×
Ad

ಚಿಕ್ಕಮಗಳೂರು: ಸಿ.ಟಿ.ರವಿ ನಾಮಪತ್ರ ಸಲ್ಲಿಕೆ

Update: 2018-04-20 18:04 IST

ಚಿಕ್ಕಮಗಳೂರು, ಎ.20: ಇಲ್ಲಿನ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ಅವರು ಶುಕ್ರವಾರ ನಗರದ ತಾಲೂಕು ಕಚೇರಿಯಲ್ಲಿ ತಮ್ಮ ಉಮೇದುವಾರಿಕೆ ನಾಮಪತ್ರ ಸಲ್ಲಿಸಿದ್ದಾರೆ.

ಬೆಳಗ್ಗೆ 11ರ ಸಮಯದಲ್ಲಿ ಪಕ್ಷದ 200ಕ್ಕೂ ಹೆಚ್ಚಿನ ಕಾರ್ಯಕರ್ತರೊಂದಿಗೆ ಬಸವನಹಳ್ಳಿಯ ತಮ್ಮ ಮನೆ ಸಮೀಪದ ಕಾಮದೇನು ಗಣಪತಿ ದೇವಾಲಯಕ್ಕೆ ಆಗಮಿಸಿದ ಅವರು, ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಹನುಂತಪ್ಪ ವೃತ್ತದಲ್ಲಿರುವ ತಾಲೂಕು ಕಚೇರಿಗೆ ತಮ್ಮ ಐವರು ಬೆಂಬಲಿಗರೊಂದಿಗೆ ತೆರಳಿದ ಅವರು ತಮ್ಮ ಉಮೇದುವಾರಿಕೆಯ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ತಮ್ಮ ಬೆಂಬಲಿಗರು ಹಾಗೂ ಪಕ್ಷದ  ನೂರಾರು ಕಾರ್ಯಕರ್ತರೊಂದಿಗೆ ನಗರದ ಎಂಜಿ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ಕಾರ್ಯಕರ್ತರು ಬಿಜೆಪಿ ಹಾಗೂ ಸಿ.ಟಿ.ರವಿ ಪರ ಘೋಷಣೆ ಕೂಗಿದರು.

ತನ್ನದು ಪ್ರೀತಿ- ಅಭಿವೃದ್ಧಿಯ ರಾಜಕಾರಣ: ಸಿ.ಟಿ.ರವಿ
ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಡಿದ ಅವರು, ಕಳೆದ ಮೂರು ವಿಧಾನಸಭೆ ಚುನಾವಣೆಗಳಲ್ಲಿ ಕ್ಷೇತ್ರದ ಜನರು ತನ್ನನ್ನು ಆಯ್ಕೆ ಮಾಡಿರುವುದರ ಹಿಂದೆ ತನ್ನ ಹಾಗೂ ಪಕ್ಷದ ಅಭಿವೃದ್ಧಿ ಹಾಗೂ ಪ್ರೀತಿಯ ರಾಜಕಾರಣ ಕೆಲಸ ಮಾಡಿದೆ. ಕ್ಷೇತ್ರದಲ್ಲಿ ನಾಲ್ಕನೆ ಬಾರಿಯೂ ತನ್ನನ್ನೇ ಜನತೆ ಶಾಸಕನನ್ನಾಗಿ ಚುನಾಯಿಸಲಿದ್ದಾರೆಂದು ಚಿಕ್ಕಮಗಳೂರು ವಿದಾಸಭೆ ಕ್ಷೇತ್ರದ ಶಾಸಕ ಹಾಗೂ ಅಭ್ಯರ್ಥಿ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದಲ್ಲಿ ತನ್ನದು ಅಭಿವೃದ್ಧಿ ಹಾಗೂ ಪ್ರೀತಿಯ ರಾಜಕಾರಣ. ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದೇನೆ. ಮತದಾರರ ನಿರೀಕ್ಷೆಯಂತೆ 900 ಕೋ. ರೂ. ಅನುದಾನ ತಂದು ಹಿಂದಿನ ಶಾಸಕರು ಮಾಡದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆಂದ ಅವರು, ತಾನು ಚಿಕ್ಕಮಗಳೂರು ಕ್ಷೇತ್ರದಲ್ಲಿ 5 ನೇ ಬಾರಿಗೆ ನಾಮಪತ್ರ ಸಲ್ಲಿಸುತ್ತಿದ್ದು, ಮೂರು ಬಾರಿ ಜನತೆ ತನ್ನನ್ನು ಚುನಾಯಿಸಿದ್ದಾರೆ. ನಾಲ್ಕನೆ ಬಾರಿಗೂ ಜನರ ಸೇವೆ ಮಾಡಲು ಸಿದ್ಧಗೊಳ್ಳುತ್ತಿದ್ದೇನೆಂದರು.

