ಗೌರಿ ಲಂಕೇಶ್ ಹತ್ಯೆ ಪ್ರಕರಣ: ಗುಜರಾತ್ ನಲ್ಲಿ ಮಂಪರು ಪರೀಕ್ಷೆಯಿಂದ ತಪ್ಪಿಸಿಕೊಂಡ ಆರೋಪಿ?
ಬೆಂಗಳೂರು, ಎ.20: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಶಂಕಿತ ಆರೋಪಿ ಕೆ.ಟಿ.ನವೀನ್ ಕುಮಾರ್, ಗುಜರಾತ್ ಎಫ್‌ಎಸ್‌ಎಲ್ ತಜ್ಞರಿಗೆ ಹೇಳಿಕೆಯೊಂದು ನೀಡಿ, ಮಂಪರು ಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ.
'ಪೊಲೀಸರು ನನ್ನನ್ನು ಬಲವಂತವಾಗಿ ತಪಾಸಣೆಗೆ ಕರೆತಂದಿದ್ದಾರೆ’ ಎಂದು ನವೀನ್ ಹೇಳಿದ ಕಾರಣ, ಎಫ್‌ಎಸ್‌ಎಲ್ ತಜ್ಞರು, ‘ಆತನಿಗೆ ಇಷ್ಟವಿಲ್ಲದೆ ಪರೀಕ್ಷೆಗೆ ಒಳಪಡಿಸುವುದು ಸರಿಯಲ್ಲ ಎಂದಿದ್ದಾರೆ.
ಪ್ರಕರಣದ ವಿವರ: ಸೀಟ್ ಅಧಿಕಾರಿಗಳು ಮಂಪರು ಪರೀಕ್ಷೆಗೆ ನ್ಯಾಯಾಲಯದ ಅನುಮತಿ ಕೋರಿದಾಗ, ಪರೀಕ್ಷೆ ಎದುರಿಸಲು ತಾನು ಸಿದ್ಧವಿರುವುದಾಗಿ ನವೀನ್ ಹೇಳಿಕೆ ನೀಡಿದ್ದ. ಅದರಂತೆ ನ್ಯಾಯಾಧೀಶರು ಮಾ.12ರಂದು ಅನುಮತಿ ಮಂಜೂರು ಮಾಡಿದ್ದರು. ಬಳಿಕ, ಎ.15 ರಿಂದ ಎ.30ರ ನಡುವೆ ಯಾವಾಗಾದರೂ ಪರೀಕ್ಷೆಗೆ ಕರೆ ತನ್ನಿ’ ಎಂದು ಗುಜರಾತ್ ಎಫ್‌ಎಸ್‌ಎಲ್ ತಜ್ಞರು ಸೂಚಿಸಿದ್ದರಿಂದ, ಡಿಸಿಪಿ ಜೀನೇಂದ್ರ ಖಣಗಾವಿ ನೇತೃತ್ವದ ತಂಡ ಎ.14 ರಂದೇ ಆತನನ್ನು ಗುಜರಾತ್ ಗೆ ಕರೆದೊಯ್ದಿತ್ತು.
ಆದರೆ, ಆರೋಪಿ 'ಪೊಲೀಸರು ನನ್ನನ್ನು ಬಲವಂತವಾಗಿ ತಪಾಸಣೆಗೆ ಕರೆತಂದಿದ್ದಾರೆ' ಎಂದು ಹೇಳಿದ್ದು, ಅದಕ್ಕೆ ಎಫ್‌ಎಸ್‌ಎಲ್ ತಜ್ಞರು, 'ಆತನನ್ನು ಈ ಪರೀಕ್ಷೆಗೆ ಒಳಪಡಿಸುವುದು ಸರಿಯಲ್ಲ. ಒಂದು ವೇಳೆ ಪರೀಕ್ಷೆ ಮಾಡಿದರೂ, ನಿಖರ ಫಲಿತಾಂಶ ಸಿಗುವುದಿಲ್ಲ’ ಎಂದು ಹೇಳಿದ್ದಾರೆ. ಹೀಗಾಗಿ, ಪೊಲೀಸರು ಆರೋಪಿಯನ್ನು ನಗರಕ್ಕೆ ವಾಪಸ್ ಕರೆತಂದಿದ್ದಾರೆ ಎಂದು ತಿಳಿದು ಬಂದಿದೆ.