ರಾಜ್ಯ ವಿಧಾನಸಭಾ ಚುನಾವಣೆ: ಬಿಜೆಪಿಯಲ್ಲಿ ಅದೇ ಮುಖಗಳು

Update: 2018-04-19 04:18 GMT

ರಾಜ್ಯಕ್ಕೆ ಭ್ರಷ್ಟಾಚಾರ ಮುಕ್ತ ದಕ್ಷ ಆಡಳಿತ ನೀಡುವುದಾಗಿ ಘೋಷಣೆ ಮಾಡಿದ್ದ ಬಿಜೆಪಿ 82 ಅಭ್ಯರ್ಥಿಗಳ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಲ್ಲ ಮತ ಕ್ಷೇತ್ರಗಳ ಬಗ್ಗೆ ತಾವೇ ಗುಟ್ಟಾಗಿ ಮಾಡಿಸಿದ ಸಮೀಕ್ಷೆಗಳನ್ನು ಬದಿಗಿಟ್ಟು ಹಳೆಯ ಮುಖಗಳಿಗೆ ಆದ್ಯತೆ ನೀಡಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಗೆಲ್ಲುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ಪಕ್ಷದ ಅಧಿಕೃತ ಪ್ರಕಟನೆ ತಿಳಿಸಿದೆ. ಈ ಪಟ್ಟಿಯೊಂದಿಗೆ ಈವರೆಗೆ 154 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದಂತಾಗಿದೆ. ಇನ್ನೂ 70 ಮಂದಿ ಉಮೇದುವಾರರ ಹೆಸರಿನ ಪ್ರಕಟನೆ ಬಾಕಿ ಉಳಿದಿದೆ. ಬಿಜೆಪಿಯ ಎರಡನೇ ಪಟ್ಟಿ ಪಕ್ಷದ ಒಳಗಡೆ ಬಂಡಾಯದ ಅಲೆಯನ್ನು ಎಬ್ಬಿಸಿದೆ.

