ಕೊಳ್ಳೇಗಾಲ: ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ನಾಮಪತ್ರ ಸಲ್ಲಿಕೆ
ಕೊಳ್ಳೇಗಾಲ,ಎ.21: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಶನಿವಾರ ನಾಮಪತ್ರ ಸಲ್ಲಿಸಿದರು.
ಪಟ್ಟಣದ ಉಪವಿಭಾಗ ಕಚೇರಿಯ ಸಭಾಂಗಣದಲ್ಲಿ ಚುನಾವಣಾಧಿಕಾರಿ ಫೌಜಿಯಾ ತರುನ್ನುಮ್ಮ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.
ನಾಮಪತ್ರ ವೇಳೆ ಸಂಸದ ಆರ್. ಧ್ರುವನಾರಾಯಣ್, ಹಾಲಿ ಶಾಸಕ ಎಸ್.ಜಯಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಜಿ.ಪಂ ಉಪಾಧ್ಯಕ್ಷ ಯೋಗೇಶ್ ಅವರು ಸಾಥ್ ನೀಡಿದರು.
ಇದಕ್ಕೂ ಮುನ್ನ ಪಟ್ಟಣದ ಬಸ್‍ನಿಲ್ದಾಣದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಪ್ರಮುಖ ರಸ್ತೆಯಾದ ಡಾ.ವಿಷ್ಣು ರಸ್ತೆ, ಡಾ.ರಾಜ್‍ಕುಮಾರ್ ರಸ್ತೆ, ಮಸೀದಿ ವೃತ್ತ, ಡಾ.ಬಿ.ಆರ್ ಅಂಬೇಡ್ಕರ್ ರಸ್ತೆ, ಎ.ಡಿ.ಬಿ ವೃತ್ತದ ಮೂಲಕ ತಾಲೂಕು ಕಚೇರಿಗೆ ತೆರಳಿದರು.
ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಾಜಿ ಶಾಸಕ ಎ.ಆರ್ ಕೃಷ್ಣಮೂರ್ತಿ ಮಾತನಾಡಿ, ಕಳೆದ 5 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಸಾಕಷ್ಟು ಜನಪರ ಕೆಲಸಗಳನ್ನು ರಾಜ್ಯದ ಜನತೆಗೆ ಕೊಟ್ಟಿದೆ. ರಾಜ್ಯದ ಜನರು ಕಾಂಗ್ರೆಸ್ ಪಕ್ಷದ ಮೇಲೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಜಿಲ್ಲೆಯಲ್ಲಿ ಲೋಕಸಭಾ ಸದಸ್ಯರು, ಶಾಸಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರುಗಳು ಇರುವುದರಿಂದ ಕ್ಷೇತ್ರದಲ್ಲಿ ಹೆಚ್ಚಿನ ಮತಗಳಿಂದ ಜಯಗಳಿಸುತ್ತೇನೆ ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಇದ್ದರು.