ಮೂಡಿಗೆರೆ: ವಿದ್ಯುತ್ ಪೂರೈಕೆ ಸ್ಥಗಿತ; ಜನಜೀವನ ಅಸ್ತವ್ಯಸ್ಥ
ಮೂಡಿಗೆರೆ, ಎ.20: ವಿದ್ಯುತ್ ಪೂರೈಕೆ 24 ಗಂಟೆ ಸ್ಥಗಿತಗೊಂಡಿದ್ದರಿಂದ ಪಟ್ಟಣ ಸೇರಿದಂತೆ ಇಡೀ ತಾಲೂಕಿನಲ್ಲಿ ಗುರುವಾರ ಮತ್ತು ಶುಕ್ರವಾರ ಜನಜೀವನ ಅಸ್ತವ್ಯಸ್ಥಗೊಳ್ಳುವಂತಾಗಿದೆ. ಗುರುವಾರ ಮಧ್ಯಾಹ್ನ 2-00 ಗಂಟೆಯಿಂದ ಸ್ಥಗಿತಗೊಂಡಿರುವ ವಿದ್ಯುತ್ ಶುಕ್ರವಾರ ಮಧ್ಯಾಹ್ನವಾದರೂ ಪೂರೈಕೆಯಾಗಲಿಲ್ಲ. ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ. ಮನೆಗಳಲ್ಲಿ ಅಡಿಗೆ ಮಾಡಲು ವಿದ್ಯುತ್ತನ್ನೇ ಅವಲಂಬಿಸುವವರಿಗೆ ಹಾಗೂ ಹೋಟೆಲ್‍ಗಳಲ್ಲಿ ಊಟ ತಿಂಡಿಗೂ ಕಷ್ಟಕರವಾಗಿದೆ. ವಿದ್ಯುತ್ ಸ್ಥಗಿತದಿಂದ ಮೊಬೈಲ್‍ಗಳು ಸ್ವಿಚ್‍ಆಫ್ ಆಗಿ ಸಂಪರ್ಕ ಸಾಧಿಸಲು ಸಾಧ್ಯವಾಗದಂತಾಗಿದೆ. ಮನೆಗಳಲ್ಲಿ ಟಿವಿಗಳು ಬಂದ್ ಆದ್ದರಿಂದ ಯಾವುದೇ ಮಾಹಿತಿಯೂ ಸಾರ್ವಜನಿಕರಿಗೆ ಸಿಗದಂತಾಗಿದೆ.
ಸಿ.ಇ.ಟಿ.ಪರೀಕ್ಷೆ ಮುಕ್ತಾಯದ ಹಂತ ತಲುಪಿದ್ದು, ನೀಟ್ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿದ್ದಾರೆ. ವಿದ್ಯುತ್ ತೊಂದರೆಯಿಂದ ಕಲಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ತಂತಿ ಹಾಗೂ ಕಂಬ ಬದಲಿಸಲು ಕೇಂದ್ರ ಸರ್ಕಾರದಿಂದ 6 ಕೋಟಿಗೂ ಹೆಚ್ಚು ಹಣ ವಿನಿಯೋಗಿಸಲಾಗಿದ್ದರೂ ವಿದ್ಯುತ್ ಮಾರ್ಗದಲ್ಲಿ ಸುಧಾರಣೆ ಕಂಡಿಲ್ಲ. ಮೆಸ್ಕಾಂ ಅಧಿಕಾರಿಗಳು ಸಿಬ್ಬಂದಿ ಕೊರತೆ ನೆಪ ಹೇಳಿ, ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ವಿದ್ಯುತ್ ಪೂರೈಕೆ ವ್ಯತ್ಯಯಕ್ಕೆ ಕಾರಣವಾಗಿದೆ. ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ದಿನಗಟ್ಟಲೆ ವಿದ್ಯುತ್ ಪೂರೈಕೆಯಿಲ್ಲದೆ ತೊಂದರೆಯಾಗುತ್ತಿದ್ದರೂ ನಾವು ಚುನಾವಣಾ ಆಯೋಗದ ಅಧಿಕಾರಿಗಳೆಂದು ಜನರನ್ನು ನಂಬಿಸಿ ಮೆಸ್ಕಾಂ ಅಧಿಕಾರಿಗಳು ಬೇಕಾಬಿಟ್ಟಿ ನಡೆದುಕೊಳ್ಳುತ್ತಿದ್ದಾರೆ. ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ, ನೀತಿ ಸಂಹಿತೆ ಜಾರಿಯಲ್ಲಿದ್ದರೂ ಲೆಕ್ಕಿಸದೆ ಪ್ರತಿಭಟನೆ ನಡೆಸುವುದಾಗಿ ಪಟ್ಟಣದ ನಾಗರಿಕರು ಎಚ್ಚರಿಸಿದ್ದಾರೆ.