ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಮತ ಹಾಕಲು ಕುಮಾರಸ್ವಾಮಿಯೇ ಹೇಳಿದ್ದರು: ಝಮೀರ್ ಅಹಮದ್ ಖಾನ್

Update: 2018-04-21 15:21 GMT

ಮಂಡ್ಯ, ಎ.21: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಝಮೀರ್ ಅಹಮ್ಮದ್ ಅವರು ಇದೀಗ ಕಾಂಗ್ರೆಸ್ ಪಾಲಿಗೆ ಸ್ಟಾರ್ ಪ್ರಚಾರಕರಾಗಿದ್ದಾರೆ. ವಾರದ ಹಿಂದೆ ಶ್ರೀರಂಗಪಟ್ಟಣದಲ್ಲಿ ಪ್ರಚಾರ ಕೈಗೊಂಡು ಕಾಂಗ್ರೆಸ್ ವಿರುದ್ಧದ ಬಂಡಾಯ ಶಮನ ಮಾಡಿದ್ದ ಝಮೀರ್ ಅಹಮ್ಮದ್, ಮಳವಳ್ಳಿಯಲ್ಲಿ  ಶನಿವಾರ ಕಾಂಗ್ರೆಸ್ ಪರ ಪ್ರಚಾರ ನಡೆಸಿದರು.

ಮಳವಳ್ಳಿಯ ಬಜಾರ್ ಸ್ಟ್ರೀಟ್‍ನ ಮುಸ್ಲಿಂ ಬ್ಲಾಕ್‍ನ ಮಸೀದಿ ಪಕ್ಕದಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಪರವಾಗಿ ಚುನಾವಣಾ ಪ್ರಚಾರ ನಡೆಸಿದರು. ನಂತರ ಮಾತನಾಡಿದ ಅವರು, ಕಾಂಗ್ರೆಸ್ ಪರವಾಗಿ ಮುಸ್ಲಿಮರ ಮನವೊಲಿಸುತ್ತಿದ್ದಾರೆಂದು ಜೆಡಿಎಸ್ ಕಾರ್ಯಕರ್ತರು ಹೇಳಿದರೆ, ಮುಸ್ಲಿಮರನ್ನು ಹಣ ಕೊಟ್ಟು ಖರೀದಿಸಬಹುದೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾದರೆ ನೀವು ಮಾರಾಟಕ್ಕಿಳಿದಿದ್ದೀರಾ? ಯಾವುದೇ ಕಾರಣಕ್ಕೂ ಜೆಡಿಎಸ್‍ನ ಹಣದ ವ್ಯಾಮೋಹಕ್ಕೆ ಬಲಿಯಾಗಬೇಡಿ. ಜೆಡಿಎಸ್ ನಾಯಕರಿಗೆ ತಕ್ಕ ಪಾಠ ಕಲಿಸಿ, ಕಾಂಗ್ರೆಸ್ ಬೆಂಬಲಿಸಿ ಎಂದು ಕರೆ ನೀಡಿದರು

ರಾಜಕೀಯ ನಿವೃತ್ತಿ ಘೋಷಿಸುವೆ: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಮತ ಹಾಕುವಂತೆ ಕುಮಾರಸ್ವಾಮಿಯೇ ಹೇಳಿದ್ದರು. ಅವರು ಹೇಳಿದಂತೆ ನಾವು ಮಾಡಿದೆವು. ಈ ಬಗ್ಗೆ ಖುರಾನ್ ಮೇಲೆ ಬೇಕಿದ್ದರೂ ನಾನು ಪ್ರಮಾಣ ಮಾಡಿ ಹೇಳುತ್ತೇನೆ. ಅವರು ಬಹಿರಂಗ ಚರ್ಚೆಗೆ ಬರಲಿ. ಅವರು ಹೇಳಿಲ್ಲವೆಂದರೆ ನಾನು ರಾಜಕೀಯ ನಿವೃತ್ತಿ ಘೋಷಿಸುವೆ ಎಂದು ಅವರು ಸವಾಲು ಹಾಕಿದರು.

