ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಎಸ್‍ಡಿಪಿಐ ತೀರ್ಮಾನ
ಮಡಿಕೇರಿ,ಎ.18: ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಪಕ್ಷವು ತನ್ನ ಅಭ್ಯರ್ಥಿಗಳನ್ನು ಕಣಕ್ಕಳಿಸಲು ತೀರ್ಮಾನಿಸಲಾಗಿದೆ.
ಮಡಿಕೇರಿಯಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಬುಧವಾರ ಚುನಾವಣಾ ವೀಕ್ಷಕರಾದ ಅಕ್ರಂ ಹಸ್ಸನ್ ಹಾಗೂ ಶಾಫಿ ಬೆಳ್ಳಾರೆ ನೇತೃತ್ವದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪಡೆಯಲಾಗಿದ್ದು, ವಿರಾಜಪೇಟೆ ಕ್ಷೇತ್ರದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಮಡಿಕೇರಿ ನಗರಸಭಾ ಸದಸ್ಯರಾದ ಅಮೀನ್ ಮೊಹಿಸಿನ್ ಮತ್ತು ಪೀಟರ್ ಅವರ ಹೆಸರನ್ನು, ಅದೇ ರೀತಿ ಮಡಿಕೇರಿ ಕ್ಷೇತ್ರದಲ್ಲಿ ವಕೀಲ ಟಿ.ಹೆಚ್.ಅಬೂಬಕ್ಕರ್, ರಾಜ್ಯ ಸಮಿತಿ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಮತ್ತು ಮಾಜಿ ಜಿಲ್ಲಾಧ್ಯಕ್ಷ ಎಂ.ಎ ಫಜಲುಲ್ಲಾ ಅವರ ಹೆಸರುಗಳನ್ನು ಸೂಚಿಸಲಾಗಿದೆ. ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಎಪ್ರಿಲ್ 22ಕ್ಕೆ ಘೋಷಣೆ ಮಾಡಲಿದ್ದು, ಎ.23ಕ್ಕೆ ನಾಮಪತ್ರ ಸಲ್ಲಿಸಲಿದೆ.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಸದಸ್ಯರಾದ ಪೀಟರ್, ಮನ್ಸೂರ್, ನಾಗರತ್ನ, ಶೌಕತ್ ಅಲಿ, ಇಬ್ರಾಹೀಂ, ಹ್ಯಾರಿಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.