ಕೋಮುವಾದಿ ರಾಜಕಾರಣದ ಬಗ್ಗೆ ಎಚ್ಚರವಿರಲಿ: ಪ್ರಕಾಶ್ ರೈ

Update: 2018-04-21 16:04 GMT

ಮೈಸೂರು,ಎ.21: ರಾಜ್ಯದಲ್ಲಿ ಕೋಮುವಾದಿಗಳ ರಾಜಕಾರಣ ಬೇಡ. ಧರ್ಮ, ಜಾತಿ ಹೆಸರಿನಲ್ಲಿ ರಾಜಕೀಯ ಮಾಡುವವರಿಂದ ಎಚ್ಚರಿಕೆ ಅವಶ್ಯ. ಸಾಮರಸ್ಯದಿಂದ ಕೂಡಿ ಬಾಳುವಂತಹ ಪ್ರತಿನಿಧಿಗಳನ್ನು ಆಯ್ಕೆ ಮಾಡಿ. ಈ ಬಗ್ಗೆ ಜಾಗೃತರಾಗಿ ಎಂದು ಬಹುಭಾಷಾ ನಟ ಪ್ರಕಾಶ್ ರೈ ಮನವಿ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು. ನಾನೊಬ್ಬ ದೇಶದ ಜವಾಬ್ದಾರಿಯುತ ಪ್ರಜೆಯಾಗಿ, ರಾಜಕೀಯ ಪರಿಸ್ಥಿತಿಯಲ್ಲಿ ನನ್ನ ಅನಿಸಿಕೆ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ನಿಟ್ಟಿನಲ್ಲಿ ಜಸ್ಟ್ ಆಸ್ಕಿಂಗ್ ಬಗ್ಗೆ ರಾಜ್ಯಾದ್ಯಂತ ಜಾಗೃತಿ ಮೂಡಿಸುತ್ತಿರುವೆ. ನಾನು ಯಾವುದೇ ಪಕ್ಷದ ಪರವಾಗಿ ಮತ ಕೇಳುತ್ತಿಲ್ಲ. ಅದು ನನಗೇ ಬೇಕಾಗಿಯೂ ಇಲ್ಲ. ಮತ ಹಾಕುವುದು ಮತದಾರರ ವಿವೇಚನೆಗೆ ಬಿಟ್ಟದ್ದು. ಆದರೂ ಜಾಗೃತರಾಗಿ ಮತ ಚಲಾಯಿಸುವ ಬಗ್ಗೆ ಪ್ರಾಮುಖ್ಯತೆ ನೀಡಿ ಎಂದು ತಿಳಿಸಿದರು.

ಯಾರ ಪರ-ವಿರೋಧವಿಲ್ಲದೇ ಕಲಾವಿದನಾಗಿ, ಜನಸಾಮಾನ್ಯನಾಗಿ ಅಭಿಪ್ರಾಯ ಮಂಡಿಸುತ್ತಿರುವೆ. ಕೆಲವೊಬ್ಬರಾದರೂ ಜಾಗೃತರಾಗುತ್ತಾರೆ ಎಂಬ ಆಶಯದೊಂದಿಗೆ ನಾನು 'ಜಸ್ಟ್ ಆಸ್ಕಿಂಗ್' ಅಭಿಯಾನವನ್ನು ಪ್ರಾರಂಭಿಸಿದ್ದೇನೆ ಎಂದರು.

ಜಸ್ಟ್ ಆಸ್ಕಿಂಗ್ ರಾಜಕೀಯ ವೇದಿಕೆಯಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇದರಿಂದ ಪ್ರೇರಣೆಗೊಂಡು ನಾಯಕರಾಗಿ ಆಯ್ಕೆಯಾದರೆ ಅವರು ವಿರೋಧ ಪಕ್ಷದವರೇ ಆಗುವರು ಎನ್ನುವುದು ನನ್ನ ಅಭಿಪ್ರಾಯ. ಜೂನ್ ನಂತರ ಕಾರ್ಯಚಟುವಟಿಕೆ ಆರಂಭಿಸಿ ರಾಜ್ಯಾಧ್ಯಂತ ಕಮ್ಮಟ, ಸ್ಪರ್ಧೆಗಳ ಮೂಲಕ ಜನಸಾಮಾನ್ಯರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ವೇದಿಕೆ ಕೆಲಸ ಮಾಡಲಿದೆ ಎಂದರು.

ನನಗೆ, ಎಡ-ಬಲ ಬಗ್ಗೆ ನಂಬಿಕೆಯಿಲ್ಲ. ಜಾತಿ ರಾಜಕೀಯ, ಕೋಮುದಳ್ಳುರಿ ಇಂತಹ ಘಟನೆಗಳಿಂದ ರಾಜ್ಯದಲ್ಲಿ ಮತ್ತು ದೇಶದಲ್ಲಿ ಭಯದ ವಾತಾವರಣ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಭಾರತವು ಹಲವು ಧರ್ಮಗಳ ದೇಶ.ಧರ್ಮವಿಲ್ಲದೇ ದೇಶದ ಕಲ್ಪನೆ ಸಾಧ್ಯವಿಲ್ಲ. ಅವರವರ ಧರ್ಮವನ್ನು ಅವರು ಪಾಲಿಸಿ ಸಮಾನತೆ ಬದುಕು ಅವಕಾಶ ನೀಡುವ ಸರ್ಕಾರ ಧರ್ಮಾತೀತವಾಗಿರಬೇಕು., ನಾನು ಹಿಂದೂ ವಿರೋಧಿ ಅಲ್ಲವೇ ಅಲ್ಲ, ಕೇವಲ ಹಿಂದೂ ಧರ್ಮ ಉಳಿಸುವ ಹೆಸರಿನಲ್ಲಿ ಕೋಮುವಾದ ನಡೆಸುತ್ತಿರುವವರನ್ನು ವಿರೋಧಿಸುವೆ ಎಂದರು.

