×
Ad

ನಾಮಪತ್ರ ಸಲ್ಲಿಸಿದ ಸಿದ್ದರಾಮಯ್ಯ, ಪುತ್ರ ಡಾ.ಯತೀಂದ್ರ

Update: 2018-04-20 15:22 IST

ಮೈಸೂರು, ಎ.20: ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ.ಯತೀಂದ್ರ ಶುಕ್ರವಾರ ನಾಮಪತ್ರ ಸಲ್ಲಿಸಿದರು.

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಿದರೆ, ಅವರ ಪುತ್ರ ಡಾ.ಯತೀಂದ್ರ ವರುಣಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಮೈಸೂರು ತಾಲೂಕು ಕಚೇರಿಗೆ ಬೆಂಬಲಿಗರೊಂದಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ವರುಣಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ಯತೀಂದ್ರ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಜೊತೆಗಿದ್ದರು.

ನಾಮಪತ್ರ ಸಲ್ಲಿಸುವ ಮುನ್ನ ಹುಟ್ಟೂರು ಸಿದ್ದರಾಮನ ಹುಂಡಿಯ ಸಿದ್ದರಾಮೇಶ್ವರ ದೇವಾಲಯಕ್ಕೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂಜೆ ಸಲ್ಲಿಸಿದರು. ಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯರಿಗೆ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಕೋರಿದರು.

ನಾಮಪತ್ರ ಸಲ್ಲಿಸುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ.ಯತೀಂದ್ರ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಸ್ತಿಯಲ್ಲಿ ರೂ7 ಕೋಟಿ. ಏರಿಕೆಯಾಗಿದ್ದು, ಒಟ್ಟು ರೂ.20.36 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ತಮ್ಮ ನಾಮಪತ್ರ ಸಲ್ಲಿಸಿರುವ ವಿವರದಲ್ಲಿ ಕುಟುಂಬದ ಬಳಿ ರೂ.15.65 ಕೋಟಿ ಸ್ಥಿರಾಸ್ತಿ ಮತ್ತು ರೂ.4.71 ಕೋಟಿ ಚರಾಸ್ತಿ ಇದೆ ಎಂದು ಘೋಷಿಸಿದ್ದಾರೆ. ಕಳೆದ 2013ರ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ಕುಟುಂಬದ ಆಸ್ತಿ ರೂ.13.61 ಕೋಟಿ ಇದೆ ಎಂದು ಘೋಷಿಸಿದ್ದರು.

ಸಿದ್ದರಾಮಯ್ಯ ಬಳಿ ಟೊಯೋಟಾ ಇನ್ನೋವಾ ಕಾರು, 350 ಗ್ರಾಂ ಚಿನ್ನ, 2 ಕೆ.ಜಿ. ಬೆಳ್ಳಿ ಸಾಮಾಗ್ರಿ ಮತ್ತು ಪತ್ನಿಯ ಬಳಿ 540 ಗ್ರಾಂ ಚಿನ್ನ, 4.5 ಕೆ.ಜಿ. ಬೆಳ್ಳಿ ಸಾಮಾಗ್ರಿಗಳು ಇವೆ. ಅವಲಂಬಿತರ ಬಳಿ 650 ಗ್ರಾಂ ಚಿನ್ನ. 5 ಕೆ.ಜಿ.ಬೆಳ್ಳಿ ಸಾಮಾಗ್ರಿ ಇವೆ. ಕುಟುಂಬದ ಒಟ್ಟು ಸಾಲ ರೂ.4.85 ಕೋಟಿಯಷ್ಟಿದೆ ಎಂದು ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News