸಲಾಗಿತ್ತೇ ಎಂಬ ಪ್ರಶ್ನೆಗೆ ಅವರು, ಲಭ್ಯ ಗೊರಸುಗಳನ್ನು ನಾವು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದೇವೆ ಮತ್ತು ವರದಿಯನ್ನು ಸ್ವೀಕರಿಸಿದ ಬಳಿಕವಷ್ಟೇ ಖಚಿತಪಡಿಸಲು ಸಾಧ್ಯ ಎಂದು ತಿಳಿಸಿದರು.

ಮಂಗಳವಾರ ವ್ಯಕ್ತಿಯ ಮನೆಯ ಹಿಂಭಾಗದ ಹೊಲವೊಂದರಲ್ಲಿ ಕೆಲವು ಗೊರಸುಗಳು ಮತ್ತು ಮೂಳೆಗಳನ್ನು ಪತ್ತೆ ಹಚ್ಚಿದ ಕೆಲವು ಗ್ರಾಮಸ್ಥರು ಆತ ಸೋಮವಾರ ರಾತ್ರಿ ತನ್ನ ಮಗನ ಮದುವೆಯ ನಿಮಿತ್ತ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ನಿಷೇಧಿತ ಮಾಂಸವನ್ನು ಅತಿಥಿಗಳಿಗೆ ಉಣಬಡಿಸಿದ್ದಾನೆ ಎಂದು ಆರೋಪಿಸಿದ್ದರು. ಬಳಿಕ ಆ ವ್ಯಕ್ತಿಯನ್ನು ಥಳಿಸಿ ತೀವ್ರವಾಗಿ ಗಾಯಗೊಳಿಸಿದ್ದ ಗುಂಪು ಸಮೀಪದಲ್ಲಿಯ ಕೆಲವು ಮನೆಗಳಿಗೆ ಮತ್ತು ಹಲವಾರು ವಾಹನಗಳಿಗೆೆ ಹಾನಿಯನ್ನುಂಟು ಮಾಡಿತ್ತು.

ಗಾಯಾಳುವನ್ನು ರಾಂಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ವರ್ಷದ ಜೂನ್ 29ರಂದು ಜಾರ್ಖಂಡ್‌ನ ರಾಮಗಢದಲ್ಲಿ ಗೋಮಾಂಸವನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಮಾಂಸ ವ್ಯಾಪಾರಿ ಅಲಿಮುದ್ದೀನ್ ಅನ್ಸಾರಿ ಎಂಬವರನ್ನು ಗೋರಕ್ಷಕರ ಗುಂಪು ಹತ್ಯೆಗೈದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ಕಳೆದ ತಿಂಗಳು 11 ಗೋರಕ್ಷಕರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಜಾರ್ಖಂಡ್‌ನಲ್ಲಿ ಗೋಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News