ಆಧಾರ್ ವ್ಯಕ್ತಿಯ ಜಾತಿ,ಧರ್ಮ ಮತ್ತು ಜನಾಂಗವನ್ನು ದಾಖಲಿಸಿಕೊಳ್ಳುವುದಿಲ್ಲ: ಸುಪ್ರೀಂ ಕೋರ್ಟ್‌ನಲ್ಲಿ ಯುಐಡಿಎಐ

Update: 2018-04-19 16:02 GMT

ಹೊಸದಿಲ್ಲಿ,ಎ.19: ಗುರುವಾರ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠದಲ್ಲಿ ಆಧಾರ್ ಸಿಂಧುತ್ವ ಕುರಿತು ವಿಚಾರಣೆ ಸಂದರ್ಭದಲ್ಲಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ) ಪರ ವಕೀಲ ರಾಕೇಶ್ ದ್ವಿವೇದಿ ಅವರ ನಿವೇದನೆಗಳನ್ನು ಉಲ್ಲೇಖಿಸಿದ ನ್ಯಾ.ಡಿ.ವೈ.ಚಂದ್ರಚೂಡ ಅವರು,ಆಧಾರ್ ಕಾಯ್ದೆಯು ವ್ಯಕ್ತಿಗಳ ಜಾತಿ,ಧರ್ಮ,ಜನಾಂಗ ಇತ್ಯಾದಿಗಳನ್ನು ದಾಖಲಿಸಿಕೊಳ್ಳದ ಮೂಲಕ ಪ್ರಜೆಗಳ ನಡುವೆ ತಾರತಮ್ಯಕ್ಕೆ ಈ ಜನಸಂಖ್ಯಾ ವಿವರಗಳ ಬಳಕೆಯಾಗದಂತೆ ನೋಡಿಕೊಳ್ಳುತ್ತಿದೆ ಎಂದು ಹೇಳಿದರು.

ಜಾತಿ,ಧರ್ಮ,ಜನಾಂಗ ಇತ್ಯಾದಿಗಳು ಆಧಾರ್‌ಗೆ ಅಗತ್ಯವಾಗಿರುವ ವಿವರಗಳಲ್ಲಿ ಸೇರಿಲ್ಲ. ಇವು ತಾರತಮ್ಯವನ್ನೆಸಗಲು ಬಳಸಬಹುದಾದ ಮಾಹಿತಿಗಳಾಗಿವೆ, ಇವುಗಳನ್ನು ಹೊರಗಿಡುವ ಮೂಲಕ ಆಧಾರ್ ಕಾಯ್ದೆಯು ಖಾಸಗಿತನವನ್ನು ಒದಗಿಸಿದೆ ಎಂದರು.

ಜನರಿಗೆ ತಮ್ಮ ಗುರುತಿನ ಆಯ್ಕೆಯನ್ನು ನೀಡುವ ಅಗತ್ಯವಿಲ್ಲವೇ ಎಂಬ ಪೀಠದ ಪ್ರಶ್ನೆಗೆ ಉತ್ತರಿಸಿದ ದ್ವಿವೇದಿ,ಜನಸಂಖ್ಯಾ ವಿವರಗಳಿಗೆ ಸಂಬಂಧಿಸಿದಂತೆ ಪ್ರಜೆಗಳಿಗೆ ಖಾಸಗಿತನದ ಹಕ್ಕು ಇಲ್ಲ. ಹೆಸರು ,ವಯಸ್ಸು ಇತ್ಯಾದಿಗಳು ಈ ಜನಸಂಖ್ಯಾ ವಿವರಗಳಾಗಿವೆ ಎಂದು ವಾದಿಸಿದರು.

  ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ಗುರುತಿನ ಪುರಾವೆಯನ್ನು ಒದಗಿಸುವುದು ಏಕಮಾತ್ರ ಕ್ರಮಬದ್ಧ ಪದ್ಧತಿಯಾಗಿರುವುದರಿಂದ ಅದು ಅವಮಾನಕಾರಿಯಲ್ಲ. ಸಾಪೇಕ್ಷ ಜಗತ್ತಿನಲ್ಲಿ ಓರ್ವ ವ್ಯಕ್ತಿ ಅಥವಾ ಸಂಸ್ಥೆಯ ಜೊತೆ ಸಂಬಂಧ ಹೊಂದಿರಲು ಯಾರಾದರೂ ಬಯಸಿದರೆ ತನ್ನನ್ನು ಹೇಗೆ ಗುರುತಿಸಿಕೊಳ್ಳಬೇಕು ಎನ್ನುವುದನ್ನು ಆತ ಅಥವಾ ಆಕೆ ಆಯ್ಕೆ ಮಾಡಿಕೊಳ್ಳುವಂತಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News