ಮತದಾನ ಜಾಗೃತಿಗಾಗಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ರಾಯಭಾರಿ: ಮೈಸೂರು ಜಿಲ್ಲಾಧಿಕಾರಿ

Update: 2018-04-21 16:48 GMT

ಮೈಸೂರು,ಎ.21: ಜಿಲ್ಲೆಯಲ್ಲಿ ಮತದಾನ ಜಾಗೃತಿಗಾಗಿ ಕ್ರಮ ಕೈಗೊಳ್ಳಲಾಗಿದ್ದು, ಮತದಾನದ ಜಾಗೃತಿಗಾಗಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ರನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಪಣ್ ಜೈನ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳ ನ್ನು ಒದಗಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಅಕ್ರಮ ಲಿಕ್ಕರ್ ಹಾಗೂ ಚಿನ್ನಾಭರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಸಹಕಾರ ಸಂಘಗಳ ಮೂಲಕ ಹಣ ಹಂಚುವ ಸಾಧ್ಯತೆ ಇರುವುದರಿಂದ ಸಂಘ ಸಂಸ್ಥೆಗಳ ಮೇಲೆ ನಿಗಾವಹಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ರೂ. 7.13 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಏಳು ಸಾವಿರದ ಐನೂರು ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯಿಂದ ಸರಬರಾಜು ಆಗುವ ಸರಕುಗಳ ಮೇಲೆ ನಿಗಾವಹಿಸಲಾಗಿದೆ. ಪಾನ್ ಬ್ರೋಕರ್ ಹಾಗೂ ಮನಿ ಲ್ಯಾಂಡರ್ ಗಳನ್ನು ಹಣ ಹಂಚಲು ಬಳಸಲಾಗುತ್ತಿದೆ ಎಂಬ ಆರೋಪ ಇದೆ. ಜಿಲ್ಲೆಯ ಪಾನ್ ಬ್ರೋಕರ್ ಹಾಗೂ ಮನಿಲ್ಯಾಂಡರ್ಸ್ ಜೊತೆ ಸಭೆ ನಡೆಸಿ ಎಚ್ಚರಿಕೆ ನೀಡಿದ್ದೇವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಎಲ್ಲೆಡೆ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ವಿಕಲಚೇತನ ಮತದಾರರ ಅನುಕೂಲಕ್ಕಾಗಿ ವಿಶೇಷವಾಗಿ ವೀಲ್ ಚೇರ್ ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಲಾ 1ರಂತೆ ವಿಕಲಚೇತನರಿಂದಲೇ ನಿರ್ವಹಿಸಲ್ಪಡುವ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿಯೂ ರ್ಯಾಂಪ್, ಕುಡಿಯುವ ನೀರು, ವಿದ್ಯುತ್ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. 11ವಿಧಾಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 110 ಇವಿಎಂ ಮತ್ತು ವಿವಿಪ್ಯಾಟ್ ಗಳ ಮೂಲಕ ಪ್ರತಿ ಮತಗಟ್ಟೆ ಹಂತದಲ್ಲಿ ಜಿಲ್ಲಾ ಮತ್ತು ತಾಲೂಕುಗಳ ಸ್ವೀಪ್ ಸಮಿತಿ ವತಿಯಿಂದ ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ ಎಂದರು.

ಕಡ್ಡಾಯ ಮತ್ತು ನೈತಿಕ ಮತದಾನದ ಬಗ್ಗೆ ಚುನಾವಣಾ ಆಯೋಗದಿಂದ ಹೊರಡಿಸಿರುವ ಪೋಸ್ಟರ್ ಗಳನ್ನು ಕೆ.ಎಸ್.ಆರ್.ಟಿ.ಸಿ ಬಸ್ ಗಳ ಮೇಲೆ ಪ್ರಚುರಪಡಿಸಲಾಗಿದೆ. ಅಲ್ಲದೇ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ, ಸರ್ಕಾರಿ ವೈದ್ಯರು ನೀಡುವ ಔಷಧಿ ಚೀಟಿಯ ಮೇಲೆ, ಬ್ಯಾಂಕ್ ಚಲನ್ ಗಳ ಮೇಲೆ ಕಡ್ಡಾಯ ಮತದಾನದ ಬಗ್ಗೆ ಘೋಷಣೆಗಳನ್ನು ಮುದ್ರಿಸಲು ಕ್ರಮವಹಿಸಲಾಗುತ್ತಿದೆ. ಮೈಸೂರು ನಗರ ಪ್ರದೇಶಗಳಲ್ಲಿ ಯುವಜನ ಸೇವೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಇತರೆ ಸರ್ಕಾರಿ ಇಲಾಖೆಗಳ ವತಿಯಿಂದ ಎ.24 ರಂದು ಸಂಜೆ ಬೃಹತ್ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಪರಜಿಲ್ಲಾಧಿಕಾರಿ ಟಿ.ಯೋಗೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News