ತಾನು ಜಿಲ್ಲೆಯಲ್ಲಿ ಕಳೆದ 30 ವರ್ಷಗಳಿಂದ ಜನರ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿ ಜೀವನದ ಹಂತದಿಂದಲೇ ಹೋರಾಡುತ್ತ ಬಂದಿದ್ದೇನೆ. ಇಲ್ಲಿನ ಜನರ ಪಾಲಿಗೆ ತಾನು ಮನೆ ಮಗನಂತಿದ್ದೇನೆ. ಹಿಂದಿನ ಚುನಾವಣೆಗಳ ಸಂದರ್ಭದಲ್ಲಿ ತನಗೆ ಡಿಪಾಸಿಟ್ ಹಣವನ್ನೂ ಇಲ್ಲಿನ ಜನರೇ ನೀಡಿದ್ದು, ಮನೆ ಮಗನನ್ನು ಯಾರೂ ಕೈ ಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಗೆದ್ದ ಬಳಿಕ ರಾಜಧಾನಿಯಲ್ಲಿ ಮನೆ ಮಾಡಿಕೊಂಡು ರಾಜಕಾರಣ ಮಾಡುವ ವ್ಯಕ್ತಿತ್ವ ತನ್ನದಲ್ಲ ಎಂದ ಅವರು, ತನ್ನದು ಜಾತಿ, ದ್ವೇಷದ ರಾಜಕಾರಣವಲ್ಲ. ಪ್ರೀತಿ ಹಾಗೂ ಅಭಿವೃದ್ಧಿಯ ರಾಜಕಾರಣ ಎಂದರು.

ತಾನು ಶಾಸಕನಾಗಿ 15 ವರ್ಷಗಳ ಕಾಲ ಜನರಿಗಾಗಿ ಕೆಲಸ ಮಾಡಿದ್ದೇನೆ. ಎಂದೂ ಜಾತಿ ಹಾಗೂ ದ್ವೇಷ ರಾಜಕಾರಣ ಮಾಡಿಲ್ಲ. ಕ್ರಿಮಿನಲ್‍ಗಳನ್ನು ಬೆಂಬಲಿಸಿಲ್ಲ. ಕ್ರಿಮಿನಲ್‍ಗಳು ತನ್ನ ಪಕ್ಷದವರಾಗಿದ್ದರೂ ಅವರನ್ನು ದೂರ ಇಟ್ಟಿದ್ದೇವೆ. ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳ ನಡುವೆ ಪ್ರೀತಿ ಸಾಮರಸ್ಯ ನೆಲೆಸುವ ನಿಟ್ಟಿನಲ್ಲಿ 15 ವರ್ಷಗಳಿಂದ ಪ್ರೀತಿ- ಸಾಮರಸ್ಯದ ರಾಜಕಾರಣ ಮಾಡಿ ಎಲ್ಲರ ಮನ ಗೆದ್ದಿದ್ದೇನೆ. ಎಲ್ಲ ವರ್ಗದವರಿಗೂ ಸಮಾಜಿಕ ನ್ಯಾಯ ಧಕ್ಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಿ ಯಶಸ್ವಿಯಾಗಿದ್ದೇನೆಂದ ಅವರು ಈ ಬಾರಿಯ ಚುನಾವಣೆಯಲ್ಲಿ ತಾನು ಬಾರೀ ಅಂತರದಿಂದ ಜಯಗಳಿಸುತ್ತೇನೆಂಬ ವಿಶ್ವಾಸವಿದ್ದು, ಚುನಾವಣೆ ಬಳಿಕ ಜನರು ನೀಡುವ ತೀರ್ಪಿಗೆ ಬದ್ಧನಾಗಿರುತ್ತೇನೆಂದರು.


ರೇಖಾ ಹುಲಿಯಪ್ಪ ಗೌಡ ಪಕ್ಷಕ್ಕೆ ನೀಡಿರುವ ಸೇವೆಗೆ ಪಕ್ಷವು ಅವರಿಗೆ ಉನ್ನತ ಸ್ಥಾನಮಾನ ನೀಡಿದೆ. ಪಕ್ಷದಲ್ಲೂ ಉನ್ನತ ಹುದ್ದೆಗಳನ್ನು  ನೀಡಿ ಸಮಾಜೀಕ ನ್ಯಾಯವನ್ನು ಎತ್ತಿಹಿಡಿದಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದವರಿಗೆ ಅದು ಧಕ್ಕದಿದ್ದಾಗ ಬೇಸರ ಆಗುವುದು ಸಹಜ. ಮುಂದಿನ ದಿನಗಳಲ್ಲಿ ಅವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಸದ್ಯ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ, ಗೊಂದಲ, ಬಂಡಾಯ ಇಲ್ಲ. ಚುನಾವಣೆಯಲ್ಲಿ ಎಲ್ಲ ನಾಯಕರೂ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ.
- ಸಿ.ಟಿ.ರವಿ, ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News