ಟಿಕೆಟ್ ವಂಚಿತರಾದ ಅನೇಕರು ಬೆಂಗಳೂರಿಗೆ ಬಂದು ಪಕ್ಷದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪರ ಮುಂದೆ ಪ್ರತಿಭಟನೆ ಮತ್ತು ಧರಣಿಯನ್ನು ನಡೆಸಿದ್ದಾರೆ. ಕೆಲವೆಡೆ ಟಿಕೆಟ್ ಸಿಗದವರ ಬೆಂಬಲಿಗರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪಾವಗಡದಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಆಕ್ರೋಶಗೊಂಡಿರುವ ಕೃಷ್ಣಾ ನಾಯಕ್ ಬೆಂಬಲಿಗರು ಸ್ಥಳೀಯ ಬಿಜೆಪಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ಮೂಡುಬಿದಿರೆಯಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಅಸಮಾಧಾನಗೊಂಡಿರುವ ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ಪಕ್ಷದ ಸ್ಥಳೀಯ ಕಚೇರಿಗೆ ಬೀಗ ಜಡಿದಿದ್ದಾರೆ. ತುಮಕೂರು ಮತ್ತು ಸಾಗರಗಳಲ್ಲೂ ಅತೃಪ್ತರ ಪ್ರತಿಭಟನೆ ತೀವ್ರಗೊಂಡಿದೆ. ಬಿಜೆಪಿ ಟಿಕೆಟ್ ತಮಗೆ ಸಿಗಲಿಲ್ಲ ಎಂದು ಪುತ್ತೂರಿನಲ್ಲಿ ಅಶೋಕ್ ಕುಮಾರ್ ರೈ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರಗಿಯಲ್ಲಿ ತನಗೆ ಟಿಕೆಟ್ ಸಿಗಲಿಲ್ಲ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ ಪತ್ರಿಕಾಗೋಷ್ಠಿಯಲ್ಲೇ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಹೋಗಿ ಅಲ್ಲಿಂದ ಬಿಜೆಪಿಗೆ ಜಂಪ್ ಮಾಡಿದ್ದ ವಿಜಯಪುರದ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೂ ತಮ್ಮ ಪತ್ನಿಗೆ ಟಿಕೆಟ್ ಕೊಡಿಸುವಲ್ಲಿ ವಿಫಲಗೊಂಡಿದ್ದಾರೆ. ಹೀಗಾಗಿ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಿಳಗಿ ಮತ ಕ್ಷೇತ್ರದಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಬಿಜೆಪಿ ಟಿಕೆಟ್ ಪಡೆದಿದ್ದರೂ ಜಮಖಂಡಿ ಮತ ಕ್ಷೇತ್ರದಲ್ಲಿ ಅವರ ಸೋದರ ಸಂಗಮೇಶ್ ನಿರಾಣಿಗೆ ಟಿಕೆಟ್ ಸಿಗಲಿಲ್ಲ ಎಂದು ಅವರ ಬೆಂಬಲಿಗರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ರೀತಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಎಲ್ಲೆಡೆ ಅಸಮಾಧಾನ ವ್ಯಕ್ತವಾಗಿದೆ. ಸೋಮವಾರ ಬಿಡುಗಡೆಯಾದ 82 ಅಭ್ಯರ್ಥಿಗಳ ಪಟ್ಟಿಯಲ್ಲಿ ಯಡಿಯೂರಪ್ಪರೊಂದಿಗೆ ಬಿಜೆಪಿಯಲ್ಲಿ ಗುರುತಿಸಿಕೊಂಡವರಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂಬ ಅಸಮಾಧಾನ ಬಿಜೆಪಿ ಒಳಗೆ ಕಂಡುಬರುತ್ತಿದೆ. ಇನ್ನು ಈ ವರೆಗೆ ಬಿಡುಗಡೆಯಾದ 154 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಯಾಗಲಿ, ಕ್ರೈಸ್ತ ಅಭ್ಯರ್ಥಿಯಾಗಲಿ ಇಲ್ಲ. ಚುನಾವಣೆಯಲ್ಲಿ ಸಂವಿಧಾನಕ್ಕೆ ಬದ್ಧವಾಗಿ ಸ್ಪರ್ಧಿಸುವ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಕನಿಷ್ಠ ಸಾಮಾಜಿಕ ನ್ಯಾಯದ ತತ್ವವನ್ನು ಪಾಲಿಸಬೇಕಾಗುತ್ತದೆ. ಬಿಜೆಪಿ ಪಟ್ಟಿಯಲ್ಲಿ ಅಂತಹ ಸಾಮಾಜಿಕ ನ್ಯಾಯಕ್ಕೆ ಪ್ರಾಮುಖ್ಯತೆ ನೀಡಿಲ್ಲ. ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರನ್ನು ಬಿಜೆಪಿ ಸಂಪೂರ್ಣವಾಗಿ ಕಡೆಗಣಿಸಿದೆ. ಈ ಹಿಂದೆ ಶಾಸಕಿಯಾಗಿದ್ದ ನಿಪ್ಪಾಣಿಯ ಶಶಿಕಲಾ ಜೊಲ್ಲೆ ಅವರನ್ನು ಹೊರತುಪಡಿಸಿ ಬೇರೆ ಮಹಿಳೆಯರಿಗೆ ಆದ್ಯತೆ ನೀಡಿಲ್ಲ. 224 ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಸಮರ್ಥವಾದ ಒಬ್ಬ ಮಹಿಳೆಯೂ ಬಿಜೆಪಿಗೆ ಸಿಕ್ಕಂತೆ ಕಾಣುವುದಿಲ್ಲ.

ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಕ್ಷೇತ್ರಗಳಲ್ಲಿ ಮಾತ್ರ ಅವರಿಗೆ ಟಿಕೆಟ್ ನೀಡಲಾಗಿದೆ. ಮೀಸಲು ವ್ಯವಸ್ಥೆ ಇರದಿದ್ದರೆ ಆ ಟಿಕೆಟ್ ಕೂಡಾ ಮೇಲ್ಜಾತಿಗಳಿಗೇ ದಕ್ಕುತ್ತಿತ್ತು. ಇದರಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಬಿಜೆಪಿ ಎಂಬುದು ಎಲ್ಲ ಜನಸಮುದಾಯಗಳನ್ನು ಪ್ರತಿನಿಧಿಸುವ ಪಕ್ಷವಲ್ಲ. ಅದು ಕೆಲವೇ ಮೇಲ್ಜಾತಿಗಳಿಗೆ ಸೀಮಿತವಾದ ಪುರುಷ ಪ್ರಧಾನ ಪಕ್ಷವೆಂಬುದು ಇದರಿಂದ ಸಾಬೀತಾಗುತ್ತದೆ. ಈ ರೀತಿ ತೂಗಿ ಅಳೆದು ಬಿಜೆಪಿ ಟಿಕೆಟ್ ನೀಡಿದ್ದರೂ ಅದು ಎಂತಹವರಿಗೆ ನೀಡಿದೆ ಎಂದು ಗಮನಿಸಿದರೆ ಅಲ್ಲಿ ಕಳಂಕಿತ ಮುಖಗಳೇ ಕಾಣುತ್ತವೆ. ಈ ಬಾರಿ ಬಿಜೆಪಿ ಪಟ್ಟಿಯಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು, ಮಾಳೂರಿನ ಕೃಷ್ಣಯ್ಯ ಶೆಟ್ಟಿ, ಹೊನ್ನಾಳಿಯ ರೇಣುಕಾಚಾರ್ಯ, ಸೊರಬದ ಹಾಲಪ್ಪ ಇಂತಹ ಮುಖಗಳೇ ಕಾಣುತ್ತವೆ.

ಹಿಂದೆ ಅಧಿಕಾರದಲ್ಲಿದ್ದಾಗ ಮಾಡಬಾರದ ಭ್ರಷ್ಟಾಚಾರಗಳನ್ನು ಮಾಡಿ ಜೈಲಿಗೆ ಹೋಗಿ ಬಂದ ವ್ಯಕ್ತಿಯನ್ನೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿರುವುದು ಮಾತ್ರವಲ್ಲ, ಇತರ ಟಿಕೆಟ್ ಹಂಚಿಕೆಯಲ್ಲೂ ಇಂತಹ ಮುಖಗಳೇ ಕಾಣಿಸುತ್ತವೆ. ಹಿಂದೆ ಬಿಜೆಪಿ ಸರಕಾರವಿದ್ದಾಗ ರಿಯಲ್ ಎಸ್ಟೇಟ್ ಹಗರಣದಲ್ಲಿ ಜೈಲಿಗೆ ಹೋಗಿ ಬಂದ ಕಟ್ಟಾ ಸುಬ್ರಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಹಾಗೂ ಅನೈತಿಕ ಪ್ರಕರಣವೊಂದರಲ್ಲಿ ಹೆಸರು ಕೆಡಿಸಿಕೊಂಡ ಹಾಲಪ್ಪ ಮತ್ತು ರೇಣುಕಾಚಾರ್ಯ ಮುಂತಾದ ಮಾಜಿ ಸಚಿವರಿಗೆ ಟಿಕೆಟ್ ನೀಡಲಾಗಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಸಂಘಪರಿವಾರದ ಹಿನ್ನೆಲೆಯ ಬಿಜೆಪಿಯಲ್ಲಿ ಕೂಡಾ ವ್ಯಕ್ತಿಯ ಚಾರಿತ್ರ ಮತ್ತು ಪ್ರಾಮಾಣಿಕತೆ ಮುಖ್ಯವಾಗಿಲ್ಲ. ಯಾರು ಹಣ ಚೆಲ್ಲಿ ಗೆದ್ದು ಬರುವ ಸಾಮರ್ಥ್ಯ ಹೊಂದಿರುತ್ತಾರೋ ಅವರಿಗೆ ಟಿಕೆಟ್ ನೀಡಲಾಗಿದೆ. ಇವು ಅನೇಕ ಕಡೆ ಅಸಮಾಧಾನಕ್ಕೆ ಕಾರಣವಾದ ಅಂಶವಾಗಿದೆ. ಈ ಅಸಮಾಧಾನವನ್ನು ಬಿಜೆಪಿ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಈಗಲೇ ಹೇಳಲು ಆಗುವುದಿಲ್ಲ. ಅಮಿತ್ ಶಾ ಬುಧವಾರ ಬೆಂಗಳೂರಿಗೆ ಬಂದಿದ್ದಾರೆ. ಅಂತಿಮ ಪಟ್ಟಿ ಹೊರ ಬಿದ್ದಿದ್ದರೂ ಕೊನೆಯ ಹಂತದಲ್ಲಿ ಇನ್ನೂ ಕೆಲವು ಬದಲಾವಣೆಗಳಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪರು ಟಿಕೆಟ್ ಹಂಚಿಕೆಯಲ್ಲಿ ಕೆಜೆಪಿಯಿಂದ ಬಂದವರಿಗೆ ಹೆಚ್ಚು ಆದ್ಯತೆ ನೀಡಿದ್ದಾರೆಂದು ಮೂಲ ಬಿಜೆಪಿಗರಲ್ಲೇ ಅಸಮಾಧಾನವಿದೆ.

