ತರೀಕೆರೆ ಜೆಡಿಎಸ್ ಅಭ್ಯರ್ಥಿ ಆಯ್ಕೆ ಗೊಂದಲಕ್ಕೆ ತೆರೆ: ಶಿವಶಂಕರಪ್ಪರನ್ನೇ ಅಂತಿಮಗೊಳಿಸಿದ ವರಿಷ್ಠರು
ಚಿಕ್ಕಮಗಳೂರು, ಎ.20: ತರೀಕೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆಗೆ ಕೊನೆಗೂ ತೆರೆ ಬಿದ್ದಿದೆ. ಟಿ.ಎಚ್.ಶಿವಶಂಕರಪ್ಪರವರನ್ನೇ ಜೆಡಿಎಸ್ ಅಭ್ಯರ್ಥಿ ಎಂದು ಪಕ್ಷದ ವರಿಷ್ಠರು ಘೋಷಿಸಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ತರೀಕೆರೆ ಕ್ಷೇತ್ರಕ್ಕೆ ಆಗಮಿಸಿದ್ದ ಎಚ್.ಡಿ ಕುಮಾರಸ್ವಾಮಿ ಟಿ.ಎಚ್.ಶಿವಶಂಕರಪ್ಪನವರಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ನೀಡುವ ಭರವಸೆ ನೀಡಿದ ಕಾರಣಕ್ಕೆ ಶಿವಶಂಕರಪ್ಪ ಕ್ಷೇತ್ರಾದ್ಯಂತ ಸಂಚರಿಸಿ ಪಕ್ಷವನ್ನು ಸಂಘಟಿಸಿದ್ದರು.
ಹಾಲಿ ಶಾಸಕ ಶ್ರೀನಿವಾಸ್ ಕಾಂಗ್ರೆಸ್‍ನಿಂದ ಟಿಕೆಟ್ ಕೈತಪ್ಪಿದ್ದರಿಂದ ಆಕ್ರೋಶಗೊಂಡು ಕಳೆದ 2 ದಿನಗಳ ಹಿಂದೆ ಜೆಡಿಎಸ್ ವರಿಷ್ಠ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದರಿಂದ ಕ್ಷೇತ್ರದ ಜನತೆ ಜೆಡಿಎಸ್ ಮುಖಂಡರು ಮೊದಲೇ ಭರವಸೆ ನೀಡಿದಂತೆ ಟಿ.ಹೆಚ್ ಶಿವಶಂಕರಪ್ಪನವರಿಗೆ ಟಿಕೇಟ್ ನೀಡುತ್ತಾರೋ ಅಥವಾ ಶ್ರೀನಿವಾಸ್‍ಗೆ ಟಿಕೇಟ್ ನೀಡುತ್ತಾರೋ ಎಂಬ ಗೊಂದಲಕ್ಕಿಡಾಗಿದ್ದರು.
ತರೀಕೆರೆ ಕ್ಷೇತ್ರಾದ್ಯಂತ ಶಿವಶಂಕರಪ್ಪ ಬದಲಾಗಿ ಕಾಂಗ್ರೇಸ್ ತೊರೆದು ಜೆಡಿಎಸ್ ಸೇರಿದ ಶ್ರೀನಿವಾಸ್‍ಗೆ ಟಿಕೆಟ್ ನೀಡುತ್ತಾರೆ ಎಂಬ ವದಂತಿ ಹಬ್ಬಿತ್ತು. ಪಕ್ಷದ ಮುಖಂಡರ ವರ್ತನೆಗೆ ಬೇಸತ್ತು ಜೆಡಿಎಸ್ ಪಕ್ಷದ ಮುಖಂಡರ ವಿರುದ್ದ ವ್ಯಾಪಕ ಖಂಡನೆಯು ವ್ಯಕ್ತವಾಗಿತ್ತು. ಅದರೊಂದಿಗೆ ಶ್ರೀನಿವಾಸ್‍ಗೆ ಟಿಕೇಟ್ ನೀಡಿದರೆ ಜೆಡಿಎಸ್‍ನ ಜಿಲ್ಲಾಧ್ಯಕ್ಷ ಪಕ್ಷ ತೊರೆಯುವ ಹೇಳಿಕೆಗಳನ್ನು ನೀಡಿದ್ದರು.
