×
Ad

ಮೈಸೂರು: ಕಥುವಾ ಪ್ರಕರಣ ಖಂಡಿಸಿ ಪ್ರತಿಭಟನೆ ವೇಳೆ ಗಲಾಟೆ; 144 ಸೆಕ್ಷನ್ ಜಾರಿ

Update: 2018-04-20 22:18 IST

ಮೈಸೂರು,ಎ.20: ಕಥುವಾ ಪ್ರಕರಣವನ್ನು ಖಂಡಿಸಿ ಸಂಘಟನೆಯೊಂದು ಎನ್.ಆರ್.ಮೊಹಲ್ಲಾ ಬಂದ್‍ಗೆ ಕರೆ ನೀಡಿದ್ದ ವೇಳೆ ಉದಯಗಿರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಸಂಭವಿಸಿದ ಪರಿಣಾಮ 8 ಮಂದಿ ಪೊಲೀಸರು ಗಾಯಗೊಂಡು ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ.

ನಗರದ ಎನ್.ಆರ್.ಮೊಹಲ್ಲಾ ವ್ಯಾಪ್ತಿಯಲ್ಲಿ ಕಥುವಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘಟನೆಯೊಂದು ಬಂದ್‍ಗೆ ಕರೆ ನೀಡಿತ್ತು. ಇದರಿಂದ ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ಯುವಕರ ಗುಂಪೊಂದು ಮುಚ್ಚಿಸುತ್ತಾ ಬಂದಿತ್ತು. ಈ ವೇಳೆ ಸಣ್ಣ ಪುಟ್ಟ ಜಗಳ ಸಂಭವಿಸಿದ್ದು, ಪೊಲೀಸರು ಎರಡೂ ಗುಂಪುಗಳನ್ನು ಸಮಾಧಾನಪಡಿಸಿದ್ದರು. ಸಂಜೆಯಾಗುತ್ತಿದ್ದಂತೆ ಬಂದ್ ಹಿನ್ನಲೆಯಲ್ಲಿ ನೂರಾರು ಯುವಕರ ಗುಂಪು ಬಲವಂತವಾಗಿ ಅಂಗಡಿ ಬಾಗಿಲುಗಳನ್ನು ಮುಚ್ಚಿಸಿತು. ಈ ವೇಳೆ ಅಂಗಡಿ ಮುಚ್ಚುವುದನ್ನು ತಡೆದ ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿ ಕಲ್ಲು ತೂರಾಟ ಕೂಡಾ ನಡೆಯಿತು ಎಂದು ತಿಳಿದು ಬಂದಿದೆ.

ನಂತರ ಉದ್ವಿಗ್ನ ವಾತಾವರಣ ನಿರ್ಮಾಣ ಘಟನೆ ಖಂಡಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಕ್ಯಾತಮಾರನಹಳ್ಳಿಯ ಟೆಂಟ್ ಬಳಿ ಜಮಾವಣೆಗೊಂಡು ಪ್ರತಿಭಟನೆಗೆ ಮುಂದಾದರು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ನಿಷೇದಾಜ್ಞೆಗೆ ಆದೇಶ ನೀಡಿದ್ದಾರೆ.

ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಸ್ಥಳಕ್ಕೆ ಬಂದು ಘಟನೆಗೆ ಎಸ್.ಡಿ.ಪಿ.ಐ ಕಾರಣ ಎಂದು ಹೇಳುತ್ತಿದ್ದಂತೆ ಪ್ರತಿಭಟನಾಕಾರರು, ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಿದರು ಎನ್ನಲಾಗಿದೆ. ಘಟನೆಯಲ್ಲಿ 8 ಮಂದಿ ಪೊಲೀಸರಿಗೆ ಗಾಯವಾಗಿದ್ದು, ಗಂಭೀರವಾಗಿ ಗಾಯಗೊಂಡ ಇನ್ಸ್‍ಪೆಕ್ಟರ್ ಅನಿಲ್‍ಕುಮಾರ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕಲ್ಲು ತೂರಾಟ ನಡೆಸಿದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ನಂತರ ಸಂಸದ ಪ್ರತಾಪ್ ಸಿಂಹ ಅವರನ್ನು ಒತ್ತಾಯ ಪೂರ್ವಕವಾಗಿ ಅಲ್ಲಿಂದ ಕಳುಹಿಸಿದ ಪೊಲೀಸ್ ಆಯುಕ್ತರು ತಕ್ಷಣದಿಂದಲೇ 144 ಸೆಕ್ಷನ್ ಜಾರಿಗೊಳಿಸಿ ಆದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News