ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕುಮಾರ್ ಬಂಗಾರಪ್ಪ ನಾಮಪತ್ರ ಸಲ್ಲಿಕೆ

Update: 2018-04-20 11:23 GMT

ಸೊರಬ.ಎ.20: ಬಗರ್‍ಹುಕುಂ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸುವ ಮೂಲಕ ತಾಲೂಕಿನ ರೈತರಿಗೆ ಅನ್ಯಾಯ ಮಾಡಿರುವ ಜೆಡಿಎಸ್ ಪಕ್ಷವನ್ನು ತಾಲೂಕಿನಿಂದ ಹೊರ ಹಾಕುವ ಕಾಲ ಸನ್ನಿಹಿತವಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಎಸ್. ಕುಮಾರ್ ಬಂಗಾರಪ್ಪ ತಿಳಿಸಿದರು. 

ಶುಕ್ರವಾರ ಸೊರಬ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ, ನಂತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರೈತರ ಕಣ್ಣೀರು ಒರೆಸುವ ಕೆಲಸ ಬಿಜೆಪಿ ಯಿಂದ ಮಾತ್ರ ಸಾಧ್ಯ. ತಾಲೂಕಿನ ಸಮಗ್ರ ನೀರಾವರಿ ಅನುಷ್ಠಾನಕ್ಕಾಗಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಅಭಿವೃದ್ಧಿಗೆ ನಾಂದಿ ಹಾಡಬೇಕು. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ರಾಜ್ಯಕ್ಕೆ 3 ಲಕ್ಷ ಕೋಟಿ ಅನುದಾನ ನೀಡಿದ್ದು, ಜನರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದಿದ್ದ ಅನೇಕ ಜನಪರ ಯೋಜನೆಗಳು ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ. ಈ ಬಾರಿಯೂ ಮತ್ತೊಮ್ಮೆ ಯಡಿಯೂರಪ್ಪರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ತಾಲೂಕು ಸೇರಿದಂತೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.  

ಶಿಕಾರಿಪುರ ಶಾಸಕ ಬಿ.ವೈ. ರಾಘವೇಂದ್ರ ಮಾತನಾಡಿ, ಅಭಿವೃದ್ಧಿಯಿಂದ ಹಿಂದುಳಿದಿದ್ದ ತಾಲೂಕನ್ನು ಮಾಜಿ ಸಚಿವ ಹೆಚ್. ಹಾಲಪ್ಪನವರನ್ನು ಮಂತ್ರಿಯನ್ನಾಗಿ ಮಾಡಿ ಅಭಿವೃದ್ಧಿ ಪಡಿಸಿದ ಕೀರ್ತಿ ಬಿಜೆಪಿ ಗೆ ಸಲ್ಲುತ್ತದೆ. ಬಾಕಿ ಉಳಿದ ಅಭಿವೃದ್ಧಿ ಕಾಮಗಾರಿಗಳು ಹಾಗೂ ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ, ತಾಲೂಕಿನಲ್ಲಿ ಗೂಂಡಾಗಿರಿ, ಭ್ರಷ್ಟಾಚಾರದ ಕಡಿವಾಣಕ್ಕಾಗಿ ಈ ಬಾರಿ ಬಿಜೆಪಿ ಅಭ್ಯರ್ಥಿ ಎಸ್. ಕುಮಾರ್ ಬಂಗಾರಪ್ಪನವರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು. 

ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಮಾಡದೇ ಚುನಾವಣೆ ಮುಂದಿಟ್ಟುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಶೈವ, ಲಿಂಗಾಯತ ಹೆಸರಿನಲ್ಲಿ ಧರ್ಮ ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಅವರ ತಂತ್ರ ಫಲಿಸದು ಎಂದರು.

ಸಭೆಯಲ್ಲಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಎ.ಎಲ್. ಅರವಿಂದ್, ಪ್ರಮುಖರಾದ ದತ್ತಾತ್ರಿ, ಪಾಣಿ ರಾಜಪ್ಪ, ದೇವೇಂದ್ರಪ್ಪ, ಜಿ.ಪಂ. ಸದಸ್ಯ ಸತೀಶ್, ತಾ.ಪಂ. ಸದಸ್ಯರಾದ ಪುರುಷೋತ್ತಮ, ಚಿಕ್ಕಸವಿ ನಾಗರಾಜ್, ಶ್ರೀಪಾದ ಹೆಗಡೆ ನಿಸರಾಣಿ, ಚಿಕ್ಕಾವಲಿ ನಾಗರಾಜ್‍ಗೌಡ, ನಿರಂಜನ್ ಕುಪ್ಪಗಡ್ಡೆ, ಡಿ. ಶಿವಯೋಗಿ, ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News