ಕೋಮುವಾದಿ ಬಿಜೆಪಿ, ಅವಕಾಶವಾದಿ ಜೆಡಿಎಸ್ ಅನ್ನು ತಿರಸ್ಕರಿಸಿ: ಸಿದ್ದರಾಮಯ್ಯ
ನಾಗಮಂಗಲ, ಎ.20: ಕೋಮುವಾದಿ ಬಿಜೆಪಿ ದಕ್ಷಿಣ ಕರ್ನಾಟಕದಲ್ಲಿ ಗೆಲ್ಲುವುದಿಲ್ಲ. ಇನ್ನು ಅವಕಾಶವಾದಿ ಜೆಡಿಎಸ್‍ಗೆ ಉತ್ತರ ಭಾಗದಲ್ಲಿ ನೆಲೆಯಿಲ್ಲ. ಹಾಗಾಗಿ ಒಳ ಒಪ್ಪಂದ ಮಾಡಿಕೊಂಡಿರುವ ಇವೆರಡೂ ಪಕ್ಷಗಳನ್ನು ಜನರು ನಂಬದೆ ತಿರಸ್ಕರಿಸಿ, ಸಮಗ್ರ ಕರ್ನಾಟಕ ಗೆಲ್ಲುವ ಶಕ್ತಿ ಇರುವ ಕಾಂಗ್ರೆಸ್ ಬೆಂಬಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ಶುಕ್ರವಾರ ನಾಮಪತ್ರ ಸಲ್ಲಿಕೆ ಸಂಬಂಧ ಏರ್ಪಡಿಸಿದ್ದ ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾಮಾಜಿಕ ನ್ಯಾಯದಡಿ ಕೊಟ್ಟ ಭರವಸೆಯನ್ನು ಈಡೇರಿಸಿದ ಸರಕಾರ ನಮ್ಮದಾಗಿದೆ ಎಂದರು.
ಜೆಡಿಎಸ್‍ಗೆ ಉತ್ತರ ಕರ್ನಾಟಕದಲ್ಲಿ ನೆಲೆಯೇ ಇಲ್ಲ, ಬಿಜೆಪಿಗೆ ದಕ್ಷಿಣ ಕರ್ನಾಟಕದಲ್ಲಿ ಗೆಲ್ಲುವ ಶಕ್ತಿಯೇ ಇಲ್ಲ ಎಂದು ಟೀಕಿಸಿದ ಅವರು, ಕರ್ನಾಟಕದಲ್ಲಿ ಕೋಮುವಾದಿ ಸರಕಾರ ಅಧಿಕಾರಕ್ಕೆ ಬರದಂತೆ ತಡೆಯಲು ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಿದ್ದರಾಮಯ್ಯರ ಸರಕಾರ ಭ್ರಷ್ಟಾಚಾರದ ಸರಕಾರವೆನ್ನಲು ಅಮಿತ್ ಶಾಗೆ ಯಾವ ನೈತಿಕತೆ ಇದೆ? ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡು ಸರಕಾರ ರಚಿಸಿದಾಗ ನನ್ನ ಹೆಣದ ಮೇಲೆ ಸರಕಾರ ರಚಿಸಿ ಎಂದು ಗುಡಿಗಿದ ದೇವೇಗೌಡರು ನಂತರ ಕುಮಾರಸ್ವಾಮಿ ಉತ್ತಮ ಸಿಎಂ ಎಂದು ಹೊಗಳಿದರು ಎಂದು ಅವರು ವಾಗ್ದಾಳಿ ನಡೆಸಿದರು.
ದೇವೇಗೌಡರಿಗೆ ಯಾವಾಗಲೂ ಮಕ್ಕಳ ಮೇಲೆ ಪ್ರೀತಿ. ಪಕ್ಷದಲ್ಲಿ ನಾಯಕರಾಗಿ ಬೆಳೆಯುವ ಯಾರನ್ನೂ ಸಹಿಸಲ್ಲ. ಕೋಲೆ ಬಸವನಂತೆ ತಲೆ ಅಲ್ಲಾಡಿಸಿಕೊಂಡಿರುವವರಿಗೆ ಮಾತ್ರ ಜೆಡಿಎಸ್‍ನಲ್ಲಿ ಜಾಗ. ಮಗ ಕುಮಾರಸ್ವಾಮಿಯನ್ನು ಸಿಎಂ ಮಾಡಲು ನನ್ನನ್ನೂ ಪಕ್ಷದಿಂದ ಹೊರಹಾಕಿದರು. ಚಲುವರಾಯಸ್ವಾಮಿ ಜನಪರ ಕಾಳಜಿಯುಳ್ಳ ನಾಯಕನಾಗಿದ್ದು, ನನ್ನನ್ನು ನಂಬಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಾನೆ ಅಭ್ಯರ್ಥಿ ಎಂದುಕೊಂಡು ಗೆಲ್ಲಿಸುವಂತೆ ಸಿದ್ದರಾಮಯ್ಯ ಮನವಿ ಮಾಡಿಕೊಂಡರು.
ನಾವು ಒಕ್ಕಲಿಗರೇ: ಡಿಕೆ.ಶಿವಕುಮಾರ್
ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಕುಮಾರಸ್ವಾಮಿಯೇ ಏಕೆ ಮುಖ್ಯಮಂತ್ರಿಯಾಗಬೇಕು? ನಾವು ಒಕ್ಕಲಿಗರೇ. ನಾವು ಕೂಡ ರೈತರೇ ಎಂದು ದೇವೇಗೌಡರ ವಿರುದ್ದ ಗುಡುಗಿದರು.
ಪಕ್ಷದ ವಿರುದ್ಧ ಬಿಜೆಪಿಗೆ ಬೆಂಬಲ ನೀಡಿದ ಪುತ್ರ ಕುಮಾರಸ್ವಾಮಿ ಶಾಸಕತ್ವ ರದ್ದತಿಗೆ ದೂರು ನೀಡದ ದೇವೇಗೌಡರು, ಪಕ್ಷಕ್ಕಾಗಿ ದುಡಿದ ಚಲುವರಾಯಸ್ವಾಮಿ, ಝಮೀರ್, ಬಾಲಕೃಷ್ಣ ಮತ್ತವರ ವಿರುದ್ದ ಇಂದು ಏಕೆ ದೂರು ಕೊಟ್ಟರು ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿರುವ ನಾಗಮಂಗಲ ಅಭ್ಯರ್ಥಿ ಸುರೇಶ್‍ಗೌಡ ಒಬ್ಬ ಸ್ವಿಚ್‍ಆಫ್ ಗೌಡರಾಗಿದ್ದು, ಕ್ಷೇತ್ರದ ಜನರಿಗೆ ಸ್ಪಂದಿಸುವವರಲ್ಲ. ಇನ್ನೂ ಮಾಜಿ ಶಾಸಕ ಎಲ್.ಆರ್ ಶಿವರಾಮೇಗೌಡ ಮಹಾ ಸುಳ್ಳುಗಾರ. ಇವರಿಬ್ಬರನ್ನೂ ನಂಬಬೇಡಿ. ಚಲುವರಾಯಸ್ವಾಮಿಯನ್ನು ಬೆಂಬಲಿಸಿ ಕಾಂಗ್ರೆಸ್ ಸರಕಾರದ ಅಭಿವೃದ್ದಿಗೆ ಮತಹಾಕಿ ಎಂದು ಅವರು ಮನವಿ ಮಾಡಿದರು.