ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರ: ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ
ಬೆಂಗಳೂರು, ಎ.20: ಹಾಸನ ಜಿಲ್ಲಾಧಿಕಾರಿ ಹುದ್ದೆಯಿಂದ ತಮ್ಮನ್ನು ವರ್ಗಾವಣೆ ಮಾಡಿದ್ದ ಸರಕಾರದ ಆದೇಶ ಪ್ರಶ್ನಿಸಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸರಕಾರದ ವರ್ಗಾವಣೆ ಆದೇಶ ಮತ್ತು ಆ ಆದೇಶ ಎತ್ತಿಹಿಡಿದ ಕೇಂದ್ರಆಡಳಿತಾತ್ಮ ನ್ಯಾಯಮಂಡಳಿ (ಸಿಎಟಿ) ತೀರ್ಪು ರದ್ದುಪಡಿಸುವಂತೆ ಕೋರಿ ರೋಹಿಣಿ ಸಿಂಧೂರಿ ದಾಸರಿ ಶುಕ್ರವಾರ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಅರ್ಜಿ ಇತ್ಯರ್ಥವಾಗುವರೆಗೂ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಮಧ್ಯಂತರ ಮನವಿ ಮಾಡಿದ್ದಾರೆ. ಈ ಅರ್ಜಿ ಸೋಮವಾರ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬರುವ ನಿರೀಕ್ಷೆ ಇದೆ.
ಈ ಮಧ್ಯೆ ಹಾಲಿ ಹಾಸನ ಜಿಲ್ಲಾಧಿಕಾರಿಯಾಗಿರುವ ರಂದೀಪ್ ಸಹ, ಹೈಕೋರ್ಟ್‌ಗೆ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ವಾದ ಆಲಿಸದೇ ರೋಹಿಣಿ ಅರ್ಜಿ ಕುರಿತು ಯಾವುದೇ ಆದೇಶ ಹೊರಡಿಸಬಾರದು ಎಂದು ರಂದೀಪ್ ತಮ್ಮ ಕೇವಿಯಟ್ ಅರ್ಜಿಯಲ್ಲಿ ಕೋರಿದ್ದಾರೆ. ಇದರಿಂದ ತಮ್ಮ ವರ್ಗಾವಣೆ ಮಾಡಿದ ಸರಕಾರದ ವಿರುದ್ಧ ರೋಹಿಣಿ ಅವರು ಹೈಕೋರ್ಟ್ ಮತ್ತೊಂದು ಸುತ್ತಿನ ಕಾನೂನು ಸಮರ ನಡೆಸುತ್ತಿದ್ದು, ಪ್ರಕರಣ ಕುತೂಹಲ ಕೆರಳಿಸಿದೆ.
ಹಿನ್ನೆಲೆ ಏನು: ರೋಹಿಣಿ ಸಿಂಧೂರಿ ಅವರನ್ನು ಹಾಸನ ಜಿಲ್ಲಾಧಿಕಾರಿಯಿಂದ ಹುದ್ದೆಯಿಂದ, ಕೈಗಾರಿಕಾ ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯಕ್ಕೆ ವ್ಯವಸ್ಥಾಪಕ ನಿರ್ದೇಶರ ಹುದ್ದೆಗೆ ವರ್ಗಾವಣೆ ಮಾಡಿ ಮಾ.3ರಂದು ರಾಜ್ಯ ಸರಕಾರ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಿಎಟಿಗೆ ಅರ್ಜಿ ಸಲ್ಲಿಸಿದ್ದ ರೋಹಿಣಿ, ಭಾರತೀಯ ಆಡಳಿತಾತ್ಮಕ ಸೇವೆಗಳ (ಐಎಎಸ್) ತಿದ್ದುಪಡಿ ನಿಯಮ-2014ರನ್ವಯ ಅಧಿಕಾರಿಯನ್ನು ಒಂದು ಹುದ್ದೆಗೆ ವರ್ಗಾವಣೆ ಮಾಡಿದರೆ, ಅಲ್ಲಿಂದ ಕನಿಷ್ಟ ಎರಡು ವರ್ಷಗಳ ಕಾಲ ವರ್ಗಾವಣೆ ಮಾಡುವಂತಿಲ್ಲ. ಆದರೆ, ಹಾಸನ ಜಿಲ್ಲಾಧಿಕಾರಿ ಹುದ್ದೆಯಿಂದ ಅವಧಿಗೂ ಮುನ್ನ ಸರಕಾರ ವರ್ಗಾವಣೆ ಮಾಡಿದೆ ಎಂದು ದೂರಿದ್ದರು.
ಹಾಗೆಯೇ, ಹಾಸನದ ಗಣಿ ಮಾಫಿಯ ವಿರುದ್ಧ ಕ್ರಮ ಕೈಗೊಂಡಿದ್ದ ಕಾರಣಕ್ಕೆ ತಮ್ಮನ್ನು ರಾಜಕೀಯ ಒತ್ತಡದಿಂದ ಅವಧಿಗೂ ಮುನ್ನ ವರ್ಗಾಯಿಸಲಾಗಿದೆ ಎಂದು ಆರೋಪಿಸಿದ್ದ ರೋಹಿಣಿ ಸಿಂಧೂರಿ, ತಮ್ಮ ವರ್ಗಾವಣೆ ಆದೇಶ ರದ್ದಪಡಿಸಬೇಕು ಎಂದು ಕೋರಿದ್ದರು. ಆದರೆ, ಅವರ ಅರ್ಜಿಯನ್ನು ಎ.17ರಂದು ವಜಾಗೊಳಿಸಿದ್ದ ಸಿಎಟಿ, ರೋಹಿಣಿ ಅವರ ವರ್ಗಾವಣೆಯಲ್ಲಿ ಸರಕಾರ ಸಂವಿಧಾನದ ವ್ಯಾಪ್ತಿ ಹಾಗೂ ವರ್ಗಾವಣೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿಲ್ಲ. ವರ್ಗಾವಣೆ ಆದೇಶ ನ್ಯಾಯ ಸಮ್ಮತವಾಗಿದೆ. ಸರಕಾರದ ಆಡಳಿತದಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸಲಾಗದು ಎಂದು ಅಭಿಪ್ರಾಯಪಟ್ಟಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಕರಾರು ಅರ್ಜಿ ಸಲ್ಲಿಸಲಾಗಿದೆ.