ಬಿಎಸ್‌ವೈ ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ: ಬಿಜೆಪಿ ನಾಯಕ ರೇವುನಾಯಕ ಬೆಳಮಗಿ

Update: 2018-04-21 12:53 GMT

ಕಲಬುರಗಿ, ಎ.21: ಗ್ರಾಮೀಣ ಕ್ಷೇತ್ರಕ್ಕೆ ಟಿಕೆಟ್ ಸಿಗದೆ ವಂಚಿತರಾದ ಮಾಜಿ ಸಚಿವ ರೇವುನಾಯಕ ಬೆಳಮಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.

ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಕಲಬುರಗಿಯ ಸಂತೋಷ ಕಾಲನಿಯ ತಮ್ಮ ನಿವಾಸದ ಮುಂದೆ ಬೆಂಬಲಿಗರ ಸಭೆ ನಡೆಸಿದ ರೇವುನಾಯಕ, ಬೆಂಬಲಿಗರ ಆಸೆಯಂತೆ ಬಿಜೆಪಿ ಪಕ್ಷ ತೊರೆದು, ಯಾವುದಾದರೂ ಪಕ್ಷ ಅಥವಾ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಏಕವಚನದಲ್ಲಿ ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸಿದ ಬೆಳಮಗಿ, ಬಂಜಾರ ಸಮುದಾಯದ ತಾಕತ್ತು ಎಷ್ಟು ಅನ್ನೋದನ್ನು ತೋರಿಸುತ್ತೇನೆ ಎಂದು ತೊಡೆ ತಟ್ಟಿದರು. ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲಿಲ್ಲ ಎಂಬ ಕಾರಣಕ್ಕೆ ರಾಜ್ಯಾದ್ಯಂತ ಸಂಕಲ್ಪಯಾತ್ರೆ ಮಾಡಿದ್ದರು. ಇದೀಗ ಯಡಿಯೂರಪ್ಪ ತಮ್ಮ ಬೆನ್ನಿಗೆ ಚೂರಿ ಹಾಕಿದ್ದು, ತಾನು ಸಹ ರಾಜ್ಯಾದ್ಯಂತ ಸಂಕಲ್ಪಯಾತ್ರೆ ನಡೆಸಿ ಯಡಿಯೂರಪ್ಪ ವಿರುದ್ಧ ಪ್ರಚಾರ ಮಾಡುವುದಾಗಿ ತಿಳಿಸಿದರು.

ಜೆಡಿಎಸ್ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಹಿತಚಿಂತಕರು ಒತ್ತಡ ಹೇರುತ್ತಿದ್ದಾರೆ. ಸದ್ಯ ವೀರಶೈವ ಮತ್ತು ಲಿಂಗಾಯತ ಮುಖಂಡರು ಸಭೆ ನಡೆಸುತ್ತಿದ್ದು, ಸಭೆ ನಂತರ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ರೇವುನಾಯಕ ಹೇಳಿದರು.

ಜೆಡಿಎಸ್‌ನತ್ತ ಹೆಜ್ಜೆ: ಬಿಜೆಪಿ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಮೂರನೆ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದು ಖಾತ್ರಿಯಾಗುತ್ತಿದ್ದಂತೆಯೇ ರೇವುನಾಯಕ ಬೆಳಮಗಿ ಅವರು ಜೆಡಿಎಸ್ ಕಡೆಗೆ ಹೆಜ್ಜೆ ಹಾಕಿದ್ದು, ಸದ್ಯದಲ್ಲಿಯೇ ಜೆಡಿಎಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಮದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News