ದೇವೇಗೌಡರು ಜಾತ್ಯತೀತ ಮನೋಭಾವ ಹೊಂದಿದ್ದಾರೆ. ಆದರೆ, ಕುಮಾರಸ್ವಾಮಿ ಅವರಿಗೆ ಆ ಮನೋಭಾವವಿಲ್ಲ. ಅವರಿಗೆ ಜೆಡಿಎಸ್‍ ಎಂದರೆ ಜನತಾದಳ ಸಂಘ ಪರಿವಾರ ಎಂಬುದಾಗಿದೆ. ಇನ್ನು ಬಿಜೆಪಿ ಕೋಮುವಾದದ ಮೂಲಕ ಗಲಭೆಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಆರೋಪಿಸಿದರು.

ಜೆಡಿಎಸ್ ಅಧಿಕಾರಕ್ಕೆ ಬಂದ 24 ತಾಸಿನಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಮುಖ್ಯಮಂತ್ರಿಯಾಗಿದ್ದಾಗ ಏಕೆ ಮಾಡಲಿಲ್ಲ ? ನಾನು ನಿತ್ಯ 16 ತಾಸು ಅವರೊಂದಿಗೆ ಇರುತ್ತಿದ್ದೆ. ಅವರ ಎಲ್ಲ ವಿದ್ಯೆಗಳು ನನಗೆ ಗೊತ್ತು. ಅವರ ಬಣ್ಣದ ಮಾತುಗಳಿಗೆ ಜನರು ಮರುಳಾಗಬಾರದು ಎಂದು ಸಲಹೆ ನೀಡಿದರು.

ನಂತರ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಕ್ಷೇತ್ರ ಹಿಂದೆಂದೂ ಕಾಣದ ಅಭಿವೃದ್ಧಿಯನ್ನು ಮಾಡಿದ ತೃಪ್ತಿ ತನಗಿದೆ. ಪೂರಿಗಾಲಿ ಹನಿ ನೀರಾವರಿ ಯೋಜನೆ, ಆಧುನಿಕ ಮೀನು ಮಾರುಕಟ್ಟೆ, ಕುಡಿಯುವ ನೀರಿನ ಸೌಲಭ್ಯ, ಕೆರೆ ತುಂಬಿಸುವ ಯೋಜನೆ, ಬಸ್ ಚಾಲಕರ ತರಬೇತಿ ಕೇಂದ್ರ, ಅಂಬೇಡ್ಕರ್ ಭವನ, ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ ಮಾತನಾಡಿ, ರಾಹುಲ್‍ಗಾಂಧಿ ಅವರು ತಮ್ಮ ತಂದೆಯನ್ನು ಕೊಂದವರನ್ನು ಕ್ಷಮಿಸಿದ ಹೃದಯವಂತರು. ಹಾಗೆಯೇ ನಾವು ಕೂಡ ಮಳವಳ್ಳಿ ಕ್ಷೇತ್ರದಲ್ಲಿ ಯಾವುದೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಕೂಡ ಅವುಗಳನ್ನು ಮರೆತು ಪಿ.ಎಂ.ನರೇಂದ್ರಸ್ವಾಮಿ ಅವರ ಗೆಲುವಿಗಾಗಿ ದುಡಿಯೋಣ ಎಂದು ಮನವಿ ಮಾಡಿದರು.

ಜಿಪಂ ಪ್ರತಿಪಕ್ಷದ ನಾಯಕ ಹನುಮಂತು, ಸದಸ್ಯೆ ಸುಜಾತಪುಟ್ಟು, ಮಾಜಿ ಸದಸ್ಯ ಎಂ.ಎನ್.ಜಯರಾಜು, ತಾಪಂ.ಅಧ್ಯಕ್ಷ ಆರ್.ಎನ್.ವಿಶ್ವಾಸ್, ಪುರಸಭೆ ಮಾಜಿ ಅಧ್ಯಕ್ಷ ಜಮೀಲ್ ಅಹಮ್ಮದ್, ಮಾಜಿ ಸದಸ್ಯ ಜಮೀಲ್ ಪಾಷಾ, ಎಪಿಎಂಸಿ ಅಧ್ಯಕ್ಷ ಅಂಬರೀಷ್, ಶಕೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುಟ್ಟರಾಜು, ದೇವರಾಜು, ಮಾರ್ಕಂಡೇಯ, ಮಾದೇಗೌಡ, ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News