ಶುಕ್ರವಾರ ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ 3ನೇ ಪಟ್ಟಿಯಲ್ಲಿ ಟಿ.ಹೆಚ್.ಶಿವಶಂಕರಪ್ಪನವರ ಹೆಸರನ್ನು ಘೋಷಿಸುವ ಮೂಲಕ ಊಹಾಪೋಹಾಗಳಿಗೆ ತೆರೆ ಎಳೆದಿದ್ದಾರೆ.
ಬಾರಿ ಕುತೂಹಲ ಮೂಡಿಸಿದ್ದ ಜಿಲ್ಲೆಯ ಮೂಡಿಗೆರೆ ಮತ್ತು ತರೀಕೆರೆ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮೂಡಿಗೆರೆಯಿಂದ ಮಾಜಿ ಶಾಸಕ ಕುಮಾರಸ್ವಾಮಿ ಮತ್ತು ತರೀಕೆರೆ ಮಾಜಿ ಶಾಸಕ ಡಿ.ಎಸ್.ಸುರೇಶ್‍ರವರ ಹೆಸರನ್ನು ಕೊನೆಗೂ ಅಂತಿಮಗೊಳಿಸಿದೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕುಮಾರಸ್ವಾಮಿಯವರ ಹೆಸರು ಮುಂಚೂಣಿಯಲ್ಲಿದ್ದರೂ ಅವರ ಕೌಟುಂಬಿಕ ಕಾರಣಗಳನ್ನೊಡ್ಡಿ ಅವರಿಗೆ ಟಿಕೆಟ್ ನೀಡದಂತೆ ಕೆಲವು ಕಾಣದ ಕೈಗಳು ಲಾಭಿ ನಡೆಸಿ ಅವರ ಬದಲಾಗಿ ದೀಪಕ್‍ದೊಡ್ಡಯ್ಯ ಅಥವಾ ಜಿ.ಪಂ. ಸದಸ್ಯ ಶೃಂಗೇರಿ ಶಿವಣ್ಣರಿಗೆ ಟಿಕೆಟ್ ನೀಡುವಂತೆ ವರಿಷ್ಠರ ಮೇಲೆ ಒತ್ತಡ ಹೆಚ್ಚಾಗಿತ್ತು. ಆದ್ದರಿಂದಲೇ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲು ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸಿತ್ತು.
ಸಮೀಕ್ಷೆಗಳು ಮತ್ತು ಸಾರ್ವಜನಿಕ ಅಭಿಪ್ರಾಯಗಳನ್ನು ಕ್ರೋಢೀಕರಿಸಿರುವ ಬಿಜೆಪಿ ವರಿಷ್ಠ ಮಂಡಳಿ ಮೂಡಿಗೆರೆ ಕ್ಷೇತ್ರದಿಂದ ಕುಮಾರಸ್ವಾಮಿ ಹೆಸರು ಘೋಷಿಸಿದೆ.
ತರೀಕೆರೆ ಕ್ಷೇತ್ರದಲ್ಲಿ ಮಾಜಿ ಶಾಸಕ ಡಿ.ಎಸ್ ಸುರೇಶ್ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಅದೇ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಸೋಲನ್ನುಭವಿಸಿದ ಸಮಾಜ ಸೇವಕ ಗೋಪಿಕೃಷ್ಣರವನ್ನು ಬಿಜೆಪಿ ಮುಖಂಡರು ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡುವ ಭರವಸೆ ನೀಡಿ ಬಿಜೆಪಿಗೆ ಕರೆ ತಂದಿದ್ದರು. ಈ ಎರಡು ಅಭ್ಯರ್ಥಿಗಳು ತರೀಕೆರೆ ಕ್ಷೇತ್ರದಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಿದ್ದು, ಈ ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂದು ಗೊಂದಲಕ್ಕೆ ಬಿದ್ದಿದ್ದ ರಾಜ್ಯ ಮುಖಂಡರು ಕೊನೆಗೂ ಡಿ.ಎಸ್.ಸುರೇಶ್‍ರವರಿಗೆ ಮಣೆ ಹಾಕಿದ್ದಾರೆ.