ಮೂಡಿಗೆರೆ: ರಸ್ತೆ ಕಾಮಗಾರಿಗೆ ಪ್ರಭಾವಿಗಳಿಂದ ಅಡ್ಡಿ; ಗ್ರಾಮಸ್ಥರ ಆರೋಪ
ಮೂಡಿಗೆರೆ, ಎ.20: ಸಾರ್ವಜನಿಕ ರಸ್ತೆ ಕಾಮಗಾರಿಗೆ ಪ್ರಭಾವಿ ವ್ಯಕ್ತಿಗಳು ಅಡ್ಡಿಪಡಿಸುತ್ತಿದ್ದು, ಇದರಿಂದಾಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 7 ಮೀಟರ್ ಅಗಲದ ರಸ್ತೆಯನ್ನು ಕಿರಿದಾಗಿ ಮಾಡಿ, ಕಾಮಗಾರಿ ಮುಗಿಸಲು ಸಂಚು ರೂಪಿಸಲಾಗಿದೆ ಎಂದು ಔಸನ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಬೆಟ್ಟಗೆರೆ ಗ್ರಾಪಂ ವ್ಯಾಪ್ತಿಯ ಔಸನ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ನಬಾರ್ಡ್‍ನಿಂದ 50 ಲಕ್ಷ ರೂ. ಬಿಡುಗಡೆಗೊಂಡಿದೆ. ಕಾಮಗಾರಿ ಇನ್ನಷ್ಟೇ ಪ್ರಾರಂಭಿಸಬೇಕಿದೆ. ಈಗ 10 ಅಡಿಯ ಡಾಂಬರ್ ರಸ್ತೆಯಿದ್ದು, ಇದನ್ನು ದುಪ್ಪಟ್ಟು ಅಗಲದ ರಸ್ತೆಯಾಗಿ ಪರಿವರ್ತಿಸಿ ಮೇಲ್ದರ್ಜೆಗೇರಿಸಬೇಕಾಗಿದೆ. ನಬಾರ್ಡ್‍ನ ಸೂಚನೆಯಂತೆ ರಸ್ತೆಯ ಮಧ್ಯಭಾಗದಿಂದ 3.5 ಮೀಟರ್ ಅಗಲಗೊಳಿಸಬೇಕಾಗಿದೆ. ಆದರೆ ಈ ರಸ್ತೆಗೆ ಹೊಂದಿಕೊಂಡಿರುವ ಕೆಲ ಪ್ರಭಾವಿ ಶ್ರೀಮಂತರು ಮಾರ್ಗ ಅಗಲೀಕರಣಕ್ಕೆ ಜಾಗ ಬಿಡುತ್ತಿಲ್ಲ. ಈಗಿರುವ ಕಿರು ರಸ್ತೆ ಪಕ್ಕದಲ್ಲೇ ತಮ್ಮ ತೋಟದ ಬೇಲಿ ಮತ್ತು ಕಲ್ಲಿನ ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಇದರಿಂದಾಗಿ ರಸ್ತೆ ಅಗಲಗೊಳಿಸಲು ತೊದರೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ರಸ್ತೆ ಕಾಮಗಾರಿಗೆ ಅಡ್ಡಿಪಡಿಸುವ ಪ್ರಭಾವಿ ಶ್ರೀಮಂತರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ 7 ಮೀಟರ್ ಅಗಲದ ರಸ್ತೆ ನಿರ್ಮಾಣಕ್ಕೆ ಅನುವುಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.