ಕಲ್ಲು ಹೊಡೆಯುವುದು, ಗಾಡಿ ತಡೆ ಹಾಕುವುದು, ನೀವು ಹೀಗೆ ಮಾತನಾಡಿದರೆ ಬಿಜೆಪಿಯವರು ಅಧಿಕಾರಕ್ಕೆ ಬಂದರೆ ನೀವು ಹೀಗೆ ಇರುವುದಕ್ಕೆ ಆಗಲ್ಲ ಅನೋದೆ ನನ್ನ ಭಯ. ನನ್ನ ಹೆಂಡತಿ ಮಕ್ಕಳ ಬಗ್ಗೆ, ತಾಯಿ ರಕ್ಷಣೆ ಬಗ್ಗೆ ಭಯವಿದೆ  ಹಾಗಾಗಿ ಮುನ್ನೆಚ್ಚರಿಕೆಯಿಂದ ಈಚೆಗೆ ಬಾಡಿಗಾರ್ಡ್ ಗಳನ್ನು ಅಳವಡಿಸಿಕೊಂಡೆ ಎಂದರು.

ನನ್ನ ಜಾಗೃತಿ ಕಾರ್ಯಕ್ರಮಕ್ಕೆ ಸಮಾಜದಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ನಾನು ಧ್ವನಿ ಇಲ್ಲದವರ ಧ್ವನಿಯಾಗಿರುವೆ. ಹಲವರ ಧ್ವನಿಯಾಗಿ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವೆ. ಸ್ವಾತಂತ್ರ್ಯ ನಂತರ ಎಲ್ಲಾ ರಾಜಕೀಯ ಪಕ್ಷಗಳಿಂದಲೂ ನಂಬಿಕೆ ದ್ರೋಹ ನಡೆದಿದೆ. ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರುವುದು ಅಥವಾ ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಚಿಂತನೆ ಉಂಟಾಯಿತು. ಆದರೆ ಜನರ ಧ್ವನಿಯಾದರೆ ಯಾರೇ ಅಧಿಕಾರಕ್ಕೆ ಬಂದರು ಕೆಲಸ ಮಾಡಿಸುವ ವಿಶ್ವಾಸದಲ್ಲಿ ಜಸ್ಟ್ ಆಸ್ಕಿಂಗ್ ವೇದಿಕೆ ನಿರ್ಮಿಸಿದೆ ಎಂದರು.

ಆಸ್ತಿ ಅಥವಾ ಕೌಟುಂಬಿಕ ಕಲಹದಿಂದ ಗೌರಿ ಲಂಕೇಶ್ ಕೊಲೆಯಾಗಿಲ್ಲ. ಯಾವ ಶಕ್ತಿಯ ವಿರುದ್ಧ ಹೋರಾಡಿದರೂ ಅದೇ ಶಕ್ತಿಯೇ ಅವರನ್ನು ಹತ್ಯೆ ಮಾಡಿದೇ ಎನ್ನುವುದು ಸ್ಪಷ್ಟ. ಎಲ್ಲಾ ರಾಜ್ಯದಲ್ಲಿಯೂ ಪಕ್ಷಗಳಲ್ಲಿಯೂ ನನಗೆ ಗೆಳೆಯರಿದ್ದಾರೆ. ಸಿದ್ದರಾಮಯ್ಯನವರ ಬಗ್ಗೆ ನನಗೆ ವೈಯುಕ್ತಿಕ ಒಲವಿದೆ ಹಾಗಂತ ಕಾಂಗ್ರೆಸ್ ಗೆ ಮತ ನೀಡಿ ಎಂದು ನಾನು ಹೇಳುವುದಿಲ್ಲ ಎಂದರು.

ಕಾವೇರಿಯನ್ನು ರಾಜಕೀಯದಿಂದ ಹೊರ ತೆಗೆಯರಿ. ಹೀಗೆ ಆದರೆ ಕಾವೇರಿಯ ನೀರೇ ಇರೋಲ್ಲ. ಆಗ ಯಾವ ಹೋರಾಟ ಮಾಡ್ತೀರಾ? ನಾಯಕರಿಗೆ ಸಮಸ್ಯೆ ಪರಿಹಾರ ಆಸಕ್ತಿಯಿಲ್ಲ.  ಜನರನ್ನು ಉದ್ರೇಕಿಸುವ ಕೆಲಸ ರಾಜಕಾರಣಿಗಳು ಮಾಡುತ್ತಾರೆ ಹೊರತು, ಅವರು ಹೇಳಿಕೆ ನೀಡಿದಾಕ್ಷಣ ಸಂಯಮ ಮೀರಬಾರದು. ನದಿಯ ಮೇಲಿರುವ ಒತ್ತಡವೇನು? ಕಾವೇರಿಯಲ್ಲಿ ಅಷ್ಟು ನೀರಿದೆಯೋ? ಅಂತರ್ಜಲವಿಲ್ಲ. ಚಿಕ್ಕ ಚಿಕ್ಕ ಕೆರೆಗಳನ್ನು ಕಲುಷಿತಗೊಳಿಸಿದ್ದೇವೆ, ನಂತರ ಈಗ ಕಾವೇರಿ ಸಮಸ್ಯೆಯನ್ನು ತೆಗೆದುಕೊಂಡಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News