ಹೀಗಾಗಿ ಬೀದರ್, ಕಲಬುರಗಿ ಮುಂತಾದ ಜಿಲ್ಲೆಗಳಲ್ಲಿ ಯಡಿಯೂರಪ್ಪರ ವಿರುದ್ಧವೇ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲೂ ಅಸಮಾಧಾನ ಕಂಡುಬರುತ್ತಿದೆ. ಟಿಕೆಟ್ ಸಿಗದೆ ನಿರಾಶರಾದ ಅನೇಕರು ಬೇರೆ ಪಕ್ಷದ ಟಿಕೆಟ್‌ಗಳಿಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಇನ್ನು ಕೆಲವರು ದಿಲ್ಲಿಯವರೆಗೆ ಹೋಗಿ ಕೊನೆಯ ಗಳಿಗೆಯಲ್ಲಿ ಬಿ ಫಾರಂ ತೆಗೆದುಕೊಂಡು ಬರಲು ಯತ್ನಿಸುತ್ತಿದ್ದಾರೆ. ಜೆಡಿಎಸ್‌ನಂತಹ ಪಕ್ಷದಲ್ಲೂ ಟಿಕೆಟ್‌ಗಾಗಿ ಅಸಮಾಧಾನ ಕಂಡುಬರುತ್ತಿದೆ. ಕೆಲವೆಡೆ ಟಿಕೆಟ್ ಸಿಗದ ಅನೇಕರು ಬಂಡಾಯದ ಬಾವುಟ ಹಾರಿಸಿದ್ದಾರೆ. ಒಟ್ಟಾರೆ ಉದ್ಯಮಪತಿಗಳು, ಮರಳು ಗಣಿಗಾರಿಕೆಯ ಉದ್ಯಮಿಗಳು, ರಿಯಲ್ ಎಸ್ಟೇಟ್ ಮಾಫಿಯಾಗಳು ಚುನಾವಣಾ ರಾಜಕೀಯವನ್ನು ಪ್ರವೇಶಿಸಿದ ಬಳಿಕ ಚುನಾವಣೆಯ ಸ್ವರೂಪವೇ ಬದಲಾಗಿದೆ.

ಹಿಂದೆಲ್ಲ ಉದ್ಯಮಪತಿಗಳು ನೇರವಾಗಿ ಚುನಾವಣೆಗೆ ಬರುತ್ತಿರಲಿಲ್ಲ. ತಮ್ಮ ಹಿತಾಸಕ್ತಿಯನ್ನು ರಕ್ಷಿಸುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಅವರು ಬೆಂಬಲವನ್ನು ಕೊಡುತ್ತಿದ್ದರು. ಆದರೆ, ಈಗ ಈ ಉದ್ಯಮಪತಿಗಳೇ ನೇರವಾಗಿ ಚುನಾವಣಾ ರಂಗಕ್ಕೆ ಇಳಿಯುತ್ತಿರುವುದರಿಂದ ಪಕ್ಷದಲ್ಲಿ ನಿಷ್ಠೆಯಿಂದ ದುಡಿಯುತ್ತಾ ಬಂದ ಕಾರ್ಯಕರ್ತರಿಗೆ ನಿರಾಶೆಯುಂಟಾಗಿದೆ. ಹೀಗಾಗಿ ಅತೃಪ್ತಿ ಸ್ಫೋಟವಾಗುತ್ತಿದೆ. ಇಂತಹ ಉದ್ಯಮಪತಿಗಳು ಮತ್ತು ರಿಯಲ್ ಎಸ್ಟೇಟ್ ಮಾಫಿಯಾಗಳೇ ಚುನಾವಣಾ ಕಣದಲ್ಲಿ ಹೆಚ್ಚು ಕಂಡುಬರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News